ನಂಬಿ ಕೆಟ್ಟವರಿಲ್ಲವೋ ಮೀನನು

7

ನಂಬಿ ಕೆಟ್ಟವರಿಲ್ಲವೋ ಮೀನನು

Published:
Updated:

ಣ್ಣು ಹಾಯಿಸಿದ ಕಡೆಗಳಲ್ಲೆಲ್ಲಾ ಕೊಳಗಳು; ಇಡೀ ಊರಿನ ಭತ್ತದ ಗದ್ದೆಗಳೆಲ್ಲಾ ಈಗ ಮೀನು ಮರಿ ಪಾಲನಾ ಕೊಳಗಳಾಗಿವೆ. ಊರಿನ ಪ್ರತಿ ಯುವ ರೈತರ ಬಾಯಲ್ಲೂ ಸ್ಪಾನ್, ಪ್ರೈ, ಫಿಂಗರ್‌ಲಿಂಗ್ಸ್‌ನ ಮಾತುಗಳು ಸರಾಗ ಹರಿದಾಡುತ್ತವೆ. ಈ ‘ಪವಾಡ’ ನಡೆದಿದ್ದು ಕೇವಲ ನಾಲ್ಕು ವರ್ಷದಲ್ಲಿ.

ಶಿವಮೊಗ್ಗ ತಾಲ್ಲೂಕು ಹಾತಿಕಟ್ಟೆ, ಶೆಟ್ಟಿಕೊಪ್ಪ ಗ್ರಾಮಗಳು ಈಗ ಮೀನು ಮರಿ ಆರೈಕೆ ಮಾಡುವ ಕೇಂದ್ರಗಳಾಗಿವೆ. ಈ ಎರಡೂರಿನ ಯುವ ರೈತರು ರಾಜ್ಯದ ಮೀನು ಮರಿ ಬೇಡಿಕೆಯ ಅರ್ಧಕ್ಕಿಂತ ಹೆಚ್ಚು ಪೂರೈಸುತ್ತಾರೆ. ಭತ್ತದ ಕೃಷಿಯಿಂದ ಸಾಲಗಾರರಾಗಿದ್ದ ಅಪ್ಪಂದಿರನ್ನು ಈ ಯುವ ಕೃಷಿಕರು ಋಣಮುಕ್ತ ಮಾಡಿದ್ದಾರೆ. ಹೊಸ ಮನೆ ಕಟ್ಟಿದ್ದಾರೆ; ಮನೆ ಮುಂದೆ ಹೊಸ ಮೋಟಾರ್ ಬೈಕ್ ತಂದು ನಿಲ್ಲಿಸಿದ್ದಾರೆ. ಇದೆಲ್ಲಾ ಆಗಿದ್ದು ಮೀನು ಮರಿ ಕೃಷಿಯಿಂದ.ಶೆಟ್ಟಿಕೊಪ್ಪದ ಮಂಜುನಾಥ, ಕೃಷ್ಣಮೂರ್ತಿ, ರೇವಣ್ಣ, ಹಾತಿಕಟ್ಟೆಯ ರಮೇಶ್, ಸುರೇಶ್‌ ಮತ್ತಿತರ ಯುವ ಕೃಷಿಕರು ಮೀನು ಮರಿ ಕೃಷಿಯಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಒಬ್ಬೊಬ್ಬರೂ ಲಕ್ಷಾಂತರ ಮೀನು ಮರಿ ಸಾಕಿ, ಪೂರೈಕೆ ಮಾಡುವಷ್ಟು ಯಶಸ್ವಿ ಮಾರಾಟಗಾರರಾಗಿದ್ದಾರೆ. ಎಲ್ಲರೂ ಸೇರಿ ನಂದಿಬಸವೇಶ್ವರ ಮೀನು ಮರಿ ಉತ್ಪಾದನಾ ಸಂಘ ಸ್ಥಾಪಿಸಿದ್ದಾರೆ. ಸಂಘದಲ್ಲಿ 250 ಸದಸ್ಯರಿದ್ದು, ಸ್ಪಾನ್ ಮರಿ ತರುವುದು, ಮಾರಾಟ ಮಾಡುವುದು ಸೇರಿದಂತೆ ಎಲ್ಲಾ ವಹಿವಾಟನ್ನು ಸಂಘದ ಮೂಲಕವೇ ನಿರ್ವಹಿಸುತ್ತಿದ್ದಾರೆ. ಸ್ಫೂರ್ತಿ ನೀಡಿತು ದಿನಪತ್ರಿಕೆ ಲೇಖನ

ಶೆಟ್ಟಿಕೊಪ್ಪ ಊರಿಗೆ ಮೀನು ಮರಿ ಕೃಷಿ ಪರಿಚಯವಾಗಿದ್ದೇ ಯುವ ಕೃಷಿಕ ಮಂಜುನಾಥ ಅವರ ಮೂಲಕ. ಭತ್ತದ ಕೃಷಿಯಲ್ಲಿ ನೆಮ್ಮದಿ ಕಾಣದ ಮಂಜುನಾಥ ಪ್ರಥಮ ಡಿಗ್ರಿ ಮುಗಿಸಿದ್ದೇ ತಡ, ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಹೋಗಿದ್ದರು. ಅಲ್ಲಿ ಇದ್ದಿದ್ದು ಮೂರೇ ದಿವಸ. ಮತ್ತೆ ಊರಿನ ಹಾದಿ ಹಿಡಿದ ಮಂಜುನಾಥ ಅವರಿಗೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಬಂದ ಮೀನು ಮರಿ ಕೃಷಿ ಕುರಿತ ಲೇಖನ ಸ್ಫೂರ್ತಿ ನೀಡಿತು.

ಮೀನುಗಾರಿಕೆ ಇಲಾಖೆ ಸಂಪರ್ಕಿಸಿದರು. ಇಲಾಖೆ ಅಧಿಕಾರಿಗಳು ಮೊದಲು ಕೊಳ ನಿರ್ಮಿಸಿ ಎಂದರು. ಅದರಂತೆ ಸಣ್ಣ ಪ್ರಮಾಣದಲ್ಲಿ ಕೊಳ ನಿರ್ಮಿಸಿ, ಬಿ.ಆರ್‌.ಪ್ರಾಜೆಕ್ಟ್‌ನಿಂದ ಮೀನು ಮರಿ ತಂದರು. ಅದನ್ನು ಮೂರು ತಿಂಗಳು ಸಾಕಿದರು. ಆದರೆ, ಸೂಕ್ತ ಮಾಹಿತಿ ಕೊರತೆಯಿಂದ ಬಂದ ಲಾಭ ಅಷ್ಟಕ್ಕಷ್ಟೇ.ಇಂತಹ ವೇಳೆಯಲ್ಲಿ ನವುಲೆ ವಲಯ ಕೃಷಿ ಸಂಶೋಧನಾ ಕೇಂದ್ರದ ಒಳನಾಡು ಮೀನುಗಾರಿಕೆ ಘಟಕದ ಪ್ರಾಧ್ಯಾಪಕ ಡಾ.ಕೆ.ಮಂಜಪ್ಪ ಶೆಟ್ಟಿಕೊಪ್ಪಕ್ಕೆ ಕ್ಷೇತ್ರ ಸಮೀಕ್ಷೆಗೆ ಆಗಮಿಸಿದ್ದರು. ಅವರಿಗೆ ಮಂಜುನಾಥ ಅವರ ಹೊಸ ಪ್ರಯೋಗ ಕಣ್ಣಿಗೆ ಬಿತ್ತು. ಕರೆದು, ಮಾತನಾಡಿಸಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಸುಧಾರಿತ ಮೀನು ಮರಿಗಳ ಪಾಲನಾ ತಾಂತ್ರಿಕತೆಯ ಮಾಹಿತಿಯನ್ನು ನೀಡಿದರು.ಸ್ಪಾನ್ ಮೀನು ಮರಿಗಳನ್ನು ತರುವ ಮುಂಚೆ ಮೀನು ಕೊಳಗಳನ್ನು ಹೇಗೆ ತಯಾರಿ ಮಾಡಬೇಕು, ಅವುಗಳ ನಿರ್ವಹಣೆ ಹೇಗೆ? ಅವುಗಳ ಆಹಾರದ ಕ್ರಮ ಏನು? ಹುಳ--–-ಹುಪ್ಪಟೆಗಳಿಂದ ರಕ್ಷಿಸುವ ಕ್ರಮಗಳು ಯಾವುವು? ಈ ರೀತಿಯ ಸಮಗ್ರ ಮಾಹಿತಿ ಪಡೆದ ಮಂಜುನಾಥ, ಆರಂಭದ ವರ್ಷದಲ್ಲಿ 12 ಲಕ್ಷ ಕಾಟ್ಲ ಸ್ಪಾನ್ ಮರಿಗಳನ್ನು ಸಾಕಿ, 5.9 ಲಕ್ಷ ಬಿತ್ತನೆ ಮರಿಗಳನ್ನು ಮಾರಾಟ ಮಾಡಿದರು. ಕೇವಲ ಮೂರು ತಿಂಗಳಿನಲ್ಲಿ ಖರ್ಚು ಕಳೆದು ರೂ. 70 ಸಾವಿರ ಲಾಭ ಪಡೆದರು.ಈಗ ತಮ್ಮ 5 ಎಕರೆ ಭತ್ತದ ಗದ್ದೆಯನ್ನು ಮಂಜುನಾಥ ಕೊಳಗಳನ್ನಾಗಿ ಪರಿವರ್ತಿಸಿದ್ದಾರೆ. ಸಾಲದ್ದಕ್ಕೆ ಮೀನು ಮರಿ ಕೃಷಿಯಲ್ಲಿ ಬಂದ ಹಣದಲ್ಲೇ ಇನ್ನೆರಡು ಎಕರೆ ಗದ್ದೆ ಖರೀದಿಸಿ, ಅದರಲ್ಲಿಯೂ ಮೀನು ಮರಿ ಪಾಲನೆ ಮಾಡುತ್ತಿದ್ದಾರೆ. ಜತೆಗೆ ಪಕ್ಕದ ಊರಿನಲ್ಲಿ 3 ಎಕರೆ ಗುತ್ತಿಗೆ ಪಡೆದು ಅಲ್ಲಿಯೂ ಇದೇ ಕೃಷಿ ಕೈಗೊಂಡಿದ್ದಾರೆ. ಇವರೊಬ್ಬರೇ ಈ ವರ್ಷ 1.50 ಕೋಟಿ ಮೀನು ಮರಿ ಉತ್ಪಾದಿಸುವ ಗುರಿ ಹೊಂದಿದ್ದಾರೆ.ಮೀನು ಮರಿ ಸಾಗಾಟಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ತಾವೇ ಕ್ಯಾಂಟರ್‌ ವಾಹನವೊಂದನ್ನು ಕೊಂಡಿದ್ದಾರೆ. ಇದು ಮೀನು ಕೃಷಿ ಲಾಭದಿಂದ ಕೊಂಡಿದ್ದು ಎಂದು ಮಂಜುನಾಥ ಹೆಮ್ಮೆಯಿಂದ ಹೇಳುತ್ತಾರೆ. ಕ್ಯಾಂಟರ್‌ಗೆ ಆಮ್ಲಜನಕ ಸಿಲಿಂಡರ್ ಘಟಕ ಜೋಡಿಸಿದ್ದಾರೆ. ಮೀನು ಮರಿಗಾಗಿ ರಾಜ್ಯ, -ಹೊರರಾಜ್ಯಗಳಿಂದಲೂ ಬೇಡಿಕೆಯ ಕರೆಗಳು ಮಂಜುನಾಥ ಅವರ ಮೊಬೈಲ್‌ಗೆ ಬರುತ್ತವೆ. 29 ಹರೆಯದ ಮಂಜುನಾಥ ಅಪ್ಪ ಮಾಡಿದ ಸಾಲ ತೀರಿಸಿ, ಇಡೀ ಊರಿಗೆ ಮಾದರಿಯಾಗಿದ್ದಾರೆ.ಮಂಜುನಾಥ ತುಳಿದ ಹಾದಿಯನ್ನು ಅವರದೇ ಊರಿನ ಯುವಕರಷ್ಟೇ ಅಲ್ಲ ಪಕ್ಕದ ಹಾತಿಕಟ್ಟೆಯ 100ಕ್ಕೂ ಹೆಚ್ಚು ಯುವಕರು ತುಳಿದಿದ್ದಾರೆ. ವರ್ಷದಿಂದ ವರ್ಷಕ್ಕೆ ಯಶಸ್ಸನ್ನೂ ಕಾಣುತ್ತಿರುವ ಈ ಯುವ ರೈತರು, ಮೀನು ಮರಿ ಕೃಷಿಯಲ್ಲಿ ಭರವಸೆ ಬದುಕು ಕಂಡಿದ್ದಾರೆ. ‘ಈ ಮೊದಲು ಯುವಕರು ಮೀನು ಕೃಷಿ ಮಾಡುತ್ತಿದ್ದರೂ ಅವರಿಗೆ ತಾಂತ್ರಿಕ ಮಾಹಿತಿ ಕೊರತೆ ಇತ್ತು.

ಅದನ್ನು ನೀಗಿಸುವ ಪ್ರಯತ್ನವನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ತರಬೇತಿ ನೀಡಿ, ಮಾಡಲಾಯಿತು. ಇದರಿಂದ ಸ್ಪಾನ್ ಮೀನು ಮರಿಗಳ ಸಾಯುವ ಸಂಖ್ಯೆ ಕಡಿಮೆಯಾಯಿತು. ಇಳುವರಿ ಹೆಚ್ಚಾಯಿತು. ಈ ಊರಿನ ಯುವಕರು ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ’ ಎನ್ನುತ್ತಾರೆ ನವುಲೆ ವಲಯ ಕೃಷಿ ಸಂಶೋಧನಾ ಕೇಂದ್ರ ಒಳನಾಡು ಮೀನುಗಾರಿಕೆ ಘಟಕದ ಪ್ರಾಧ್ಯಾಪಕ ಡಾ.ಕೆ.ಮಂಜಪ್ಪ.  
ಈ ಯುವ ಕೃಷಿಕರಿಗೆ ಮೀನು ಮರಿಗಳ ಪೂರೈಕೆ ಬಿಆರ್‌ಪಿ ಮೀನು ಮರಿ ಉತ್ಪಾದನಾ ಮತ್ತು ತರಬೇತಿ ಕೇಂದ್ರದಿಂದ ಆಗುತ್ತದೆ. ಇಲ್ಲಿ ಉತ್ಪಾದನೆಯಾಗುವ ಮೀನು ಮರಿಗಳು 6 ಮಿಲಿ ಮೀಟರ್ ಉದ್ದವಿದ್ದು, ಇವುಗಳನ್ನು ಸ್ಪಾನ್ ಎಂದು ಕರೆಯಲಾಗುತ್ತದೆ. ಒಂದು ಲಕ್ಷ ಸ್ಪಾನ್ ಮೀನು ಮರಿಗಳಿಗೆ ರೂ. 1 ಸಾವಿರ ಶುಲ್ಕ.ಮರಿಗಳನ್ನು ಗಾಳಿ ತುಂಬಿದ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ತಂದು ಪಾಲನಾ ಕೊಳಗಳಲ್ಲಿ ಬಿಡಬೇಕಾಗುತ್ತದೆ.

ಇದಕ್ಕೂ ಮೊದಲು ಕೊಳದ ಮಣ್ಣಿನ ಪರೀಕ್ಷೆ ಮಾಡಿಸಿ, ಮೀನಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಕೊಳಗಳಲ್ಲಿ ಸ್ಟಾನ್ ಮೀನು ಮರಿಗಳ ಪಾಲನೆ ಕೇವಲ 15ರಿಂದ 20 ದಿವಸ ಮಾತ್ರ. ಈ ಅವಧಿಯಲ್ಲಿ ಇವು 20ರಿಂದ 25 ಮಿ.ಮೀ. ಉದ್ದ ಬೆಳೆಯುತ್ತವೆ.

ಈ ಹಂತಕ್ಕೆ ಬೆಳದ ಮರಿಗಳನ್ನು ಪ್ರೈ ಮೀನು ಮರಿಗಳೆಂದು ಕರೆಯಲಾಗುತ್ತದೆ. ಪ್ರೈ ಮೀನುಗಳು ಗರಿಷ್ಠ ಮೂರು ತಿಂಗಳಿಗೆ ಸುಮಾರು 5ರಿಂದ 6 ಸೆಂ.ಮೀ. ಉದ್ದ ಬೆಳೆಯುತ್ತವೆ. ಇವುಗಳನ್ನು ಫಿಂಗರ್‌ಲಿಂಗ್ಸ್ ಎಂದು ನಾಮಕರಣ ಮಾಡಲಾಗಿದೆ.

ಈ ಹಂತದ ಮೀನು ಮರಿಗಳು ಕೆರೆ, ಜಲಾಶಯಗಳಲ್ಲಿ ಬಿತ್ತನೆಗೆ ಯೋಗ್ಯವಾಗಿರುತ್ತವೆ. ಪ್ರತಿ ಸಾವಿರ ಮರಿಗೆ ರೂ. 260ನಂತೆ ಮಾರಾಟ ಮಾಡಲಾಗುತ್ತದೆ.

‘ಕೃಷಿ ಭೂಮಿ ಇದ್ದರೂ ಬಹಳಷ್ಟು ಯುವಕರು ಇಂದು ಬೆಂಗಳೂರಿಗೆ ಹೋಗಿ ಹೋಟೆಲ್‌ನಲ್ಲಿ ಲೋಟ ತೊಳೆಯುವ ಕೆಲಸ ಮಾಡುತ್ತಿದ್ದಾರೆ. ಅಂತಹವರು ಸ್ವಲ್ಪ ಭಿನ್ನವಾಗಿ ಆಲೋಚಿಸಿ, ಕೃಷಿ ಮಾಡಿದರೆ ಇದ್ದೂರಲ್ಲೇ ನೆಮ್ಮದಿಯಿಂದ ಬದುಕಬಹುದು.

ಇದನ್ನು ಸಾಧಿಸಿದ ಹಾತಿಕಟ್ಟೆ, ಶೆಟ್ಟಿಕೊಪ್ಪ ಯುವಕರು ಮಾದರಿಯಾಗಿದ್ದಾರೆ’ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಡಾ.ಮಂಜಪ್ಪ. ಈ ಯುವಕರನ್ನೇ ಅನುಸರಿಸಿ ಈಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ, ಸಾಗರ ತಾಲ್ಲೂಕುಗಳಲ್ಲಿ ಸುಮಾರು 400 ಎಕರೆ ಪ್ರದೇಶದಲ್ಲಿ ಮೀನು ಕೃಷಿಯನ್ನು ಹೆಚ್ಚಾಗಿ ಯುವಕರೇ ಕೈಗೊಂಡಿದ್ದಾರೆ. ಈ ವಿನೂತನ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಯುವಕರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ‘ಒಂದು ರೂಪಾಯಿಗೆ ಒಂದು ಮೀನು ಖರೀದಿಸಲಾಗುವುದು’ ಎಂದು ಭರವಸೆ ನೀಡಿದ್ದ ಮೀನುಗಾರಿಕೆ ಇಲಾಖೆ, ಇದುವರೆಗೂ ಇವರಿಂದ ಮೀನು ಕೊಂಡುಕೊಳ್ಳುವ ಬಗ್ಗೆ ಮಾತನಾಡುತ್ತಿಲ್ಲ.ಈ ವರ್ಷ ಉತ್ತಮ ಮಳೆಯಾಗಿ ಬಹುತೇಕ ಜಲಾಶಯಗಳು, ಕೆರೆ-ಕಟ್ಟೆ, ಹಳ್ಳ-ಕೊಳ್ಳ ತುಂಬಿದ್ದರೂ ಮೀನುಗಾರಿಕೆ ಇಲಾಖೆ ಮೀನು ಮರಿಗಳನ್ನು ಖರೀದಿಸುವ ಪ್ರಕ್ರಿಯೆಗಳನ್ನೇ ಆರಂಭಿಸದಿರುವುದು ಈ ಯುವ ಕೃಷಿಕರನ್ನು ಆತಂಕಕ್ಕೀಡು ಮಾಡಿದೆ.‘ಮೀನು ಕೊಳ ನಿರ್ಮಿಸುವವರಿಗೆ ಮೀನುಗಾರಿಕೆ ಇಲಾಖೆಯಿಂದ ಸಬ್ಸಿಡಿ ನೀಡಬೇಕು. ಆದರೆ, ಆರಂಭದಲ್ಲಿ ಈ ಕೃಷಿ ಮಾಡಿದ ನಮ್ಮಂತಹ ನಾಲ್ಕು ಜನರಿಗೆ ಸಬ್ಸಿಡಿ ನೀಡಿದ್ದು ಬಿಟ್ಟರೆ ಈಗ ಸರ್ಕಾರ ಸಲ್ಲದ ನಿಯಮಗಳನ್ನು ಹೇಳುತ್ತದೆ. ಕನಿಷ್ಠ ಒಂದು ಎಕರೆಯಲ್ಲಿ ಕೃಷಿ ಮಾಡಬೇಕು; ಕೃಷಿ ಮಾಡುವವರ ಹೆಸರಿನಲ್ಲೇ ಜಮೀನು ಇರಬೇಕು.

ಈ ರೀತಿಯ ಸಬೂಬುಗಳನ್ನು ಹೇಳುತ್ತದೆ; ಅಷ್ಟೇ ಏಕೆ ದಾಖಲಾತಿಗಳೆಲ್ಲವೂ ಸರಿ ಇದ್ದವರಿಗೂ ಇದುವರೆಗೂ ಸಬ್ಸಿಡಿ ನೀಡಿಲ್ಲ’ ಎನ್ನುತ್ತಾರೆ ಮೀನು ಮರಿ ಯುವ ಕೃಷಿಕ ಮಂಜುನಾಥ. ಸ್ಪಾನ್ ಮೀನು ಮರಿಗಳಿಗೆ ಹಾಕುವ ಶೇಂಗಾ ಹಿಂಡಿ ಬೆಲೆ ಕ್ವಿಂಟಾಲ್‌ಗೆ ರೂ.1,200ರಿಂದ ರೂ.2,200ಕ್ಕೆ ಏರಿಕೆಯಾಗಿದೆ. ಸ್ಟೀಮ್‌ ತೌಡು 30 ಕೆ.ಜಿ. ಚೀಲಕ್ಕೆ ರೂ. 780 ಆಗಿದ್ದು, ಈಗ ರೂ. 1,480 ಆಗಿದೆ.1ಲಕ್ಷ ಸ್ಪಾನ್‌ ಮೀನು ಮರಿಗಳಿಗೆ ರೂ. 1ಸಾವಿರ ಕೊಟ್ಟು ಖರೀದಿಸಬೇಕು. ಇದರ ಜತೆಗೆ ಕೊಳ ನಿರ್ಮಾಣ, ಸುಣ್ಣ, ಹಸಿ ಸಗಣಿ ಗೊಬ್ಬರ, ಸೂಪರ್‌ ಫಾಸ್ಪೇಟ್‌ ಗೊಬ್ಬರ ಸಿಂಪಡಿಸುವ ಖರ್ಚು ಬೇರೆ ಎನ್ನುವ ಕೃಷಿಕ ರಮೇಶ್‌, ಆದರೆ, ಇದು ಭತ್ತ ಬೆಳೆಯುವುದಕ್ಕಿಂತ ಉತ್ತಮ ಎನ್ನುವ ಮಾತನ್ನೂ ಸೇರಿಸುತ್ತಾರೆ.
ಈ ಯುವ ರೈತರು ಸಾಕಿದ ಮೀನು ಮರಿಗಳಿಗೆ ಗಿರಾಕಿಗಳು ಕೆರೆ ಬಳಕೆದಾರರ ಸಂಘಗಳು. ಈಗ ಪ್ರತಿ ಊರಿನ ಕೆರೆಯಲ್ಲೂ ಮೀನು ಮರಿಗಳನ್ನು ಸಾಕುತ್ತಿದ್ದು, ಕೆರೆಗಳನ್ನು ಗುತ್ತಿಗೆ ಹಿಡಿದವರು ನೇರವಾಗಿ ಇಲ್ಲಿಗೆ ಬಂದು ಖರೀದಿಸುತ್ತಾರೆ.

ಸರ್ಕಾರ, ಜಲಾಶಯಗಳಲ್ಲಿ ಮೀನು ಮರಿ ಬಿಡುವಾಗಲೂ ಇವರಿಂದಲೇ ಖರೀದಿಸುತ್ತದೆ. ಮಳೆ ಮುಗಿಯುವುದರ ಒಳಗೆ ಸರ್ಕಾರ ಮೀನು ಮರಿಗಳನ್ನು ಖರೀದಿಸಬೇಕು ಎಂಬುದು ಈ ರೈತರ ಒಕ್ಕೊರಲ ಮನವಿ.

‘ಶ್ರಮಪಟ್ಟರೆ ಮೂರು ತಿಂಗಳಿನಲ್ಲಿ ಎರಡು ಮೀನು ಮರಿ ಬೆಳೆ ತೆಗೆಯಬಹುದು. ಒಂದು ಎಕರೆಯಿಂದ ಕನಿಷ್ಠ ರೂ. 1ಲಕ್ಷ ಲಾಭ ಮಾಡಿಕೊಳ್ಳಬಹುದು. ಆದರೆ, ಸರ್ಕಾರ ನಿರಂತರವಾಗಿ ಮೀನು ಮರಿ ಖರೀದಿಸಬೇಕು’ ಎನ್ನುತ್ತಾರೆ ನಂದಿಬಸವೇಶ್ವರ ಮೀನು ಮರಿ ಉತ್ಪಾದನಾ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ.

ಹಾತಿಕಟ್ಟೆಯ ಕೃಷಿಕ ಸುರೇಶ್‌ ಅವರಿಗೆ ಇದ್ದಿದ್ದು 7 ಎಕರೆ ಭತ್ತದ ಗದ್ದೆ. ಇದರಲ್ಲಿ 2 ಎಕರೆಯಲ್ಲಿ ಮೀನು ಕೃಷಿ ಮಾಡುತ್ತಿದ್ದಾರೆ. ಮೊದಲಿಗೆ ಒಂದು ಎಕರೆಯಲ್ಲಿ ಆರಂಭಿಸಿದ ಈ ಕೃಷಿ ಕೈ ಹಿಡಿದಿದ್ದರಿಂದ ಮತ್ತೊಂದು ಎಕರೆಗೆ ವಿಸ್ತರಿಸಿದ್ದಾರೆ.

ಒಟ್ಟು 35 ಕೊಳಗಳನ್ನು ನಿರ್ಮಿಸಿರುವ ಸುರೇಶ್ ಈ ವರ್ಷ 1ಕೋಟಿ ಸ್ಪಾನ್ ಮೀನು ಮರಿಗಳನ್ನು ತಂದು ಸಾಕುತ್ತಿದ್ದಾರೆ. ಈಗಾಗಲೇ 3 ಲಕ್ಷ ಮರಿಗಳನ್ನು ಮಾರಿದ್ದು, ಬಾಕಿ ಮೀನು ಮರಿಗಳಿಗೆ ಗಿರಾಕಿಗಳನ್ನು ಎದುರು ನೋಡುತ್ತಿದ್ದಾರೆ.

--ಪ್ರಕಾಶ್ ಕುಗ್ವೆ / ಚಿತ್ರಗಳು: ಶಿವಮೊಗ್ಗ ನಾಗರಾಜ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry