ನಕಲಿ ಕೈಗಡಿಯಾರ: ಹತ್ತುಜನರ ಬಂಧನ
ಬೆಂಗಳೂರು: ಪ್ರತಿಷ್ಠಿತ ಕೈಗಡಿಯಾರ ಕಂಪೆನಿಗಳ ಹೆಸರಿನಲ್ಲಿ ನಕಲಿ ಕೈಗಡಿಯಾರಗಳನ್ನು ಮಾರಾಟ ಮಾಡಿ ಗ್ರಾಹಕರನ್ನು ವಂಚಿಸುತ್ತಿದ್ದ ಅಂಗಡಿಗಳ ಮೇಲೆ ಬುಧವಾರ ದಾಳಿ ನಡೆಸಿದ ಉಪ್ಪಾರಪೇಟೆ ಪೊಲೀಸರು ಹತ್ತು ಮಂದಿಯನ್ನು ಬಂಧಿಸಿ ಸುಮಾರು 45 ಲಕ್ಷ ರೂಪಾಯಿ ಮೌಲ್ಯದ ಕೈಗಡಿಯಾರಗಳನ್ನು ವಶಪಡಿಸಿಕೊಂಡಿದ್ದಾರೆ.
ಸ್ವರೂಪ್, ತಬರಕ್, ಆಲಿ, ಸೈಯ, ಫೈಜಲ್, ಮನೋ, ಸಮೀರ್, ಕೃಷ್ಣ, ಅಬ್ದುಲ್ ಖಾದರ್ ಮತ್ತು ಷರೀಫ್ ಬಂಧಿತರು. ಗಾಂಧಿನಗರದಲ್ಲಿರುವ ಬಜಾಜ್ ಕಾಂಪ್ಲೆಕ್ಸ್, ನ್ಯಾಷನಲ್ ಮಾರ್ಕೆಟ್, ಮಹಾವೀರ್ ಪ್ಲಾಜಾ ವಾಣಿಜ್ಯ ಸಮುಚ್ಚಯದಲ್ಲಿ ಅಂಗಡಿಗಳನ್ನು ಇಟ್ಟುಕೊಂಡಿದ್ದ ಆರೋಪಿಗಳು ರ್ಯಾಡೊ, ಟೈಟಾನ್, ಪೊಲೀಸ್, ಒಮೆಗಾ, ಟಿಸ್ಸಾಟ್ ಮತ್ತಿತರ ಕಂಪೆನಿಗಳ ಹೆಸರಿನಲ್ಲಿ ನಕಲಿ ಕೈಗಡಿಯಾರ ಮಾರುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಲೋಕೇಶ್ವರ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬರಹ ಇಷ್ಟವಾಯಿತೆ?
0
0
0
0
0