ಸೋಮವಾರ, ಜೂನ್ 14, 2021
22 °C

ನಕಲಿಗಳ ಕೈಯಲ್ಲಿ ಬಿಜೆಪಿ: ಜಸ್ವಂತ್‌ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಧ್‌ಪುರ (ಪಿಟಿಐ): ಟಿಕೆಟ್‌ ನಿರಾಕರಣೆಯಿಂದ ಮುನಿಸಿಕೊಂಡಿರುವ ಬಿಜೆಪಿ ಹಿರಿಯ ನಾಯಕ ಜಸ್ವಂತ್‌ ಸಿಂಗ್‌ ಅವರು ಬಾರ್ಮೇರ್‌ ಕ್ಷೇತ್ರದ ಟಿಕೆಟ್‌ ಬೇಡಿಕೆ ಬಗ್ಗೆ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸುವ ಅವಕಾಶವನ್ನು ಮುಕ್ತವಾಗಿ ಇರಿಸಿಕೊಂಡಿದ್ದಾರೆ.ಕೆರಳಿರುವ ಜಸ್ವಂತ್‌ ಸಿಂಗ್‌ ಪಕ್ಷದ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈಗ ಅಸಲಿ ಬಿಜೆಪಿ ಯಾವುದು ಮತ್ತು ನಕಲಿ ಬಿಜೆಪಿ ಯಾವುದು ಎಂಬು ದನ್ನು ಗುರುತಿಸಬೇಕಿದೆ ಎಂದು ಜಸ್ವಂತ್‌ ಹೇಳಿದ್ದಾರೆ.ಪಕ್ಷದ ನಾಯಕತ್ವವನ್ನು ಅವರು ಪರೋಕ್ಷವಾಗಿ ಟೀಕಿಸಿದರೂ ಯಾರದೇ ಹೆಸರು ಪ್ರಸ್ತಾಪಿಸಲಿಲ್ಲ.   ‘ಇದು ಎರಡನೇ ಬಾರಿ ಪಕ್ಷ ನನಗೆ ಹೀಗೆ ಮಾಡು­ತ್ತಿದೆ. ಯಾವುದೇ ಪರ್ಯಾಯ ಪ್ರಸ್ತಾಪ­ವನ್ನು ಒಪ್ಪಿ­ಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಬಾರ್ಮೇರ್‌ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ವಲಸೆ ಬಂದಿರುವ ಕರ್ನಲ್‌ ಸೋನಾರಾಂ ಚೌಧರಿ ಅವರಿಗೆ ಟಿಕೆಟ್‌ ನೀಡಿದ ಮರುದಿನ ಜಸ್ವಂತ್‌ ಹೇಳಿದರು.ಜಸ್ವಂತ್‌ ಅವರು ಭಾನುವಾರ ಬಾರ್ಮೇರ್‌ಗೆ ತಲುಪಲಿದ್ದು ‘ಬಾರ್ಮೇರ್‌ ತಲುಪಿ ಬೆಂಬಲಿಗ­ರೊಂದಿಗೆ ಸಮಾಲೋಚನೆ ನಡೆಸಿದ ನಂತರವಷ್ಟೇ ಎಲ್ಲವೂ ನಿರ್ಧಾರವಾಗಲಿದೆ’ ಎಂದು ತಿಳಿಸಿದರು. ಸೋಮವಾರ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ.‘ಸೈದ್ಧಾಂತಿಕವಾದ ಪಕ್ಷವನ್ನು ಬಿಜೆಪಿಯ ಸಿದ್ಧಾಂತದ ಬದ್ಧ ವಿರೋಧಿಗಳು ಅತಿಕ್ರಮಿಸಿಕೊಂಡಿರು­ವುದು ದುರಂತ’ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಈ ಮಧ್ಯೆ, ಜಸ್ವಂತ್‌ ಅವರಂತಹ ಹಿರಿಯರ ಸೇವೆಯನ್ನು ಪಕ್ಷ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲಿದೆ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಮತ್ತು   ಪಕ್ಷದ ನಾಯಕ ಅರುಣ್‌ ಜೇಟ್ಲಿ ಹೇಳಿದ್ದಾರೆ.ಸುಷ್ಮಾಗೆ ನೋವು: ಜಸ್ವಂತ್‌ ಅವರಿಗೆ ಟಿಕೆಟ್‌ ನಿರಾಕರಿಸಿರುವುದರಿಂದ ನೋವಾಗಿದೆ ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಆದರೆ ಇಂತಹ ಅಸಾಧಾರಣ ನಿರ್ಧಾರಗಳನ್ನು ಸೂಕ್ತ ಕಾರಣ ಇಲ್ಲದೆ ತೆಗೆದುಕೊಳ್ಳಲಾಗುವುದಿಲ್ಲ. ಇದು ಪಕ್ಷದ ನಿರ್ಧಾರ ಎಂದು ಅಭಿಪ್ರಾಯಪಟ್ಟರು.

‘ಅಡ್ವಾಣಿ ಯುಗ ಕೊನೆಗೊಂಡಿಲ್ಲ’

ಮುಂಬೈ (ಪಿಟಿಐ): ಹಿರಿಯ ನಾಯಕ ಅಡ್ವಾಣಿ ಅವರಿಗೆ ಟಿಕೆಟ್‌ ನೀಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಮಿತ್ರ ಪಕ್ಷ ಶಿವಸೇನೆ, ಅವರಿಗೆ ಟಿಕೆಟ್‌ ನೀಡಲು ಅಷ್ಟು ಸಮಯ ತೆಗೆದುಕೊಂಡಿದ್ದೇಕೆ ಎಂದು ಪ್ರಶ್ನಿಸಿದೆ.‘ಬಿಜೆಪಿಯಲ್ಲಿ ನರೇಂದ್ರ ಮೋದಿ ಯುಗ ಆರಂಭಗೊಂಡಿದೆ ಎಂದರೆ, ಎಲ್‌.ಕೆ. ಅಡ್ವಾಣಿ ಅವರ ಯುಗ ಕೊನೆಗೊಂಡಿದೆ ಎಂದರ್ಥವಲ್ಲ’ ಎಂದೂ ಶಿವಸೇನೆ ಹೇಳಿದೆ.‘ಅಡ್ವಾಣಿ ಅವರ ಹೆಸರು ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ಇರಬೇಕಿತ್ತು. ಆದರೆ ಹಾಗೆ ಆಗಲಿಲ್ಲ. ಬಿಜೆಪಿಯನ್ನು ಕಟ್ಟಿ ಬೆಳೆಸಿದ ಹಾಗೂ     ಪಕ್ಷಕ್ಕೆ ಘನತೆಯನ್ನು ತಂದುಕೊಟ್ಟ ವ್ಯಕ್ತಿಯನ್ನು ಹಲವು ದಿನಗಳ ಕಾಲ ಕಾಯಿಸಲಾಯಿತು’ ಎಂದು ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರು ಹೇಳಿದ್ದಾರೆ.

‘ಅಡ್ವಾಣಿ ಹೆಸರು ಪ್ರಕಟಿಸಲು ಬಿಜೆಪಿ ಯಾಕೆ ಅಷ್ಟು ಸಮಯ ತೆಗೆದು­ಕೊಂಡಿತು? ಹಾಗೆ ಮಾಡಿ ಅವರಿಗೆ ಅವಮಾನ ಮಾಡ­ಲಾಯಿತು’ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಉದ್ಧವ್‌ ಠಾಕ್ರೆ ಬರೆದಿದ್ದಾರೆ.ಬಿಜೆಪಿಯ ಹಿರಿಯ ಮುಖಂಡನ ರಾಜ­ಕೀಯ ವ್ಯಕ್ತಿತ್ವ ‘ಕಳಂಕ’ ರಹಿತ­ವಾಗಿದೆ ಎಂದೂ ಅವರು ಬಣ್ಣಿಸಿದ್ದಾರೆ.ಬಿಜೆಪಿ ಮುಖಂಡ ನಿತಿನ್‌ ಗಡ್ಕರಿ ಅವರು ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಅವರನ್ನು ಭೇಟಿಯಾದ ಬಳಿಕ ಬಿಜೆಪಿ–ಶಿವಸೇನೆ ಮೈತ್ರಿಯಲ್ಲಿ ಬಿರುಕು ಕಂಡು ಬಂದಿರುವ ಸಂದರ್ಭದಲ್ಲಿ ಉದ್ಧವ್‌ ಠಾಕ್ರೆ ಅವರ ಈ   ಹೇಳಿಕೆ ಹೊರ ಬಿದ್ದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.