ಶುಕ್ರವಾರ, ನವೆಂಬರ್ 22, 2019
22 °C

`ನಂಬರ್ ಗೇಮ್' ಮೇಲೆ ನಂಬಿಕೆ ಇಲ್ಲ: ಎಐಸಿಸಿ ವೀಕ್ಷಕ

Published:
Updated:

ರಾಯಚೂರು: ಬಿಜೆಪಿ ಸರ್ಕಾರದ ಆಡಳಿತಕ್ಕೆ ಕರ್ನಾಟಕ ರಾಜ್ಯದ ಜನತೆ ಬೇಸತ್ತಿದ್ದು, ಬದಲಾವಣೆ ಬಯಸಿದ್ದಾರೆ.  ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗರಿಷ್ಠ ಸ್ಥಾನಗಳಿಸಿ ಅಧಿಕಾರ ಹಿಡಿಯಲಿದೆ ಎಂದು ಎಐಸಿಸಿ ವೀಕ್ಷಕ ಹಾಗೂ ರಾಜ್ಯಸಭೆ ಸದಸ್ಯ ಕಾಪುರ ಆನಂದ ಭಾಸ್ಕರ ಬಾಬು ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಜನತೆಯ ಹಿತಾಸಕ್ತಿ ಕಾಪಾಡುವುದು ಕಾಂಗ್ರೆಸ್ ಪಕ್ಷದ ಧ್ಯೇಯವಾಗಿದೆ. ಕಾಂಗ್ರೆಸ್ ಪಕ್ಷವೇ ಉತ್ತಮ ಆಡಳಿತ ಕೊಡುವ ಭರವಸೆ ಜನತೆಗೆ ಬಂದಿದ್ದು, ಹೀಗಾಗಿ ಬದಲಾವಣೆ ಬಯಸಿದ್ದಾರೆ ಎಂದರು.ಈ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಗೆ ಎಐಸಿಸಿಯು ತಮ್ಮನ್ನು ವೀಕ್ಷಕರನ್ನಾಗಿ ನೇಮಿಸಿದ್ದು, ಚುನಾವಣೆ ಮುಗಿಯುವವರೆಗೂ ಇದೇ ಜಿಲ್ಲೆಯಲ್ಲಿದ್ದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತಂತ್ರ ರೂಪಿಸುವುದು ತಮ್ಮ ಗುರಿಯಾಗಿದೆ. ಭಿನ್ನಾಭಿಪ್ರಾಯ ಸಾಮಾನ್ಯವಾಗಿದ್ದು, ವಿಶ್ವಾಸಕ್ಕೆ ತೆಗೆದುಕೊಂಡು ಸರಿಪಡಿಸುವ ಪ್ರಯತ್ನ ಮಾಡಲಾಗುವುದು. ಪಕ್ಷದ ಸಂಘಟನೆ ಮತ್ತು ಅಭ್ಯರ್ಥಿ ಗೆಲುವಿಗೆ ಸಾಮಾನ್ಯ ಕಾರ್ಯಕರ್ತ, ಪದಾಧಿಕಾರಿ, ಮುಖಂಡರು ಎಲ್ಲರೂ ಶ್ರಮಿಸುತ್ತಾರೆ. ಎಲ್ಲರ ಸಲಹೆ, ಅಭಿಪ್ರಾಯ ಆಲಿಸಿ ಹೆಜ್ಜೆ ಇರಿಸಲಾಗುತ್ತದೆ ಎಂದು ಹೇಳಿದರು.ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಜಟಿಲತೆ ಇದ್ದೇ ಇರುತ್ತದೆ. ಇಂಥ ಜಟಿಲತೆ ಬಗೆಹರಿಸುವುದು ಕಾಂಗ್ರೆಸ್ ಪಕ್ಷಕ್ಕೆ ಹೊಸದೇನೂ ಅಲ್ಲ. ಸುಸೂತ್ರವಾಗಿ ಅದು ಬಗೆಹರಿಯಲಿದೆ. ಈ ಚುನಾವಣೆಯಲ್ಲಿ ಪಕ್ಷ ಗೆಲ್ಲುವುದು ಮತ್ತು ರಾಜ್ಯದ ಅಧಿಕಾರ ಹಿಡಿಯುವುದಷ್ಟೇ ಪಕ್ಷದ ಪ್ರತಿಯೊಬ್ಬರ ಗುರಿಯಾಗಿದೆ. ಎಷ್ಟು ಸ್ಥಾನ ಬರುತ್ತದೆ ಎಂದು ಲೆಕ್ಕ ಹಾಕುವ ನಂಬರ್ ಗೇಮ್ ಮೇಲೆ ತಮಗೆ ವಿಶ್ವಾಸವಿಲ್ಲ ಎಂದು ತಿಳಿಸಿದರು.ಮಾಜಿ ಸಂಸದ ಎ ವೆಂಕಟೇಶ ನಾಯಕ, ನಗರ ಘಟಕದ ಅಧ್ಯಕ್ಷ ಜಿ ಬಸವರಾಜರೆಡ್ಡಿ, ಜಿ.ಪಂ ಉಪಾಧ್ಯಕ್ಷ ಕೆ ಶರಣಪ್ಪ, ನಗರಸಭೆ ಮಾಜಿ ಸದಸ್ಯರಾದ ಶಾಂತಪ್ಪ, ಜಿ ಶಿವಮೂರ್ತಿ ಹಾಗೂ ಇತರರು ಇದ್ದರು.

ಪ್ರತಿಕ್ರಿಯಿಸಿ (+)