`ನಂದೀಶ' ವಿಶ್ವಾಸ

7

`ನಂದೀಶ' ವಿಶ್ವಾಸ

Published:
Updated:
`ನಂದೀಶ' ವಿಶ್ವಾಸ

ನಟನೆಯ ಜೊತೆಗೆ ಕೋಮಲ್ ನಿರ್ಮಾಣದ ಹೊಣೆಯನ್ನೂ ನಿಭಾಯಿಸಿರುವ `ನಂದೀಶ' ಚಿತ್ರ ಇಂದು (ಡಿ.28) ತೆರೆಕಾಣುತ್ತಿದೆ. ಮಲಯಾಳಂನ ಯಶಸ್ವಿ ಚಿತ್ರ `ತಿಲಕಂ'ನ ಕನ್ನಡ ಅವತರಣಿಕೆ `ನಂದೀಶ'.

`ಗೋವಿಂದಾಯ ನಮಃ'ದ ಗೆಲುವಿನ ಗುಂಗಿನಲ್ಲಿರುವ ಕೋಮಲ್ `ನಂದೀಶ'ನ ಯಶಸ್ಸಿನ ಬಗ್ಗೆ ಆತ್ಮವಿಶ್ವಾಸದಿಂದಿದ್ದಾರೆ. ಜನರಲ್ಲೂ ಅದೇ ರೀತಿಯ ನಿರೀಕ್ಷೆ ಇದೆ.

ಪ್ರಚಾರಕ್ಕೆ ಹೋದಲೆಲ್ಲಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂಬ ಖುಷಿ ಕೋಮಲ್ ಅವರದು. ಓಂ ಸಾಯಿಪ್ರಕಾಶ್ ಚಿತ್ರಕ್ಕೆ ಆ್ಯಕ್ಷನ್, ಕಟ್ ಹೇಳಿದ್ದಾರೆ. ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗುತ್ತಿರುವ ಏಕೈಕ ಕನ್ನಡ ಚಿತ್ರ, ಕ್ರಿಸ್‌ಮಸ್ ರಜೆ, ಪರಭಾಷಾ ಚಿತ್ರಗಳ ದಾಳಿಯ ಭಯವಿಲ್ಲ, ಉತ್ತಮ ಮೊತ್ತಕ್ಕೆ ಮಾರಾಟವಾಗಿರುವ ಉಪಗ್ರಹ ಹಕ್ಕು...

ಹೀಗೆ ಹಲವು ಬಗೆಗಳಲ್ಲಿ `ನಂದೀಶ' ಸುರಕ್ಷಿತವಾಗಿದ್ದಾನೆ. ಈ ಲಾಭದ ಪ್ರತಿಫಲ ಪ್ರೇಕ್ಷಕನಿಂದ ದೊರಕುತ್ತದೆ ಎನ್ನುವ ವಿಶ್ವಾಸ ಅವರಲ್ಲಿದೆ. ಪ್ರತಿ ಸಿನಿಮಾದಲ್ಲೂ ಹೊಸತನವಿರಬೇಕು. `ನಂದೀಶ'ದಲ್ಲಿ ಇದುವರೆಗೆ ನೀವು ನೋಡಿರದ ಕೋಮಲ್‌ರನ್ನು ನೋಡುತ್ತೀರಿ.

ಇದು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಸಿನಿಮಾ ಎನ್ನುತ್ತಾರೆ ಕೋಮಲ್. ಅವರ ಎಂದಿನ ಕಾಮಿಡಿ ಜೊತೆಗೆ ಗೋಕಾಕ್ ಜಲಪಾತದ ಬಳಿ ಅದ್ಭುತವಾಗಿ ಸೆರೆ ಹಿಡಿದಿರುವ ಸಾಹಸ ಸನ್ನಿವೇಶ ಮತ್ತು ಕಾಡಿಸುವ ಗುಣದ ಸೆಂಟಿಮೆಂಟ್ ಚಿತ್ರದಲ್ಲಿ ಅಡಕವಾಗಿವೆಯಂತೆ.`ನಂದೀಶ' ಕೋಮಲ್ ಅವರಿಗೆ `ತವರಿಗೆ ಬಾ ತಂಗಿ' ಚಿತ್ರದ ನಟನೆಗೆ ಪ್ರಶಸ್ತಿ ತಂದುಕೊಟ್ಟ ಪಾತ್ರದ ಹೆಸರು. ಆ ಚಿತ್ರವನ್ನೂ ಓಂ ಸಾಯಿಪ್ರಕಾಶ್ ನಿರ್ದೇಶಿಸಿದ್ದರು. ಆ ಭಾವನಾತ್ಮಕ ನಂಟಿನಿಂದಾಗಿಯೇ ಈ ಚಿತ್ರಕ್ಕೆ `ನಂದೀಶ' ಎಂದು ನಾಮಕರಣ ಮಾಡಿರುವುದು. ಇಲ್ಲಿ ನಂದೀಶ ಮುಗ್ಧತೆಯ ಪ್ರತೀಕ. ತಾನೇ ನಂದೀಶ ಎಂಬುದು ಗೊತ್ತಿರದ ಸನ್ನಿವೇಶದಲ್ಲಿ ಆತ ಬದುಕುತ್ತಿರುತ್ತಾನೆ.

ಇದೇ ಚಿತ್ರದ ತಿರುಳು ಎಂದು ಕುತೂಹಲ ಮೂಡಿಸಿದರು ಕೋಮಲ್.ಅಂದಹಾಗೆ, ಈ ಚಿತ್ರದ ಮೂಲಕ ಕೋಮಲ್ ತಮ್ಮದೇ ಆದ ಆಡಿಯೊ ಕಂಪೆನಿಯನ್ನೂ ತೆರೆದಿದ್ದಾರೆ. `ಗೋವಿಂದಾಯ ನಮಃ' ಅದರ ಹೆಸರು. `ಆಡಿಯೊ ಕಂಪೆನಿಗಳು ನಷ್ಟವಾಗುತ್ತಿದೆ ಎಂದು ಕುಂಟುನೆಪ ಹೇಳುತ್ತ ಉಚಿತವಾಗಿ ಹಾಡುಗಳನ್ನು ಪಡೆದು ಲಾಭ ಮಾಡಿಕೊಳ್ಳುತ್ತಿವೆ' ಎಂದು ಕಿಡಿಕಾರುವ ಕೋಮಲ್, ಆಡಿಯೊ ಕಂಪೆನಿಗಳಲ್ಲಿ ಲಾಭವಿದೆ ಎಂಬುದನ್ನು ಈಗಾಗಲೇ ಕಂಡುಕೊಂಡಿದ್ದಾರೆ.

ಹಂಸಲೇಖ ಸಂಗೀತ ನೀಡಿರುವ ಹಾಡುಗಳು ಸಾಕಷ್ಟು ಜನಪ್ರಿಯತೆ ಗಳಿಸಿವೆ. ರಿಂಗ್‌ಟೋನ್‌ಗಳಿಗೂ ಉತ್ತಮ ಬೇಡಿಕೆ ಇದೆ ಎನ್ನುತ್ತಾರೆ ಅವರು. ಇದು ಆರಂಭ. ಮುಂದಿನ ದಿನಗಳಲ್ಲಿ ಮತ್ತಷ್ಟು ಚಿತ್ರಗಳು ಇದರೊಂದಿಗೆ ಸೇರಿಕೊಳ್ಳಲಿವೆ. `ಸದ್ಯ ಪಾಯ ತೆಗೆದಿದ್ದೇನೆ ಅಷ್ಟೆ, ಮನೆ ಕಟ್ಟುವ ಕೆಲಸ ಮುಂದೆ ಇದೆ' ಎನ್ನುವುದು ಕೋಮಲ್ ಮಾತು.ಈ ಚಿತ್ರದ ಮತ್ತೊಂದು ವಿಶೇಷ ಕೋಮಲ್-ಪರೂಲ್ ಜೋಡಿ. `ಗೋವಿಂದಾಯ ನಮಃ'ದಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ ಈ ಜೋಡಿ ಇಲ್ಲಿಯೂ ಮೋಡಿ ಮಾಡಲಿದೆ ಎಂಬ ವಿಶ್ವಾಸ ಕೋಮಲ್‌ರದು. ಇಬ್ಬರ ನಡುವಿನ ಕೆಮಿಸ್ಟ್ರಿ ಚೆನ್ನಾಗಿದೆ ಎನ್ನುವ ಕೋಮಲ್ ಮತ್ತೊಬ್ಬ ನಾಯಕಿ ಮಾಳವಿಕಾ ಅವರ ನಟನೆಯನ್ನೂ ಮೆಚ್ಚಿಕೊಂಡಿದ್ದಾರೆ. ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸಿರುವ ಅವರು ಚಿತ್ರಕ್ಕಾಗಿ ತುಸು ಹೆಚ್ಚೇ ಖರ್ಚು ಮಾಡಿದ್ದಾರೆ.“ಸುಮಾರು 130 ಚಿತ್ರಮಂದಿರಗಳಲ್ಲಿ `ನಂದೀಶ' ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರಗಳಿಗೆ ಮೊದಲನೆ ಶತ್ರು ಚಿತ್ರಮಂದಿರಗಳ ಕೊರತೆ. ನಂತರ ಪರಭಾಷಾ ಚಿತ್ರಗಳು. ಈಗ ಅವುಗಳ ಸವಾಲು ಹೆಚ್ಚಾಗಿ ಇಲ್ಲ. ರಜಾದಿನದ ಗುಂಗಿನಲ್ಲಿರುವ ಜನರಿಗೆ `ನಂದೀಶ' ಕ್ರಿಸ್‌ಮಸ್ ಮತ್ತು ಹೊಸವರ್ಷದ ಉಡುಗೊರೆಯಾಗಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ಕೋಮಲ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry