ನಂಬಿಕೆ ಇರುವ ತನಕ ಟೋಪಿ ಹಾಕುವವರು ...

7

ನಂಬಿಕೆ ಇರುವ ತನಕ ಟೋಪಿ ಹಾಕುವವರು ...

Published:
Updated:

ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಡೆ ಸ್ನಾನ ಪದ್ಧತಿ ಆಚರಿಸುವ ಬಗೆಗೆ ಸುದೀರ್ಘ ಸಮಯದಿಂದ ಚರ್ಚೆ ಮಾತ್ರ ಮಾಧ್ಯಮಗಳಲ್ಲಿ ಸಾಗಿದೆ. ಆದರೆ ಅಂತಹ ಅನಿಷ್ಟಕ್ಕೆ ಅಂತಿಮ ವಿದಾಯ ಕೋರುವ ನಿರ್ಣಯಕ್ಕೆ ಯಾರೂ ಬಂದಿಲ್ಲ. ಪ್ರತಿಯೊಬ್ಬರಲ್ಲೂ ಇಂಥ ಮಾನಸಿಕ ನಿರ್ಣಯ ಬಂದಾಗ, ಅಂಧ ಶ್ರದ್ಧೆಯನ್ನು ತುಂಬುವ ಕಾರ್ಯ ನಡೆಸಿರುವ ಬಹುತೇಕ ಮಠಗಳು, ಬೇರೆಯವರ ನಂಬಿಕೆ ಮೇಲೆ ಬದುಕುತ್ತಿರುವ ಅರ್ಚಕರು ಬಾಗಿಲು ಮುಚ್ಚಬೇಕಾದ್ದು ಖಂಡಿತ.ಕೆಲವು ನಂಬಿಕೆಗಳು ತಾವೇ ತಂದುಕೊಳ್ಳುವಂಥದ್ದು. ದನಗಳು ಕರು ಹಾಕಿದ ಒಂದೆರಡು ದಿನದಲ್ಲಿ ನಿಂತಲ್ಲಿಂದ ಕುಸಿದು, ಹಲ್ಲು ಕಡಿಯುತ್ತಾ, ಹಟ್ಟಿಯ ಗೊಬ್ಬರ ತಿನ್ನುತ್ತವೆ. ಕರಾವಳಿಯ ಬಹುತೇಕ ಹೈನುಗಾರರು ಹೀಗಾದಾಗ ಪಶುವೈದ್ಯರ ಬಳಿ ಹೋಗುವುದಿಲ್ಲ. ಜೋಯಿಸರ ಬಳಿಗೆ ಓಡುತ್ತಾರೆ. ಗುಳಿಗನ ದೃಷ್ಟಿ, ಸೋಂಕು ಬಾಧೆ ಇತ್ಯಾದಿ ಕಾರಣಕ್ಕೆ ಸಾಕಷ್ಟು ಖರ್ಚು ಮಾಡುತ್ತಾರೆ. ಜಾನುವಾರು ಬದುಕುವುದಿಲ್ಲ. ಪಶುವೈದ್ಯರು ಈ ಸ್ಥಿತಿಗೆ ಮೆಗ್ನೇಷಿಯಂ ಅಥವಾ ಕ್ಯಾಲ್ಸಿಯಮ್ ಕೊರತೆ ಎಂದು ಹೇಳಿ ಡ್ರಿಪ್ ಹಾಕುತ್ತಾರೆ. ಔಷಧಿ ಬಾಟಲಿ ಖಾಲಿಯಾದಾಗ ದನ ಎದ್ದು ನಿಲ್ಲುತ್ತದೆ. ಆದರೆ ಗೊಬ್ಬರ ತಿನ್ನುವುದು ದೆವ್ವಗಳ ಉಪದ್ರವದಿಂದ ಎಂದು ಇಂದಿಗೂ ನಂಬುವವರು - ನಂಬಿಸುವವರಿದ್ದಾರೆ.ಒಂದು ಪ್ರಸಿದ್ಧ ಯಾತ್ರಾಸ್ಥಳದಲ್ಲಿ ಹೂವಿನ ಪೂಜೆ ಬಹಳ ವಿಶೇಷ. ಪೂಜೆಗೆ ಸಲ್ಲುವ ಹಣ ಅತ್ಯಲ್ಪವಾದರೂ ಹರಕೆ ಹೊತ್ತ ಪ್ರತಿ ಭಕ್ತನನ್ನೂ ಯಾವ ಕಾರಣಕ್ಕೆ ಹರಕೆ ಹೊತ್ತದ್ದೆಂದು ವಿಚಾರಿಸಿ ಕೆಟ್ಟ ಸಂಸ್ಕೃತದಲ್ಲಿ ಒಂದು ಶ್ಲೋಕ ಹೇಳಿ ಹರಸುವ ಅರ್ಚಕರ ವಾಕ್ಯ ಶೈಲಿಗೇ ಭಕ್ತ ಆನಂದತುಂದಿಲನಾಗಿ ಅವರಿಗೆ ಕೊಡುವ ಟಿಪ್ಸ್ ಪೂಜೆಯ ಮೊತ್ತಕ್ಕಿಂತ ದೊಡ್ಡದು. ಅವನ ಕೈಯಲ್ಲಿ ಹಿಡಿದ ನೋಟಿನ ಮೊತ್ತ ನೋಡಿ ಆಶೀರ್ವಾದ ವಾಕ್ಯದಲ್ಲಿ ಉತ್ತಮ, ಮಧ್ಯಮ, ಸಾಧಾರಣ ಎಂಬ ಮೂರು ವಿಧದ ಸಾಹಿತ್ಯ ಇರುತ್ತದೆ. ಏನೂ ಕೊಡದ ಇಲ್ಲವೆ ಹತ್ತು ರೂಪಾಯಿ ನೋಟು ಹಿಡಿದವನಿಗೆ ಸಿಗುವುದೆಂದರೆ ಬಸ್ ನಿಲ್ದಾಣದಲ್ಲಿ ಮಾರುವ ಸಕ್ಕರೆ, ಚಹಾ ಪುಡಿ ಹಾಲಿಲ್ಲದ ಚಹಾದ ಹಾಗೆ ‘ನೀರ’ಸ. ಇದೇ ಕ್ಷೇತ್ರದಲ್ಲಿ ಕಾಣಿಕೆ ಹಾಕುವ ಭಕ್ತರಿಗೆ ಸಣ್ಣ ತಟ್ಟೆಯಲ್ಲಿ ಗಂಧ, ಮಲ್ಲಿಗೆ ಕುಚ್ಚು ಇರಿಸಿ, ಚಿತ್ತಾಕರ್ಷಕವಾದ ಹಾರೈಕೆಯೊಂದಿಗೆ ಪ್ರಸಾದ ಸಿಗುತ್ತದೆ. ತಟ್ಟೆಗೆ ಏನೂ ಬೀಳುವುದಿಲ್ಲ ಎಂಬ ಗ್ಯಾರಂಟಿಯಾಯಿತೋ ಅರ್ಚಕರು ಎಸೆಯುವ ಪ್ರಸಾದದ ಉಂಡೆ ಹಿಡಿದುಕೊಳ್ಳಲು ಕ್ರಿಕೆಟ್ ಆಟಗಾರರಿಗೆ ಮಾತ್ರ ಸಾಧ್ಯ.ಸ್ವಾಮೀಜಿಯೊಬ್ಬರು ದಲಿತರ ಕೇರಿಗೆ ಹೋಗುತ್ತಾರೆ. ಇದರಿಂದಾಗಿ ಎಷ್ಟು ದಲಿತರು ಸಾಮಾಜಿಕವಾಗಿ ಬೆರೆತರೆಂಬುದು ಗೊತ್ತಿಲ್ಲ. ಆದರೆ ಅವರದೇ ಅನುಯಾಯಿಗಳು ಅವರದೇ ಮಠದಲ್ಲಿ ಮೇಲ್ವರ್ಗದವರು ತಾವು ಎಂದು ಬೀಗುತ್ತಿರುವ ಬ್ರಾಹ್ಮಣರಲ್ಲೇ ಎಸಗುತ್ತಿರುವ ಜಾತಿ ಭೇದದ ಕರಾಳ ಮುಖ ಯಾರಿಗೂ ಗೊತ್ತಿಲ್ಲ. ಹರಿ ಹರರಲ್ಲಿ ಭೇದವಿಲ್ಲ. ಶಿವನು ವಿಷ್ಣುವಿನಲ್ಲಿ ಐಕ್ಯನೆಂಬುದು ತಿಳಿದವರು ಕೂಡ ಶಿವಾರಾಧಕರನ್ನು ತುಚ್ಛವಾಗಿ ಕಾಣುತ್ತಾರೆ. ದ್ವೈತ ಅದ್ವೈತಗಳ ಕೂದಲು ಸೀಳುವ ಪ್ರವೃತ್ತಿ ಬೆಳೆದು ಬರುತ್ತಿದೆ. ಇದರಿಂದ ಯಾವ ಪುರುಷಾರ್ಥ ಸಾಧಿಸುತ್ತಾರೋ ಗೊತ್ತಿಲ್ಲ. ದ. ಕನ್ನಡದ ಮೂಲ ಬ್ರಾಹ್ಮಣರೆನಿಸಿದ ಸ್ಥಾನಿಕರನ್ನು ಬ್ರಾಹ್ಮಣ ಸಮಾಜದಿಂದಲೇ ದೂರವಿರಿಸಿ ಇತ್ತೀಚಿನವರೆಗೆ ಅವರಿಗೆ ಸಹಪಂಕ್ತಿ ಭೋಜನವನ್ನೇ ನೀಡುತ್ತಿರಲಿಲ್ಲ.ನಂಬಿಕೆಗಳ ಮೂಲಕ ಹೊಟ್ಟೆ ಹೊರೆದುಕೊಳ್ಳುವ ಪ್ರವೃತ್ತಿ ಮೇಲ್ವರ್ಗಕ್ಕೇ ಸೀಮಿತ ಅಲ್ಲ. ಎಲ್ಲರಲ್ಲೂ ಅದು ವ್ಯಾಪಕ. ಕರಾವಳಿಯಲ್ಲಿ ಭೂತಾರಾಧನೆಯ ಪ್ರಮುಖರು ದಲಿತರು. ಅವರ ಮೈಗೆ ದೈವ ಆವೇಶವಾಗುತ್ತದೆ. ಅವರು ಹೇಳುವ ನುಡಿ ದೈವದ್ದೇ, ಆಹಾರ ತಿನ್ನುವುದು ದೈವವೇ ಎಂಬ ನಂಬಿಕೆಯಿದೆ. ಪಂಜರ್ಲಿ ದೈವದ ಕೋಲದಲ್ಲಿ ದೈವವು ಜೀವಂತ ಕೋಳಿಯ ಕತ್ತಿಗೆ ಕಚ್ಚಿ ಅದರ ರಕ್ತ ಹೀರುವ ಸಂದರ್ಭವಿದೆ. ಒಂದೆಡೆ ಭೂತ ಕಟ್ಟಿದವನಿಗೆ ಬಾಯಲ್ಲಿ ಒಂದೂ ಹಲ್ಲಿಲ್ಲ.ಆಹಾರ ಕೊಡುವ ಹೊತ್ತಿನಲ್ಲಿ ಕೋಳಿ ಕೈಗೆ ಬಂತು. ದೈವ ಎಷ್ಟೇ ಸ್ಟ್ರಾಂಗ್ ಆಗಿದ್ದರೂ ಭೂತ ಕಟ್ಟಿದವನಿಗೆ ಬಾಯಲ್ಲಿ ಹಲ್ಲಿಲ್ಲದಿದ್ದರೆ ರಕ್ತ ಕುಡಿಯುವುದು ಹೇಗೆ? ಆಗ ದೈವಕ್ಕೂ ಸಮಯ ಪ್ರಜ್ಞೆ ಜಾಗೃತವಾಗಿ ‘ಇನ್ನು ಮುಂದೆ ಇದೇ ಜಾಗದಲ್ಲಿ ಮೂಕಾಂಬಿ ಗುಳಗನ ಕೋಲ ನಡೆಯಲಿಕ್ಕಿದೆ. ಆದ್ದರಿಂದ ನಾನಿಲ್ಲಿ ಕೋಳಿಯ ರಕ್ತ ಚೆಲ್ಲಿದರೆ ಅಶುದ್ಧವಾಗುತ್ತದೆ. ಆದ ಕಾರಣ ಇದನ್ನು ಮೂಸಿದರೆ ನನಗೆ ತೃಪ್ತಿಯಾದಂತೆ’ ಎಂದು ಹೇಳಿ ಜೀವಂತ ಕೋಳಿಯನ್ನು ಹೆಂಡತಿಯ ಕೈಗೆ ರವಾನಿಸುತ್ತದೆ.ಕೋಲ ಸಂದರ್ಭದಲ್ಲಿ ಸಾರಾಯಿ, ಸೇಂದಿ ಸಮರ್ಪಣೆ ಮಾಮೂಲು. ದೈವದ ಆರಾಧಕರೊಬ್ಬರು ಇತ್ತೀಚೆಗೆ ಇದನ್ನು ಸೇವಿಸುತ್ತಿರಲಿಲ್ಲ. ಅವರನ್ನು ಸಂದರ್ಶಿಸುವಾಗ ನಾನು, ‘ಭೂತ ಕಟ್ಟಿದವರು ಆಹಾರ - ಪಾನೀಯಗಳನ್ನು ಸೇವಿಸದಿದ್ದರೆ ದೈವಕ್ಕೆ ತೃಪ್ತಿಯಾಗುವುದೆ?’ ಎಂದು ಕೇಳಿದೆ. ಅವರು, ‘ಕುಡಿಯದಿದ್ದರೂ ಮೂಸಿದರೆ ಸಾಕು. ಅಥವಾ ನಮ್ಮ ನಾಭಿಗೆ ನಾಲ್ಕು ಹನಿ ಸಿಂಪಡಿಸಿಕೊಂಡರೂ ಸಾಕಾಗುತ್ತದೆ. ನನಗೆ ಅಪೆಂಡಿಸೈಟಿಸ್ ಆಪರೇಷನ್ ಆದ ಮೇಲೆ ಮದ್ಯಪಾನ ಮಾಡಬಾರದೆಂದು ವೈದ್ಯರು ಕಡ್ಡಾಯ ಮಾಡಿದ್ದಾರೆ. ಅದಲ್ಲವಾದರೆ ಹೀಗೆ ಮಾಡುತ್ತಿರಲಿಲ್ಲ’ ಎಂದರು. ಸರಿ. ಪದ್ಧತಿಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಬಹುದು. ಅದರಿಂದ ಏನೂ ದೋಷವಿಲ್ಲ ಎಂದು ಸಮಾಜ ಒಪ್ಪಿಕೊಂಡರೆ ಯಾವ ತಕರಾರೂ ಇಲ್ಲ. ಮಡೆ ಸ್ನಾನವಿರಲಿ, ಸಿಡಿಯಂತಹ ಹಿಂಸಾತ್ಮಕ ಸೇವೆಗಳಿರಲಿ, ಎಲ್ಲದರಲ್ಲೂ ಮಾರ್ಪಾಟು ಮಾಡಬಹುದು. ಮಾಡಿದರೆ ದೇವರು ಎನಿಸಿಕೊಂಡಿರುವ ಯಾವ ನ್ಯಾಯಾಲಯದಲ್ಲೂ ದಾವೆ ಹೂಡುವುದಿಲ್ಲ. ಹಾಗೆ ದೇವರಿಗೆ ಕೋಪ ಬರುವುದಿದ್ದರೆ ಬೆತ್ತಲೆ ಸೇವೆ ನಿಷೇಧದ ವಿರುದ್ಧ ಪ್ರತೀಕಾರ ತೋರಿಸಲೇಬೇಕಿತ್ತಲ್ಲ.ಬೆಂಕಿಯ ಮೇಲೆ ಹೊರಳಾಡುವುದು ಕಾದ ಎಣ್ಣೆಯಿಂದ ಅಪ್ಪ ತೆಗೆಯುವುದು ಇದನ್ನೆಲ್ಲ ವಿದ್ಯಾವಂತರು ಕೂಡ ಪವಾಡ ಎಂದು ಈಗಲೂ ನಂಬುತ್ತಾರೆ. ವಿಚಾರವಾದಿಗಳ ಸಂಘದ ನರೇಂದ್ರನಾಯಕ್ ಎಲ್ಲ ಊರುಗಳಿಗೆ ಹೋಗಿ ಇದನ್ನೆಲ್ಲ ಮಾಡಿ ತೋರಿಸಿ ಇದರ ಗುಟ್ಟು ಏನೆಂಬುದನ್ನು ಹೇಳುತ್ತಾರೆ. ಅವರ ಮುಂದೆ ಚಪ್ಪಾಳೆ ಬಾರಿಸುವ ಜನಗಳೇ ನಾಳೆ ಬೈರಾಗಿಯೊಬ್ಬ ಸ್ಫಟಿಕದಂತೆ ಕಾಣುವ ಸ್ಪಾಂಜಿನ ಸರ ಹಿಂಡಿ ಕೊಡುವ ಕೊಳಚೆ ನೀರನ್ನೇ ಭಕ್ತಿಯಿಂದ ತೀರ್ಥ ಎಂದು ಕುಡಿಯುತ್ತಾರೆ. ಪ್ರೊ. ನರಸಿಂಹಯ್ಯ ‘ಸಾಯಿಬಾಬಾ ಕೇವಲ ಬೂದಿಯನ್ನೇ ಯಾಕೆ ಸೃಷ್ಟಿಸುತ್ತಾರೆ? ಚಿತ್ರಾವತಿಯ ಮರಳನ್ನು ಸಕ್ಕರೆಯಾಗಿ ಬದಲಾಯಿಸಬಾರದೆ?’ ಎಂದು ಕೇಳಿದಾಗಲೂ ಅಲ್ಲಿ ಹೋಗುವ ಸಹಸ್ರಾರು ಭಕ್ತರ ಚಿಂತನೆಯ ದಿಕ್ಕು ಬದಲಾಗಲಿಲ್ಲ. ಶೂನ್ಯದಿಂದ ವಸ್ತುಗಳನ್ನು ಸೃಷ್ಟಿಸಲಾಗುವುದಿಲ್ಲ ಎಂಬ ವಿಜ್ಞಾನಿಗಳ ಕೂಗಿಗೆ ಅರ್ಥವೇ ಬರಲಿಲ್ಲ. ಶಬರಿ ಮಲೆಯ ಜ್ಯೋತಿಯ ಸತ್ಯಾಸತ್ಯತೆ ವಿಚಾರವಾಗಿ ದನಿ ಎತ್ತಿದವರನ್ನೇ ಬೆದರಿಸುವ ತಂತ್ರ ನಡೆಯಿತು.ನಮ್ಮಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಿದ ಬಳಿಕ ಮಿತ್ರರೊಬ್ಬರು ಹೇಳುತ್ತಿದ್ದರು, ‘ಎಂಥ ಭಟ್ಟರು, ಇಪ್ಪತ್ತು ತೆಂಗಿನಕಾಯಿ, ಹತ್ತು ಸೀಯಾಳ, ಹತ್ತು ಸೇರಕ್ಕಿ, ಸಾವಿರ ರೂಪಾಯಿ, ದ್ರಾಕ್ಷಿ ಗೋಡಂಬಿ ಉತ್ತುತ್ತೆ -ಪಟ್ಟಿ ಕೊಟ್ಟು ಎಲ್ಲವನ್ನೂ ಸಾಗಿಸಿಕೊಂಡು ಹೋದರು. ನಿಜಕ್ಕೂ ಇಷ್ಟೆಲ್ಲಾ ಬೇಕಾಗುತ್ತದಾ?’ ನಾನು ಹೇಳಿದೆ, ‘ಈ ಪ್ರಶ್ನೆಯನ್ನು ಅವರಿಗೆ ಎಲ್ಲರೂ ಕೇಳುವವರೆಗೂ ಅವರು ಹಾಗೆಯೇ ಇರುತ್ತಾರೆ. ನಂಬುವವರು ಇರುವವರೆಗೆ ಟೋಪಿ ಹಾಕುವವರಿಗೆ ಅಭಾವ ಇಲ್ಲ’.

 - ಪ. ರಾಮಕೃಷ್ಣ ಶಾಸ್ತ್ರಿ,  ತೆಂಕಕಾರಂದೂರು, ಬೆಳ್ತಂಗಡಿ ತಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry