ನಂಬಿಗಾನಹಳ್ಳಿಯಲ್ಲೊಂದು ಪರಿಸರ ಮಿತ್ರ ಶಾಲೆ

7

ನಂಬಿಗಾನಹಳ್ಳಿಯಲ್ಲೊಂದು ಪರಿಸರ ಮಿತ್ರ ಶಾಲೆ

Published:
Updated:
ನಂಬಿಗಾನಹಳ್ಳಿಯಲ್ಲೊಂದು ಪರಿಸರ ಮಿತ್ರ ಶಾಲೆ

ಮಾಲೂರು: ಈ ಶಾಲೆ ಅವರಣಕ್ಕೆ ಕಾಲಿಟ್ಟೊಡನೆ ನಳನಳಿಸುವ ಗಿಡಗಳು ಸ್ವಾಗತಿಸುತ್ತವೆ. ಸ್ವಚ್ಛ ಶೌಚಾಲಯ ಸೇರಿದಂತೆ ಪರಿಸರದ ಬಗೆಗಿನ ಕಾಳಜಿ ಬೆರಗು ಮೂಡಿಸುತ್ತದೆ.ಮಟ್ಟಸವಾಗಿ ಸಮವಸ್ತ್ರ ಧರಿಸಿ ಟೈ ಬೆಲ್ಟ್ ಹಾಕಿಕೊಂಡು ಬರುವ ಮಕ್ಕಳು ಕಣ್ಸೆಳೆಯುತ್ತಾರೆ. ಇದು ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಕಾಣುವ ಸರ್ಕಾರಿ ಶಾಲೆ.ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಪೋಷಕರಿಗೆ ತಾಲ್ಲೂಕಿನ ಕಸಬಾ ಹೋಬಳಿಯ ಹುಂಗೇನಹಳ್ಳಿ ಕ್ಲಸ್ಟರ್‌ಗೆ ಸೇರಿದ ನಂಬಿಗಾನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಠ ಹೇಳುವಂತಿದೆ.ಗ್ರಾಮದ ಮಧ್ಯಭಾಗದಲ್ಲಿ 1959ರಲ್ಲಿ ಪ್ರಾರಂಭವಾದ ಶಾಲೆ ಸತತವಾಗಿ 42 ವರ್ಷಗಳಿಂದ ಮೂಲಸೌಕರ್ಯಗಳಿಂದ ವಂಚಿತವಾಗಿತ್ತು.2002ರಲ್ಲಿ ಮುಖ್ಯ ಶಿಕ್ಷಕರಾಗಿ ಶಾಲೆಗೆ ಬಂದ ವೆಂಕಟರಮಣಪ್ಪನವರ ಕಾಳಜಿ ಮತ್ತು ಕಾರ್ಯಕ್ಷಮತೆಯಿಂದ, ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿ ಸಹಕಾರದಿಂದ ಇಂದು ಸಾಕಷ್ಟು ಅಭಿವೃದ್ಧಿಯಾಗಿದೆ. ಮಧ್ಯಾಹ್ನ 3ರ ಬಳಿಕ ಎಲ್ಲ ಮಕ್ಕಳಿಗೂ ಇಂಗ್ಲಿಷ್ ಕಲಿಸುವ ವಿಶೇಷ ಯತ್ನವೂ ನಡೆಯುತ್ತಿರುವುದು ವಿಶೇಷ.1 ರಿಂದ 5 ನೇ ತರಗತಿವರೆಗೂ ಒಟ್ಟು 31 (1ನೇ ತರಗತಿಯಲ್ಲಿ ನಾಲ್ವರು, 2ನೇ ತರಗತಿಯಲ್ಲಿ ಐವರು, 3ನೇ ತರಗತಿಯಲ್ಲಿ ಆರು ಮಂದಿ, ನಾಲ್ಕನೇ ತರಗತಿಯಲ್ಲಿ 11 ಮಂದಿ, 5 ನೇ ತರಗತಿಯಲ್ಲಿ 8)ವಿದ್ಯಾರ್ಥಿಗಳಿರುವ ಶಾಲೆಯ ಮುಖ್ಯ ಶಿಕ್ಷಕರ ಕಾಳಜಿ ಮತ್ತು ನೂತನ ಯೋಜನೆಗಳಿಂದ ಪ್ರಭಾವಿತರಾದ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ಸಹಕರಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.ಕಲ್ಲು ಬಂಡೆಗಳಿಂದ ಅವೃತವಾಗಿದ್ದ ಶಾಲೆಯಲ್ಲಿ ಬಂಡೆಗಳನ್ನು ತೆರವುಗೊಳಿಸಿ ಸಿಮೆಂಟ್ ವೇದಿಕೆ ನಿರ್ಮಿಸಿಲಾಗಿದೆ. ಉತ್ತಮ 2 ಕೊಠಡಿಗಳಲ್ಲಿ ಬೋಧನೆ ನಡೆಸಲಾಗುತ್ತಿದೆ. ನೂತನ ಕಲಿಕಾ ವಿಧಾನಗಳ ಫಲಕಗಳನ್ನು ಹಾಕಲಾಗಿದೆ. ವಿಶಾಲವಾದ ಹಾಗೂ ಸುಸಜ್ಜಿತವಾದ ಅಡುಗೆ ಕೋಣೆ ನಿರ್ಮಿಸಲಾಗಿದೆ.ಮಕ್ಕಳಿಗೆ ಕುಡಿಯಲು ನೀರಿನ ಶುದ್ಧೀಕರಣ ಯಂತ್ರ ಅಳವಡಿಸಲಾಗಿದೆ. ವಿವಿಧ ರೀತಿಯ ಗಿಡಗಳನ್ನು ಬೆಳೆಸಲಾಗಿದೆ.  ಬಿಸಿಯೂಟಕ್ಕೆ ಅಗತ್ಯವಿರುವ ತರಕಾರಿಗಳನ್ನು ಶಾಲಾ ಅವರಣದಲ್ಲೆ ಬೆಳೆಸುವುದು ವಿಶೇಷ. ಅಲ್ಲದೆ ಮಳೆ ಕೊಯಿಲು ಪದ್ಧತಿಯನ್ನು ಅಳವಡಿಸಲಾಗಿದೆ.

 

ವಿದ್ಯುತ್ ಶಕ್ತಿ ಉಳಿಸುವ ಉದ್ದೇಶದಿಂದ ಕೈ ಪಂಪ್‌ನ್ನು ನೀರಿನ ತೊಟ್ಟಿಗೆ ಅಳವಡಿಸುವ ಮೂಲಕವೇ ನೀರನ್ನು ಬಳಸಲಾಗುತ್ತಿದೆ. 2010-11ಸಾಲಿನಲ್ಲಿ  ಸರಕಾರ ರಜತ ನೈಮಲ್ಯ ಪ್ರಶಸ್ತಿ, 50 ಸಾವಿರ ರೂಪಾಯಿಯನ್ನೂ  ಈ ಶಾಲೆಗೆ ನೀಡಿದೆ. ಅದೇ ಹಣವನ್ನು ಬಳಸಿ ಶಾಲೆ ಮುಂಭಾಗ ಕಬ್ಬಿಣದ ಶಾಶ್ವತ ಛಾವಣಿ ಹಾಕಲಾಗಿದೆ. ಮಕ್ಕಳ ಮಧ್ಯಾಹ್ನದ ಊಟ ನೆರಳಲ್ಲಿಯೇ ನಡೆಯುತ್ತದೆ.ರಾಜ್ಯ ಸರ್ಕಾರ 2008-09 ರಲ್ಲಿ ಈ ಶಾಲೆಗೆ ಕರ್ನಾಟಕ ರಾಜ್ಯ ಗುಣಮಟ್ಟ ಮೌಲ್ಯ ಅಂಕಣ ಪರೀಕ್ಷೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ ಆಯ್ಕೆ ಮಾಡಿ ರೂ. 4.5 ಸಾವಿರದ ಜೊತೆಗೆ ಪ್ರಶಸ್ತಿ ಫಲಕ ನೀಡಿದೆ. 2009-10 ರಲ್ಲಿ ಕಲಿಕಾ ಉಪಕರಣಗಳ ಪ್ರದರ್ಶನದಲ್ಲಿ ಜಿಲ್ಲಾ ಮಟ್ಟದಲ್ಲಿ ಈ ಶಾಲೆ ಪ್ರಥಮ ಸ್ಥಾನವನ್ನೂ ಗಳಿಸಿತ್ತು. ಇದೇ ವರ್ಷ ಶಾಲೆಯ ಮುಖ್ಯ ಶಿಕ್ಷಕ ವೆಂಕಟರಮಣಪ್ಪ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದರು.`ಬಡಕುಟುಂಬದಿಂದ ಬಂದ ನಾನು ಬೇರೆಯವರ ಮನೆಯಲ್ಲಿ ವ್ಯಾಸಂಗ ಮಾಡಿ ಶಿಕ್ಷಕನಾಗಿ ಸೇವೆ ಮಾಡುತ್ತಿರುವೆ. ನಮ್ಮ ತಂದೆಯ ಮಾತಿನಂತೆ ಕರ್ತವ್ಯದಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ಮಕ್ಕಳ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿದ್ದೇನೆ~ ಎಂದು ವೆಂಕಟರಮಣಪ್ಪ ವಿನಮ್ರತೆಯಿಂದ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry