ಗುರುವಾರ , ನವೆಂಬರ್ 14, 2019
19 °C
ಘಟನೆ ನಡೆದ 24 ತಾಸುಗಳಲ್ಲೇ ಆರೋಪಿಗೆ ಗುಂಡೇಟು

ನಂದಿನಿಲೇಔಟ್‌ನಲ್ಲಿ ಯುವಕರಿಬ್ಬರ ಕೊಲೆ

Published:
Updated:

ಬೆಂಗಳೂರು: ನಂದಿನಿಲೇಔಟ್‌ನ ಗಣೇಶ ಬ್ಲಾಕ್‌ನಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳು ಯುವಕರಿಬ್ಬರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಈ ಘಟನೆ ನಡೆದ 24 ತಾಸುಗಳಲ್ಲಿ ಪ್ರಕರಣದ ಪ್ರಮುಖ ಆರೋಪಿ ಯುವರಾಜ ಅಲಿಯಾಸ್ ಬಾಪು (21) ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.ಆರೋಪಿ ಬಾಪು ಮತ್ತು ಆತನ ನಾಲ್ಕೈದು ಮಂದಿ ಸಹಚರರು, ಸೋಮೇಶ್ವರನಗರದ ನಿವಾಸಿಗಳಾದ ಧರಣೇಶ್ (25) ಮತ್ತು ಪರಿಮಳಾನಗರದ ಬಾಬು (25) ಎಂಬುವರನ್ನು ಶನಿವಾರ ರಾತ್ರಿ ಕೊಲೆ ಮಾಡಿದ್ದರು. ಘಟನೆ ಸಂಬಂಧ ನಂದಿನಿಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದರು.`ಆರೋಪಿಗಳ ಪತ್ತೆಗೆ ನಂದಿನಿಲೇಔಟ್, ಮಹಾಲಕ್ಷ್ಮಿ ಲೇಔಟ್ ಮತ್ತು ಯಶವಂತಪುರ ಠಾಣೆ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ 3 ತಂಡಗಳನ್ನು ರಚಿಸಲಾಗಿತ್ತು. ಬಾಪು, ಲಗ್ಗೆರೆ ಬ್ರಿಡ್ಜ್ ಸಮೀಪದ ಬಿಎಚ್‌ಇಎಲ್ ಜಂಕ್ಷನ್ ಬಳಿ ಇರುವ ಬಗ್ಗೆ ಭಾನುವಾರ ಸಂಜೆ ಮಾಹಿತಿ ಬಂತು. ಆ ಮಾಹಿತಿ ಆಧರಿಸಿ ಯಶವಂತಪುರ ಇನ್‌ಸ್ಪೆಕ್ಟರ್ ಪುರುಷೋತ್ತಮ್, ಕಾನ್‌ಸ್ಟೆಬಲ್‌ಗಳಾದ ಉಮೇಶ್ ಮತ್ತು ರಾಘವೇಂದ್ರ ಸ್ಥಳಕ್ಕೆ ತೆರಳಿದರು. ಈ ವೇಳೆ ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ ಬಾಪುವನ್ನು ಕಾನ್‌ಸ್ಟೆಬಲ್‌ಗಳು ಅಡ್ಡಗಟ್ಟಿದರು. ಆಗ ಆರೋಪಿ, ಚಾಕುವಿನಿಂದ ಸಿಬ್ಬಂದಿಗೆ ಗಾಯಗೊಳಿಸಿ ತಪ್ಪಿಸಿಕೊಳ್ಳಲು ಮುಂದಾದಾಗ ಪುರುಷೋತ್ತಮ್ ಬಾಪು ಕಾಲಿಗೆ  ಗುಂಡು ಹೊಡೆದರು' ಎಂದು ಉತ್ತರ ವಿಭಾಗದ ಡಿಸಿಪಿ ಎಸ್.ಎನ್ ಸಿದ್ದರಾಮಪ್ಪ `ಪ್ರಜಾವಾಣಿ'ಗೆ ತಿಳಿಸಿದರು.ಆರೋಪಿ ಮೇಲೆ ಮೂರು ಸುತ್ತು ಗುಂಡು ಹಾರಿಸಲಾಯಿತು. ಮೊದಲ ಗುಂಡು ಗಾಳಿಯಲ್ಲಿ ತೂರಿದರೆ, ಎರಡು ಗುಂಡುಗಳು ಆತನ ಎಡಗಾಲನ್ನು ಹೊಕ್ಕಿವೆ. ಆತನನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಸಿಬ್ಬಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಸ್ನೇಹಿತರನ್ನು ಕೊಂದಿದ್ದರು: ಬಾಪು ಹಾಗೂ ಆತನ ಸಹಚರರು ಶನಿವಾರ ರಾತ್ರಿ ತಮ್ಮ ಸ್ನೇಹಿತರಾದ ಧರಣೇಶ್ ಮತ್ತು ಬಾಬು ಎಂಬುವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು.ಮಹಾಲಕ್ಷ್ಮಿಲೇಔಟ್‌ನ ಖಾಸಗಿ ಕಾಲೇಜಿನಲ್ಲಿ ಬಿ.ಇ ಓದುತ್ತಿದ್ದ ಧರಣೇಶ್, ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದ. ಬಾಬು, ಆರ್‌ಎಂಸಿ ಯಾರ್ಡ್‌ನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.ಗಣೇಶ ಬ್ಲಾಕ್‌ನ ಬಾರ್‌ನಲ್ಲಿ ಸ್ನೇಹಿತರೊಂದಿಗೆ ರಾತ್ರಿ ಮದ್ಯಪಾನ ಮಾಡಿದ ಧರಣೇಶ್ ಮತ್ತು ಬಾಬು, ಬಾರ್‌ನಿಂದ ಹೊರ ಬಂದು ಮನೆಗೆ ಹೋಗುವ ಯತ್ನದಲ್ಲಿದ್ದಾಗ ಬಾಪು ಸೇರಿದಂತೆ ಐದಾರು ಮಂದಿ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದರು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಇಬ್ಬರಿಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ತೀವ್ರ ರಕ್ತ ಸ್ರಾವವಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.`ಧರಣೇಶ್ ಮತ್ತು ಬಾಬು ಅವರ ಎದುರಾಳಿ ಗುಂಪಿನ ಬಾಪು, ಸಹಚರರೊಂದಿಗೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳ ವಿಚಾರಣೆಯಿಂದ ಗೊತ್ತಾಯಿತು. ಆತನ ವಿರುದ್ಧ ಮಹಾಲಕ್ಷ್ಮಿಲೇಔಟ್, ನಂದಿನಿಲೇಔಟ್ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ ಸೇರಿದಂತೆ 9 ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)