ನಂಬಿಕೆಗೆ ಏನು ಆಧಾರ?

7

ನಂಬಿಕೆಗೆ ಏನು ಆಧಾರ?

Published:
Updated:
ನಂಬಿಕೆಗೆ ಏನು ಆಧಾರ?

ಮಹಾರಾಷ್ಟ್ರದ ನಂದುರ‌್ಬಾರ್ ಜಿಲ್ಲೆಯ ಥೆಂಬ್ಳಿ ಎಂಬ ಆದಿವಾಸಿ ಹಾಡಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್  ಮೊದಲ ಆಧಾರ್ ಸಂಖ್ಯೆ ಮತ್ತು ಕಾರ್ಡ್ ವಿತರಿಸಿದರು.2010ರ ಸೆಪ್ಟೆಂಬರ್ 28ರಂದು ಈ ಸಮಾರಂಭದ ದಿನಕ್ಕೆ ಸರಿಯಾಗಿ ಎಂಟು ತಿಂಗಳು ಎಂಟು ದಿನದ ಹಿಂದೆ ಬ್ರಿಟನ್ ಸರ್ಕಾರ `ಇಂದು ಮಧ್ಯರಾತ್ರಿಯಿಂದ ರಾಷ್ಟ್ರೀಯ ಗುರುತು ಚೀಟಿಗಳು `ಗುರುತಿನ ದಾಖಲೆ~ಯಾಗಿರುವುದಿಲ್ಲ~ ಎಂದು ಘೋಷಿಸಿ ಮುಂದಿನ 100 ದಿನಗಳಲ್ಲಿ ಈ ಸಂಬಂಧ ಸಂಗ್ರಹಿಸಲಾಗಿದ್ದ ಎಲ್ಲಾ ದಾಖಲೆಗಳನ್ನು ನಾಶ ಮಾಡುವ ಪ್ರಕಟಣೆಯನ್ನು ನೀಡಿತು.ಇದಕ್ಕೂ ಮೂರು ವರ್ಷ ಮೊದಲೇ ಅಮೆರಿಕ ಸರ್ಕಾರ ಸಾಮಾಜಿಕ ಭದ್ರತಾ ಸಂಖ್ಯೆ  (ಎಸ್‌ಎಸ್‌ಎನ್) ಅನ್ನು ಗುರುತಿನ ದಾಖಲೆಯಾಗಿ ಕೇಳುವುದನ್ನು ಕನಿಷ್ಠ ಮಟ್ಟಕ್ಕೆ ಇಳಿಸಬೇಕು ಎಂದು ಆದೇಶಿಸಿತ್ತು.ಆದರೆ ಭಾರತದ ಪ್ರಧಾನಿ ಮಾತ್ರ ವಿಶ್ವದ ಎರಡು ಪ್ರಮುಖ ಪ್ರಜಾಪ್ರಭುತ್ವಗಳು ಬೇಡವೆಂದು ನಿರ್ಧರಿಸಿದ `ವಿಶಿಷ್ಟ ಗುರುತು~ ಪರಿಕಲ್ಪನೆಯನ್ನು `ಬಡತನ ನಿರ್ಮೂಲನಕ್ಕಾಗಿ ಸರ್ಕಾರ ರೂಪಿಸುವ ಯೋಜನೆಗಳನ್ನು ಬಡವರಿಗೆ ನೇರವಾಗಿ ತಲುಪಿಸಲು ಆಧುನಿಕ ತಂತ್ರಜ್ಞಾನ ಒದಗಿಸಿರುವ ಮಂತ್ರದಂಡ~ ಎಂದು ಬಣ್ಣಿಸುತ್ತಿದ್ದರು.  ಈ ಯೋಜನೆ ಯುಪಿಎಯ ಕನಸಿನ ಕೂಸೇನೂ ಅಲ್ಲ. ಕಾರ್ಗಿಲ್ ಯುದ್ಧದ ನಂತರ ಎನ್‌ಡಿಎ ಸರ್ಕಾರ ನೇಮಿಸಿದ್ದ `ಕಾರ್ಗಿಲ್ ಪರಿಶೀಲನಾ ಸಮಿತಿ~  ತನ್ನ ವರದಿಯಲ್ಲಿ ಗಡಿ ಪ್ರದೇಶಗಳಲ್ಲಿರುವ ಎಲ್ಲರಿಗೂ ಗುರುತು ಚೀಟಿಗಳನ್ನು ಕೊಡಬೇಕೆಂಬ ಪ್ರಸ್ತಾಪವನ್ನು ಮುಂದಿಟ್ಟಿತ್ತು. `ಅನಧಿಕೃತ ವಲಸೆ ಸಮಸ್ಯೆಯನ್ನು ತಡೆಯಲು ಭಾರತೀಯ ಪೌರರ ಮತ್ತು ಪೌರರಲ್ಲದವರ ನೋಂದಾವಣೆಗೊಂದು ವ್ಯವಸ್ಥೆಯನ್ನು ಮಾಡಬೇಕು.ನೋಂದಾಯಿಸಿದ ಎಲ್ಲ ಭಾರತೀಯ ಪೌರರಿಗೆ ಒಂದು ಬಹೂಪಯೋಗಿ ಗುರುತು ಚೀಟಿಯನ್ನು (ಎಂಎನ್‌ಐಸಿ) ನೀಡಬೇಕು. ಭಾರತೀಯ ಪೌರರಲ್ಲದವರಿಗೆ ಬೇರೆಯೇ ಬಣ್ಣ ಮತ್ತು ವಿನ್ಯಾಸವಿರುವ ಗುರುತು ಚೀಟಿಯನ್ನು ನೀಡಬೇಕು~ ಎಂದು ಸಮಿತಿ ಸಲಹೆ ಮಾಡಿತ್ತು.1955ರ ಪೌರತ್ವ ಕಾಯ್ದೆ ಜನಗಣತಿಗೆ ಸಂಬಂಧಿಸಿದ ಕಾಯ್ದೆ ಜನಗಣತಿಯ ವೇಳೆ ಸಂಗ್ರಹಿಸಲಾಗುವ  ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಗೊಳಿಸದಂತೆ ತಡೆಯುತ್ತದೆ. ಆದರೆ 2003ರಲ್ಲಿ ಮಾಡಲಾದ ತಿದ್ದುಪಡಿಯು ಗಣತಿಯ ವೇಳೆ ಸಂಗ್ರಹಿಸುವ ಮಾಹಿತಿಗಳಿಗಿದ್ದ ಈ ಪಾವಿತ್ರ್ಯವನ್ನು ಕಿತ್ತುಕೊಂಡಿತು.

 

ಈ ತಿದ್ದುಪಡಿಯ ಪ್ರಕಾರ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸ್ಥಳೀಯ ನೋಂದಾವಣೆ ನಿರ್ದೇಶಕರಲ್ಲಿ ತನ್ನ ಪೌರತ್ವವನ್ನು ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯವಾಗಿಸಿತು. ಹೀಗೆ ನೋಂದಾಯಿಸಿಕೊಳ್ಳದೇ ಇರುವುದು ಒಂದು ಸಾವಿರ ರೂಪಾಯಿಗಳವರೆಗಿನ ದಂಡವನ್ನು ವಿಧಿಸಬಲ್ಲ ಅಪರಾಧವಾಗುತ್ತದೆ.ಎನ್‌ಡಿಎ ಸರ್ಕಾರದ ಬಲಪಂಥೀಯ ನಿಲುವುಗಳು, ಗುಜರಾತ್‌ನಲ್ಲಿ ನಡೆದ ಮುಸ್ಲಿಮರ ನರಮೇಧದ ಹಿನ್ನೆಲೆಯಲ್ಲಿ ಈ `ಕಡ್ಡಾಯ ನೋಂದಾವಣೆ~ ತೀವ್ರ ಟೀಕೆಗೆ ಗುರಿಯಾಯಿತು.2008ರ ಮುಂಬೈ ದಾಳಿಯ ನಂತರ ಯುಪಿಎ ಸರ್ಕಾರ ಈ ಹಳೆಯ ಎಂಎನ್‌ಐಸಿ ಯೋಜನೆಗೆ ಜೀವಕೊಟ್ಟಿತು. ಆಗಲೇ ವಿಶಿಷ್ಟ ಗುರುತಿನ ರಾಷ್ಟ್ರೀಯ ಪ್ರಾಧಿಕಾರ (ಎನ್‌ಎಯುಐಡಿ) ಎಂಬ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದದ್ದು.

 

ಈ ಬಾರಿ ರಾಷ್ಟ್ರೀಯ ಭದ್ರತೆಯಂಥ ವಿಷಯಗಳ ಪ್ರಸ್ತಾಪವಿರಲಿಲ್ಲ. ಬಡವರಿಗೆ ಸರ್ಕಾರಿ ಸವಲತ್ತುಗಳನ್ನು ತಲುಪಿಸಲು ಅನುಕೂಲವಾಗುವಂತೆ ಈ ವ್ಯವಸ್ಥೆ ಎಂದು 2009ರ ಮಧ್ಯಂತರ ಬಜೆಟ್‌ನಲ್ಲಿ ಹಣಕಾಸು ಸಚಿವರು ಹೇಳಿದರು.ಈ ಪ್ರಾಧಿಕಾರಕ್ಕೆ ಇನ್ಫೋಸಿಸ್ ಖ್ಯಾತಿಯ ನಂದನ್ ನಿಲೇಕಣಿಯವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದರ ಹಿಂದೆಯೇ ಮಾಧ್ಯಮಗಳು ಯೋಜನೆಯನ್ನು ಹಾಡಿ ಹೊಗಳಲಾರಂಭಿಸಿದವು.ಬಡವರಿಗೆ ಸವಲತ್ತು ಅಥವಾ ವೈಯಕ್ತಿಕತೆಯ ಸಂರಕ್ಷಣೆ ಎಂಬ ಆಯ್ಕೆ ಬಂದರೆ ಮೊದಲನೆಯದ್ದನ್ನು ಆರಿಸಿಕೊಳ್ಳುವುದು ಭಾರತೀಯ ಸಂದರ್ಭದಲ್ಲಿ ಹೆಚ್ಚು ಸರಿ ಎಂದು ಕೆಲವು  `ತಜ್ಞ~ರೂ ಹೇಳಲಾರಂಭಿಸಿದರು. ಪರಿಣಾಮವಾಗಿ ಅತಿ ಸೂಕ್ಷ್ಮ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿ ವಿತರಿಸುವ ಒಂದೂವರೆ ಲಕ್ಷ ಕೋಟಿ ರೂಪಾಯಿ ವೆಚ್ಚದ ಯೋಜನೆಯೊಂದು ಯಾವ ಸಾರ್ವಜನಿಕ ಚರ್ಚೆಯೂ ಇಲ್ಲದೆ ಜಾರಿಗೆ ಬಂತು.ಏಕಪಕ್ಷೀಯ ನಿರ್ಧಾರಗಳು: ಬ್ರಿಟನ್‌ನಲ್ಲಿ ಐದು ವರ್ಷ ಪೂರ್ಣಗೊಳಿಸುವ ಮೊದಲೇ ಈ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು. ಇದು ಅಲ್ಪಸ್ವಲ್ಪ ಯಶಸ್ವಿಯಾಗಿರುವ ಅಮೆರಿಕದಲ್ಲಿ ಸಾಮಾಜಿಕ ಭದ್ರತಾ ಸಂಖ್ಯೆ (ಎಸ್‌ಎಸ್‌ಎನ್) ನೀಡುವ ಕ್ರಿಯೆ 1936ರಿಂದಲೇ ಜಾರಿಯಲ್ಲಿತ್ತು. ಈ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತಾ ಹೋದಂತೆ ಗುರುತಿಗಾಗಿ ಈ ಸಂಖ್ಯೆಯ ಬಳಕೆಯೂ ಹೆಚ್ಚಾಯಿತು.ಪರಿಣಾಮವಾಗಿ `ಐಡೆಂಟಿಟಿ ಥೆಪ್ಟ್~ ಎಂಬ ಹೊಸ ಸಮಸ್ಯೆ ಉದ್ಭವಿಸಿತು. ನಕಲಿ ನಂಬರ್‌ಗಳನ್ನು ಪಡೆಯುವುದರಿಂದ ಆರಂಭಿಸಿ ನಂಬರ್‌ಗಳನ್ನು ಕದಿಯುವ ತನಕದ ಈ ಪ್ರಕ್ರಿಯೆಯನ್ನು ತಡೆಯಲು ಸರ್ಕಾರವೇ ಮುಂದಾಯಿತು.ಈ ಹಿನ್ನೆಲೆಯಲ್ಲಿ ಅನೇಕರು ಭಾರತದಲ್ಲಿ `ವಿಶಿಷ್ಟ ಗುರುತು ಸಂಖ್ಯೆ~ಯನ್ನು ಜಾರಿಗೆ ತರುತ್ತಿರುವ ವಿಧಾನವನ್ನು ತೀವ್ರವಾದ ಟೀಕೆಗೆ ಗುರಿಪಡಿಸಿದರು. ಆದರೆ ಮಧ್ಯಮ ವರ್ಗಗಳ ಹೃದಯ ಗೆದ್ದ ಪ್ರಧಾನಿಯ ಇಮೇಜ್ ಮತ್ತು ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿದ್ದ ಮಧ್ಯಮ ವರ್ಗಗಳ ಹೀರೋ ಆಗಿದ್ದ ನಂದನ್ ನಿಲೇಕಣಿಯವರ ಇಮೇಜ್‌ಗಳೆರಡೂ ಟೀಕೆಗಳನ್ನು ಬಹುತೇಕ ಮಂಕಾಗಿಸಿಬಿಟ್ಟಿತು. ಇದರಿಂದಾಗಿ ಇಂತಹ ಪ್ರಮುಖ ಯೋಜನೆ ಬಗ್ಗೆ ರಾಷ್ಟ್ರೀಯ ಚರ್ಚೆ ನಡೆಯಲೇ ಇಲ್ಲ.ಮಿಥ್ಯಾಧಾರ: `ಯುಪಿಎ ಸರ್ಕಾರ ಇದನ್ನು ಬಡತನ ನಿರ್ಮೂಲನಾ ಯೋಜನೆಗಳ ಜಾರಿಗೆ ಅನುಕೂಲವಾಗುತ್ತಿದೆ ಎನ್ನುತ್ತಿದೆ. ಹಾಗೆ ನೋಡಿದರೆ ಯೋಜನೆಗಳನ್ನು ಬಡವರಿಗೆ ತಲುಪಿಸಲು   `ಗುರುತು ಚೀಟಿ~ಗಳು ಒಂದು ಸಮಸ್ಯೆಯೇ ಅಲ್ಲ. ಗ್ರಾಮ ಪಂಚಾಯಿತಿ, ಗ್ರಾಮ ಸಭೆಗಳ ಮಟ್ಟದಲ್ಲಿ ನಿಜ ಅರ್ಥದ ಗುರುತಿಸುವಿಕೆ ನಡೆದರೆ ಯೋಜನೆಗಳನ್ನು ತಲುಪಿಸುವುದು ಒಂದು ಸಮಸ್ಯೆಯೇ ಅಲ್ಲ.ಸರ್ಕಾರಿ ಯಂತ್ರ ಕೊನೆಯ ನಾಗರಿಕನನ್ನು ತಲುಪುವ ಹೊತ್ತಿಗೆ ಎಲ್ಲವನ್ನೂ ನುಂಗಿ ಹಾಕುವ ಸಮಸ್ಯೆಯನ್ನು `ಗುರುತು ಚೀಟಿ~ ಮತ್ತಷ್ಟು ಸಂಕೀರ್ಣಗೊಳಿಸಬಹುದಷ್ಟೇ.ಈಗಾಗಲೇ ವಿತರಿಸಲಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಗುರುತು ಚೀಟಿಗಳು ಇದಕ್ಕೆ ಅತ್ಯುತ್ತಮ ಉದಾಹರಣೆ. ಈ ಗುರುತು ಚೀಟಿಗಳು ಕಾಂಟ್ರಾಕ್ಟರ್‌ಗಳ ಕೈಯಲ್ಲಿರುವುದಕ್ಕೆ ಕರ್ನಾಟಕದ್ದೇ ಉದಾಹರಣೆಗಳಿವೆ. ಇನ್ನು ಬಯೋಮೆಟ್ರಿಕ್ಸ್ ತಂತ್ರಜ್ಞಾನದಿಂದ ನಕಲನ್ನು ತಡೆಯಬಹುದು ಎಂಬ ವಾದ.ಇದು ಹೇಗೆ ವಿಫಲವಾಗಬಹುದು ಎಂಬುದಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವಿತರಿಸಿದ ರೇಷನ್ ಕಾರ್ಡ್‌ಗಳೇ ಅತ್ಯುತ್ತಮ ಉದಾಹರಣೆ.ಕರ್ನಾಟಕದಲ್ಲಿ ಕುಟುಂಬದ ಎಲ್ಲಾ ಸದಸ್ಯರ ಫೋಟೋ ತೆಗೆದು ಅವರ ಬೆರಳಚ್ಚನ್ನು ಪಡೆದು ವಿತರಿಸಲಾದ ಈ ರೇಷನ್ ಕಾರ್ಡ್‌ಗಳಲ್ಲೂ ನಕಲಿಗಳಿವೆ ಎಂದು ವಿದ್ಯುತ್ ಬಿಲ್‌ಗಳನ್ನು ಸಂಗ್ರಹಿಸಲು ತೊಡಗಿ ಸಮಸ್ಯೆ ಮತ್ತಷ್ಟು ಸಂಕೀರ್ಣಗೊಂಡಿರುವುದಂತೂ ಎಲ್ಲರಿಗೂ ತಿಳಿದೇ ಇದೆ.ಕಟ್ಟಡ ನಿರ್ಮಾಣ ಕೂಲಿಕಾರರು, ಕೃಷಿ ಕಾರ್ಮಿಕರ ಬೆರಳಚ್ಚುಗಳನ್ನು ತೆಗೆಯುವುದೇ ಕಷ್ಟ. ಕಣ್ಣಿನ ಪಾಪೆಗಳು ವಯಸ್ಸಾದಂತೆ ಬದಲಾಗುತ್ತದೆ. ಕ್ಯಾಟರಾಕ್ಟ್‌ನಂಥ ಸಮಸ್ಯೆಗಳು ಇದನ್ನು ಮತ್ತಷ್ಟು ಕಠಿಣಗೊಳಿಸುತ್ತವೆ ಎಂಬುದು ಈಗಾಗಲೇ ಸಾಬೀತಾಗಿದೆ. ಇವುಗಳೆಲ್ಲವೂ `ಪುನರ್ ಪರಿಶೀಲನಾ ಕ್ರಿಯೆ~ಯಲ್ಲಷ್ಟೇ ಬಳಕೆಯಾಗಬಹುದಾದ ತಂತ್ರಗಳು ಮಾತ್ರ.`ಆಧಾರ್~ ವ್ಯಕ್ತಿಯ ಆಯ್ಕೆಗೆ ಬಿಟ್ಟ ವಿಚಾರ. ಇದು ಕಡ್ಡಾಯವಲ್ಲ ಎಂದು ನಂದನ್ ನಿಲೇಕಣಿ ಹಲವು ಬಾರಿ ಹೇಳಿದ್ದಾರೆ. ರಾಷ್ಟ್ರೀಯ ಗುರುತು ಸಂಖ್ಯೆಯನ್ನು ಪಡೆಯುವುದು ಕಡ್ಡಾಯ ಎಂದು 2003ರಲ್ಲಿ ತಿದ್ದುಪಡಿಗೆ ಒಳಗಾದ 1955ರ ಪೌರತ್ವ ಕಾಯ್ದೆ ಹೇಳುತ್ತಿದೆ.ಈ ಕಡ್ಡಾಯವಲ್ಲದ `ಆಧಾರ್~ ಅನ್ನು ಗ್ಯಾಸ್ ಸಂಪರ್ಕ, ಬ್ಯಾಂಕ್ ಖಾತೆ, ಫೋನ್ ಸಂಪರ್ಕ ಮುಂತಾದ ದಿನ ನಿತ್ಯದ ಅಗತ್ಯಗಳಿಗೂ ಕಡ್ಡಾಯ ಮಾಡುವ ಕ್ರಿಯೆಯೂ ಚಾಲನೆಯಲ್ಲಿದೆ.ಜನರಿಗೆ ಆಯ್ಕೆಯ ಅವಕಾಶ ಎಲ್ಲಿದೆ? ಈ ದೃಷ್ಟಿಯಲ್ಲಿ `ಆಧಾರ್~ ಯೋಜನೆಯನ್ನು ಗ್ರಹಿಸಿದರೆ  `ಆಧಾರ್~ ಯೋಜನೆಗೂ ಅಭಿವೃದ್ಧಿ ಯೋಜನೆಗಳನ್ನು ಬಡವರಿಗೆ ತಲುಪಿಸುವುದಕ್ಕೂ ಯಾವುದೇ ಸಂಬಂಧವಿಲ್ಲ. ಇದು ಗೃಹ ಸಚಿವಾಲಯದ ತಾಳಕ್ಕೆ ಕುಣಿಯಲು ಸರ್ಕಾರ ಬಡತನ ನಿರ್ಮೂಲನೆಯನ್ನು ನೆಪವಾಗಿಸಿಕೊಂಡಿದೆ ಎಂಬ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯೆ ಅರುಣಾ ರಾಯ್ ಅವರ ಮಾತನ್ನು ಒಪ್ಪಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry