ನಕಲಿ ಕಂಪೆನಿಗಳಿಂದ ‘ಅನುಭವ ಪತ್ರ’ !

7

ನಕಲಿ ಕಂಪೆನಿಗಳಿಂದ ‘ಅನುಭವ ಪತ್ರ’ !

Published:
Updated:

ಬೆಂಗಳೂರು: ಯಾವುದೇ ಉದ್ಯೋಗಕ್ಕೆ ಬೇಕಾದ ‘ಅನುಭವದ ಪ್ರಮಾಣ ಪತ್ರ’ ನೀಡುವ ನಕಲಿ ಸಂಸ್ಥೆಗಳು ದೇಶದಲ್ಲಿ ವಿಪರೀತವಾಗಿವೆ. ರಾಜ್ಯದಲ್ಲಿಯೂ ಇಂತಹ ಸಂಸ್ಥೆಗಳು ಸಾಕಷ್ಟು ಇದ್ದು, ಉದ್ಯೋಗ ನೀಡುವವರನ್ನು ಹಾಗೂ ಉದ್ಯೋಗ ಆಕಾಂಕ್ಷಿಗಳನ್ನು ವಂಚಿ­ಸುತ್ತಿವೆ.ಬೆಂಗಳೂರಿನ ರಿಝೋರ್ಸ್‌ ಸಂಶೋ­ಧನಾ ಪ್ರತಿಷ್ಠಾನ ದೇಶಾದ್ಯಂತ ಇರುವ ಇಂಥ 1500ಕ್ಕೂ ಹೆಚ್ಚು ಸಂಸ್ಥೆಗಳನ್ನು ಗುರುತಿಸಿ ತನ್ನ ವೆಬ್‌ಸೈಟ್‌ನಲ್ಲಿ ಹಾಕಿದೆ. ಯಾರು ಬೇಕಾದರೂ ಈಗ ನಕಲಿ ಸಂಸ್ಥೆಗಳು ಯಾವುದು, ಅಸಲಿ ಸಂಸ್ಥೆ ಯಾವುದು ಎನ್ನುವುದನ್ನು ಉಚಿತವಾಗಿ ನೋಡ­ಬಹುದಾಗಿದೆ.ಈ ರೀತಿ ನಕಲಿ ಪ್ರಮಾಣ ಪತ್ರಗಳನ್ನು ನೀಡುವ ಸಂಸ್ಥೆಗಳನ್ನು ತಿಳಿಯುವ ಬಯಕೆ ಇದ್ದರೆ www.rezorce.comಗೆ ಹೋಗಿ ಅಲ್ಲಿ Rezorcec~checkTM ಬಟನ್‌ ಒತ್ತಿದರೆ ಮೆನು ಬರುತ್ತದೆ. ಅದರಲ್ಲಿ ಕಂಪೆನಿಯ ಹೆಸರನ್ನು ಬರೆದರೆ ಅದು ನಕಲಿಯೋ ಅಥವಾ ಅಸಲಿಯೋ ಎನ್ನುವುದನ್ನು ತಿಳಿಯಬಹುದಾಗಿದೆ.ಈ ನಕಲಿ ಕಂಪೆನಿಗಳು ಯಾವುದೇ  ಉದ್ಯೋಗಕ್ಕೆ ಸಂಬಂಧಿಸಿದಂತೆ  ಎಷ್ಟೇ ವರ್ಷಗಳ ಅನುಭವದ ಪ್ರಮಾಣ ಪತ್ರಗಳನ್ನು ಬೇಕಾದರೂ ನೀಡುತ್ತವೆ. ಒಂದು ವರ್ಷದ ಅನುಭವದ ಪ್ರಮಾಣ ಪತ್ರಕ್ಕೆ 15 ಸಾವಿರ ರೂಪಾಯಿಯಂತೆ ಶುಲ್ಕ ಪಡೆದುಕೊಳ್ಳುತ್ತವೆ.

ಇಂತಹ ಬಹುತೇಕ ನಕಲಿ ಕಂಪೆನಿಗಳಿಗೆ ವೆಬ್‌ಸೈಟ್‌ಗಳಿವೆ. ಫೋನ್‌ ನಂಬರ್‌, ಇ–ಮೇಲ್‌ ಎಲ್ಲವೂ ಇವೆ. ಯಾವುದೇ ಅಸಲಿ ಕಂಪೆನಿ ತನ್ನಲ್ಲಿ ನೌಕರಿಗೆ ಸೇರಲು ಬರುವ ಅಭ್ಯರ್ಥಿ ನೀಡಿದ ಅನುಭವದ ಪ್ರಮಾಣ ಪತ್ರದ ಬಗ್ಗೆ ಸ್ಪಷ್ಟನೆ ಕೇಳಿದರೆ ತಕ್ಷಣದಲ್ಲಿಯೇ ನೀಡುತ್ತವೆ. ಆದರೆ ಇವು ಸರ್ಕಾರದಿಂದ ಮಾನ್ಯತೆ ಪಡೆದಿರುವುದಿಲ್ಲ ಅಥವಾ ನೋಂದಣಿಯಾಗಿರುವುದಿಲ್ಲ.ದೇಶದಲ್ಲಿ ಕಾರ್ಯ ನಿರ್ವಹಿಸುವ ಕಂಪೆನಿಗಳು ಕೇಂದ್ರ ಸರ್ಕಾರದ ಕಂಪೆನಿ ವ್ಯವ­ಹಾರಗಳ ಸಚಿವಾಲಯ, ಆದಾಯ ತೆರಿಗೆ ಇಲಾಖೆ, ಸೇವಾ ತೆರಿಗೆ ಇಲಾಖೆ, ಮೌಲ್ಯವರ್ಧಿತ ತೆರಿಗೆ ಇಲಾಖೆ, ಭವಿಷ್ಯ ನಿಧಿ ಇಲಾಖೆ, ಇಎಸ್‌ಐ, ಮಾಹಿತಿ ನಿರ್ದೇಶನಾಲಯ ಅಥವಾ ಸ್ಥಳೀಯ ಸಂಸ್ಥೆಗಳ ಪೈಕಿ ಯಾವುದಾದರೂ ಒಂದು ಕಡೆ ನೋಂದಣಿ ಆಗಿರಲೇ ಬೇಕು. ಆದರೆ ಈ ರೀತಿ ಎಲ್ಲಿಯೂ ನೋಂದಣಿ ಆಗದೆ ಕೇವಲ ಅನುಭವದ ಪ್ರಮಾಣ ಪತ್ರಗಳನ್ನು ನೀಡುವುದ ಕ್ಕಾಗಿಯೇ ಹುಟ್ಟಿಕೊಂಡ ಕಂಪೆನಿಗಳು ಸಾಕಷ್ಟಿವೆ.ಅಪಾಯ: ‘ನಿಮಗೆ ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿ 5 ವರ್ಷದ ಅನುಭವ ಇರುವ ಬಗ್ಗೆ ಪ್ರಮಾಣ ಪತ್ರ ಬೇಕು ಎಂದರೆ ನಕಲಿ ಸಾಫ್‌್ಟವೇರ್‌ ಕಂಪೆನಿಯೊಂದು ಅದನ್ನು ನೀಡುತ್ತದೆ. ಎಚ್‌.ಆರ್‌. ಮ್ಯಾನೇಜರ್‌, ಎಂಜಿನಿಯರ್‌, ವೈದ್ಯಕೀಯ ಹೀಗೆ ಯಾವುದೇ ಕ್ಷೇತ್ರದ ಅನುಭವದ ಪ್ರಮಾಣ ಪತ್ರಗಳೂ ಇಲ್ಲಿ ದೊರೆಯುತ್ತವೆ.ಇವು ಉದ್ಯೋಗ ನೀಡುವ ಕಂಪೆನಿಗಳನ್ನು ಮಾತ್ರ ಮೋಸ ಮಾಡುವುದಿಲ್ಲ. ಅಭ್ಯರ್ಥಿಗಳನ್ನೂ ಸಂಕಷ್ಟಕ್ಕೆ ಸಿಲುಕಿಸುತ್ತವೆ. ನಕಲಿ ಪ್ರಮಾಣ ಪತ್ರ ಪಡೆದು ಕೆಲಸಕ್ಕೆ ಸೇರಿದರೂ, ನಂತರ ಕೆಲಸ ಗೊತ್ತಿಲ್ಲದೆ ಇರುವುದರಿಂದ ಕಂಪೆನಿಗಳು ಇಂತಹ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಸಂಭವ ಹೆಚ್ಚು. ಆಗ ಹೆಚ್ಚಿನ ಸಂಬಳದ ಆಸೆಗಾಗಿ ನಕಲಿ ಪ್ರಮಾಣ ಪತ್ರದ ಮೂಲಕ ಕೆಲಸ ಗಿಟ್ಟಿ­ಸಿಕೊಂಡವರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ’ ಎಂದು ರಿಝೋರ್ಸ್‌ ಸಂಶೋಧನಾ ಪ್ರತಿ­ಷ್ಠಾನದ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ನರೇಂದ್ರ ಹೇಳುತ್ತಾರೆ.ನಕಲಿ ಪ್ರಮಾಣ ಪತ್ರಗಳನ್ನು ನೀಡುವುದಲ್ಲದೆ ಸಂದರ್ಶನಕ್ಕೆ ಅಭ್ಯರ್ಥಿಗಳನ್ನು 15 ದಿನಗಳಲ್ಲಿಯೇ ಸಿದ್ಧಪಡಿಸುವ ಕಂಪೆನಿಗಳೂ ಇವೆ. ಯಾವ ವಿಷಯದಲ್ಲಿಯೂ ಅನುಭವ ಇಲ್ಲದಿದ್ದರೂ ನಿರ್ದಿಷ್ಟ ಹುದ್ದೆಯ ಸಂದರ್ಶನಕ್ಕೆ ಬೇಕಾದ ಚಾಲಾಕಿತನ ವನ್ನೂ ಈ ಕಂಪೆನಿಗಳು ಕಲಿಸುತ್ತವೆ ಎನ್ನುವುದು ಅವರು ನೀಡುವ ಮಾಹಿತಿ.ಕರ್ನಾಟಕ ಜ್ಞಾನ ಆಯೋಗದಿಂದ 2012ನೇ ಸಾಲಿನ ಅಮೂಲ್ಯ ಪ್ರಶಸ್ತಿಯನ್ನು ಪಡೆದುಕೊಂಡಿರುವ ರಿಝೋರ್ಸ್‌ ಸಂಸ್ಥೆ ಈ ರೀತಿಯ ನಕಲಿ ಪ್ರಮಾಣ ಪತ್ರಗಳ ತಪಾಸಣೆ  ಸೇವೆಯನ್ನೂ ಒದಗಿಸುತ್ತದೆ. ‘ಪ್ರತಿ ತಿಂಗಳೂ ಸುಮಾರು 100ರಿಂದ 150 ಪ್ರಮಾಣ ಪತ್ರಗಳನ್ನು ನಾವು ತಪಾಸಣೆ ನಡೆಸುತ್ತೇವೆ. ಇದರಲ್ಲಿ ಶೇ 10ರಿಂದ 15ರಷ್ಟು ಕಂಪೆನಿಗಳು ನಕಲಿ ಆಗಿರುತ್ತವೆ’ ಎನ್ನುತ್ತಾರೆ ನರೇಂದ್ರ.ಅನುಭವ ಇಲ್ಲ ಎಂಬ ಕಾರಣಕ್ಕೆ ಹಲವಾರು ಮಂದಿಗೆ ಉದ್ಯೋಗ ಸಿಗುವುದಿಲ್ಲ. ಇಂತಹ ಅಭ್ಯರ್ಥಿಗಳೇ ನಕಲಿ ಕಂಪೆನಿಗಳಿಂದ ಮೋಸ ಹೋಗುವುದು ಜಾಸ್ತಿ ಎಂದೂ ಅವರು ಹೇಳುತ್ತಾರೆ. ವಿವರಗಳಿಗೆ ನಾಗೇಂದ್ರ ಅವರನ್ನು 92430–46271 ಮೂಲಕ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry