ಭಾನುವಾರ, ಅಕ್ಟೋಬರ್ 20, 2019
27 °C

ನಂದೇ ಕರೋಡ್‌ಪತಿ

Published:
Updated:
ನಂದೇ ಕರೋಡ್‌ಪತಿಹಾಡು, ನೃತ್ಯ, ಆಟ... ಹೀಗಿದ್ದ ರಿಯಾಲಿಟಿ ಶೋಗಳ ಕಾಲ ಬದಲಾಗಿದೆ. ಈಗೇನಿದ್ದರೂ ಹಣದ ಕಂತೆಗಳನ್ನೆಣಿಸುವ ಕಾರ್ಯಕ್ರಮಗಳದ್ದೇ ಸುಗ್ಗಿ. ಸಾಮಾನ್ಯ ಜನರಲ್ಲೂ ಕೋಟ್ಯಧಿಪತಿಯಾಗುವ ಕನಸು. ಅದನ್ನು ಬಿತ್ತಿದ ಹಿಂದಿಯ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ `ಕೌನ್ ಬನೇಗಾ ಕರೋಡ್‌ಪತಿ~ ಅನೇಕ ಭಾಷೆಗಳಲ್ಲಿ ಮೂಡಿಬರುತ್ತಿದೆ.

 

ತಮಿಳಿನಲ್ಲಿ ನಟ ಸೂರ್ಯ ನಡೆಸಿಕೊಡುವ ಕಾರ್ಯಕ್ರಮ ಜನಪ್ರಿಯತೆ ಗಳಿಸಿದೆ. ಮಲಯಾಳಂನಲ್ಲಿ ಮೋಹನ್‌ಲಾಲ್ ಸಹ ರಿಯಾಲಿಟಿ ಶೋ ನಡೆಸಿಕೊಡುವರೆಂಬ ಸುದ್ದಿಯಿದೆ. ಈಗ ಕನ್ನಡದ ಸರದಿ. ಸುವರ್ಣ ವಾಹಿನಿಗಾಗಿ ಅಮಿತಾಬ್‌ರಂತೆ ಹಾಟ್ ಸೀಟಿನಲ್ಲಿ ಕುಳಿತು ಕಾರ್ಯಕ್ರಮ ನಡೆಸಿಕೊಡಲಿರುವವರು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್.`ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಸೂರ್ಯ- ಈ ಖ್ಯಾತನಾಮರ ಹಾದಿಯಲ್ಲೇ ಸಾಗಿದರೂ ಕಿಂಚಿತ್ತೂ ಅವರನ್ನು ಅನುಕರಣೆ ಮಾಡುವುದಿಲ್ಲ. ಇದು ಸಂಪೂರ್ಣ ನನ್ನದೇ ಶೈಲಿ~ ಎಂದು ಮುಗುಳ್ನಗುವ ಪುನೀತ್ ಕೋಟ್ಯಧಿಪತಿಯಾಗುವ ಜನಸಾಮಾನ್ಯರ ಕನಸಿನ ರಥಕ್ಕೆ ಸಾರಥಿಯಾಗುವ ಈ ಕೆಲಸ ತಮ್ಮ ಮುಂದಿರುವ ದೊಡ್ಡ ಸವಾಲು ಎಂಬುದನ್ನು ಒಪ್ಪಿಕೊಳ್ಳುತ್ತಾರೆ.`ನಾನೂ ಒಬ್ಬ ಸಾಮಾನ್ಯ ಮನುಷ್ಯ. ಹೀಗಾಗಿ ಸಾಮಾನ್ಯ ಜನರೊಂದಿಗೆ ಮಾತನಾಡುವುದು ಕಷ್ಟವಲ್ಲ. ಆದರೆ ಪ್ರಶ್ನೆ ಮತ್ತು ಅದರ ಕುರಿತ ಮಾಹಿತಿ ತಿಳಿದುಕೊಂಡು ನಿರೂಪಿಸುವುದು ಸುಲಭವಲ್ಲ~ ಎಂಬುದು ಪುನೀತ್ ಅಭಿಪ್ರಾಯ. ಹೀಗಾಗಿಯೇ `ಅಣ್ಣಾ ಬಾಂಡ್~ ಚಿತ್ರದ ಚಿತ್ರೀಕರಣಕ್ಕೆ ಒಂದು ವಾರ ರಜೆ ಹಾಕಿ ಮೂರು ದಿನಗಳಿಂದ ಸತತ ತಾಲೀಮಿನಲ್ಲಿ ಅವರು ನಿರತರಾಗಿದ್ದಾರೆ. ಜನಪ್ರಿಯ ಕಾರ್ಯಕ್ರಮವೊಂದನ್ನು ತಮ್ಮದೇ ಶೈಲಿಯಲ್ಲಿ ವಿಭಿನ್ನವಾಗಿ ನಡೆಸಿಕೊಡಲು ಉತ್ಸುಕರಾಗಿರುವ ಪುನೀತ್ ಅದರ ಕುರಿತು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದು ಹೀಗೆ.

ಕಾರ್ಯಕ್ರಮದ ಸ್ವರೂಪ ಹೇಗಿರುತ್ತದೆ?

ಇದು ಹಿಂದಿ ಮತ್ತು ತಮಿಳಿನಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಕಾರ್ಯಕ್ರಮ. ಈ ಕಾರ್ಯಕ್ರಮದ ರೂವಾರಿ `ಬಿಗ್ ಸಿನರ್ಜಿ~ ತಂಡವೇ ಕನ್ನಡದಲ್ಲಿ ಕಾರ್ಯಕ್ರಮ ರೂಪಿಸಿದೆ. ಆದರೆ ಇಲ್ಲಿನ ಜನರ ಭಾವನೆ, ಜೀವನ ಶೈಲಿ, ಸಂಸ್ಕೃತಿಗೆ ಅನುಗುಣವಾಗಿ ಕನ್ನಡತನ ಉಳಿಸಿಕೊಳ್ಳುವುದು ನಮ್ಮ ಗುರಿ. ಹೀಗಾಗಿ ಕಾರ್ಯಕ್ರಮದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದ್ದೇವೆ. ವಿಶೇಷ ಆಕರ್ಷಣೆಯಾಗಿ ಆಗಾಗ್ಗೆ ಸೆಲೆಬ್ರಿಟಿಗಳೂ ಭಾಗವಹಿಸಲಿದ್ದಾರೆ. ಮೊದಲ ಅವಧಿಯಲ್ಲಿ 80 ಕಂತುಗಳನ್ನು ಪ್ರಸಾರ ಮಾಡುವ ಉದ್ದೇಶವಿದೆ.ಕಿರುತೆರೆಯತ್ತ ಆಸಕ್ತಿ ಮೂಡಲು ಕಾರಣ?

ಕಾರ್ಯಕ್ರಮದ ಸ್ವರೂಪ ಇಷ್ಟವಾಯಿತು. ಅದರಲ್ಲೂ ಅಮಿತಾಬ್ ಬಚ್ಚನ್‌ರಂತಹ ಹಿರಿಯ ನಟರು ನಡೆಸಿಕೊಡುವಂತಹ ಕಾರ್ಯಕ್ರಮ ಇದಾಗಿದ್ದರಿಂದ ನನ್ನ ಪಾಲಿಗಿದು ದೊಡ್ಡ ಗೌರವ. ಕಿರುತೆರೆಯಲ್ಲಿ ಜನರೊಂದಿಗೆ ಬೆರೆತು ಕಾರ್ಯಕ್ರಮ ನಡೆಸುವುದು ಅದ್ಭುತ ಅನುಭವ.

ಅಮಿತಾಬ್ ಬಚ್ಚನ್‌ರನ್ನು ಭೇಟಿ ಮಾಡಿದ ಅನುಭವ ಹೇಗಿತ್ತು?

ಅದು ಮರೆಯಲಾಗದ ದಿನ. ನಮ್ಮ ಕುಟುಂಬದ ಬಗ್ಗೆ ಅಪಾರ ಪ್ರೀತಿ ಅಭಿಮಾನ ಹೊಂದಿರುವ ಅವರು ನನಗೆ ನಟನೆ ಬಗ್ಗೆ ಸಲಹೆ ಸೂಚನೆಗಳನ್ನೂ ನೀಡಿದರು. ಇಂತಹ ಕಾರ್ಯಕ್ರಮ ಮಾಡುವಾಗ ಆತ್ಮವಿಶ್ವಾಸವಿರಬೇಕೆಂಬ ಕಿವಿಮಾತು ಹೇಳಿದರು.

ನಟನೆ ಮತ್ತು ರಿಯಾಲಿಟಿ ಶೋ. ಎರಡರ ಮಧ್ಯೆ ಸಮಯ ಹೇಗೆ ಸರಿದೂಗಿಸುವಿರಿ?

ಇನ್ನೂ ಕಾರ್ಯಕ್ರಮ ಆರಂಭವಾಗಬೇಕಿದೆ. `ಅಣ್ಣಾ ಬಾಂಡ್~ ನಂತರ ಒಂದು ಸಿನಿಮಾಕ್ಕೆ ಸಿದ್ಧಗೊಳ್ಳಬೇಕಿದೆ. ಹೀಗಾಗಿ ಸಮಯ ಹೊಂದಾಣಿಕೆ ಬಗ್ಗೆ ಸದ್ಯಕ್ಕೆ ಆತಂಕವಿಲ್ಲ.

ಜನಪ್ರಿಯ ನಟ ಮತ್ತು ಜನಪ್ರಿಯ ಕಾರ್ಯಕ್ರಮ. ಎರಡರ ಭಾರ ಒಟ್ಟಿಗೆ ಇದೆ. ಹೇಗೆ ನಿಭಾಯಿಸುತ್ತೀರಿ?

ನಟನಾಗಿ ಬೆಳೆಯಬೇಕಿರುವುದು ಸಾಕಷ್ಟಿದೆ. ಜನಪ್ರಿಯ ಕಾರ್ಯಕ್ರಮ ಆಗಿರುವುದರಿಂದ ಸಿನಿಮಾಗಳಿಗಿಂತಲೂ ಹೆಚ್ಚು ಒತ್ತು ನೀಡಿ ತಯಾರಿ ನಡೆಸುತ್ತಿದ್ದೇನೆ. ಏಕೆಂದರೆ ಕಿರುತೆರೆಯಲ್ಲಿ ಇದು ಮೊದಲ ಅನುಭವ ಕೂಡ. ಜನಪ್ರಿಯತೆ ಮತ್ತು ಜನರ ನಿರೀಕ್ಷೆ ನನ್ನ ತಲೆಗೇರದಿದ್ದರೆ ಸಾಕು.

ಪವರ್‌ಸ್ಟಾರ್ ಇಮೇಜ್ ಈ ಕಾರ್ಯಕ್ರಮದಿಂದ ಹೆಚ್ಚುವುದೇ?

ಪವರ್‌ಸ್ಟಾರ್ ಇಮೇಜಿನ ನೆರಳಿನಿಂದಾಚೆ ಇದು ಪವರ್‌ಫುಲ್ ಜಾಬ್. ಜನ ಹೇಗೆ ಸ್ವೀಕರಿಸುತ್ತಾರೋ ಕಾದುನೋಡಬೇಕು.

ಹಿಂದಿಯ ಕಾರ್ಯಕ್ರಮ ಕನ್ನಡಕ್ಕೆ ಎಷ್ಟು ಪ್ರಸ್ತುತ?

ಕಾರ್ಯಕ್ರಮದ ಮೂಲ ಹಿಂದಿಯಾಗಿದ್ದರೂ ಇಲ್ಲಿ ಕಾಣುವುದು ಕನ್ನಡತನವನ್ನು. ಅನುಕರಣೆ ಇಲ್ಲಿಲ್ಲ. ಅಲ್ಲದೆ ನಮ್ಮೂರಿನ ಬಗ್ಗೆಯೇ ಹೆಚ್ಚಿನ ಪ್ರಶ್ನೆಗಳಿರುತ್ತವೆ. ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಹೀಗೆ. ಒಟ್ಟಿನಲ್ಲಿ ಇದು ಸಂಪೂರ್ಣ ಕನ್ನಡದ ಕಾರ್ಯಕ್ರಮ.

ಕಾರ್ಯಕ್ರಮ ಮುಗಿದ ಬಳಿಕ ಹಣ ವಾಪಸ್ ತೆಗೆದುಕೊಳ್ಳುತ್ತಾರೆ ಎಂಬ ಆರೋಪಗಳಿವೆ?

ಈ ಕಾರ್ಯಕ್ರಮ ಆ ರೀತಿಯಲ್ಲ. ಸಂಪೂರ್ಣ ಹಣವನ್ನು ವಿಜೇತರಿಗೆ ನೀಡುತ್ತೇವೆ.

ಕರೋಡ್‌ಪತಿಯಂತಹ ಕಾರ್ಯಕ್ರಮ ಜನರಲ್ಲಿ ಹಣದ ವ್ಯಾಮೋಹ ಹೆಚ್ಚಿಸುವುದಿಲ್ಲವೇ?

ಇದು ಹಣಕ್ಕಾಗಿ ಮಾಡುವ ಕಾರ್ಯಕ್ರಮವಲ್ಲ. ಇದೊಂದು ಆಟವಷ್ಟೆ. ಆಟವೆಂದರೆ ಜೂಜಾಟವಲ್ಲ. ಹಣಗಳಿಸಬೇಕೆನ್ನುವ ಸಾಮಾನ್ಯ ಮನುಷ್ಯನ ಕನಸಿಗೆ ಇದು ವೇದಿಕೆಯಾಗುತ್ತದೆ. ಸರಸ್ವತಿ ಒಲಿದವರಿಗೆ ಮಾತ್ರ ಲಕ್ಷ್ಮಿಯೂ ಒಲಿಯುವ ಕಾರ್ಯಕ್ರಮವಿದು.

ಅಮಿತಾಬ್‌ರಂತೆ ಸ್ಪರ್ಧಿ ಮತ್ತು ವೀಕ್ಷಕರಿಗೆ ಟೆನ್ಷನ್ ಹುಟ್ಟಿಸುತ್ತೀರಾ?

ಈಗ ನನಗೇ ಟೆನ್ಷನ್ ಶುರುವಾಗಿದೆ. ಅದು ಮೊದಲು ನಿವಾರಣೆಯಾಗಬೇಕು!

 

ಈಗ `ಮೆಟ್ರೊ~ ವಾರಕ್ಕೆ ಆರು

ನಗರದ ಜೀವನಶೈಲಿಗೆ ಕನ್ನಡಿ ಹಿಡಿಯುವ `ಮೆಟ್ರೊ  ಪುರವಣಿ~ ಬದಲಾದ ರೂಪದಲ್ಲಿ

ಸೋಮವಾರದಿಂದ ಶನಿವಾರದವರೆಗೆ 
Post Comments (+)