ನಕಲಿ ಗೊಬ್ಬರಕ್ಕೆ ತತ್ತರಿಸಿದ ರೈತ

7
ಮೂಡಿಗೆರೆ: ವ್ಯವಸ್ಥಿತ ಮಾರಾಟ ಜಾಲ ಶಂಕೆ

ನಕಲಿ ಗೊಬ್ಬರಕ್ಕೆ ತತ್ತರಿಸಿದ ರೈತ

Published:
Updated:

ಮೂಡಿಗೆರೆ: ತಾಲ್ಲೂಕಿನಾದ್ಯಂತ ಮಳೆ ಸ್ವಲ್ಪ ಬಿಡುವು ನೀಡುತ್ತಿರುವಂತೆ, ಕೃಷಿ ಚಟುಚಟಿಕೆ ಗರಿಗೆದರಿದ್ದು, ವರುಣನ ವಕ್ರದೃಷ್ಟಿಗೆ ಸಿಲುಕಿ ಅಳಿದುಳಿದ ಬೆಳೆಯ­ನ್ನಾದರೂ ರಕ್ಷಿಸಿಕೊಳ್ಳೋಣ ಎಂಬ ಆತಂಕದಲ್ಲಿ ಗೊಬ್ಬರಕ್ಕಾಗಿ ಮುಗಿಬಿದ್ದ ಅನ್ನದಾತನಿಗೆ, ತಾನು ಖರೀದಿಸಿರುವುದು ನಕಲಿ ಗೊಬ್ಬರ ಎಂಬ ಶಂಕೆ ಮೂಡಲಾರಂಭಿಸಿದ್ದು, ಸಾಲ ಮಾಡಿ ಖರೀದಿಸಿದ ಗೊಬ್ಬರ­ವನ್ನು ಬೆಳೆಗೆ ಹಾಕಲಾಗದೇ ಉಭಯ ಸಂಕಟಕ್ಕೆ ಸಿಲುಕಿ ಪರಿತಪಿಸುತ್ತಿದ್ದಾನೆ.ತಾಲ್ಲೂಕಿನಲ್ಲಿ ಗೊಬ್ಬರಕ್ಕೆ ಬೇಡಿಕೆ ಹೆಚ್ಚುತ್ತಿದ್ದಂತೆ ಅವಕಾಶವನ್ನು ಬಳಸಿಕೊಂಡು ನಕಲಿಗೊಬ್ಬರವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಶಂಕೆ­ಯನ್ನು ರೈತಾಪಿ ವರ್ಗ ವ್ಯಕ್ತ­ಪಡಿಸಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಕಳೆದ ವಾರದಲ್ಲಿ ನಂದೀಪುರದ ರೈತ ಮಹೇಶ್ ಖರೀದಿಸಿದ ಮಿಕ್ಸರ್ 17;17:17 ಗೊಬ್ಬರದಲ್ಲಿ ತೂಕ ಹೆಚ್ಚ­ಲೆಂದು ಮರಳನ್ನು ಮಿಶ್ರಣ ಮಾಡ­ಲಾಗಿದೆ ಎಂಬ ದೂರು ನೀಡಿದ್ದು, ಅದೇ ಲೋಡ್‌ನಲ್ಲಿ ಖರೀದಿ ಮಾಡಿ, ಕಾಫಿ ತೋಟಕ್ಕೆ ಹರವಿದ ಗೊಬ್ಬರ ಕರಗಿಲ್ಲ ಎಂದು ಅನೇಕ ರೈತರು ಅಳಲು ತೋಡಿಕೊಂಡಿದ್ದರು.ಕಳೆದ ಮೂರು ದಿನಗಳ ಹಿಂದೆ, ಪಟ್ಟಣದ ಸಹಕಾರ ಸಂಘದ ಮಾರಾಟ ಮಳಿಗೆಯಲ್ಲಿ ಖರೀದಿಸಿದ ದುಬಾರಿ ಬೆಲೆಯ ಪೊಟಾಶ್ ಗೊಬ್ಬರದಲ್ಲಿ, ಕಡಿಮೆ ಬೆಲೆಯ ಯೂರಿಯಾವನ್ನು ಮಿಶ್ರಣ ಮಾಡಲಾಗಿದೆ. ಉಪ್ಪಿನಂತಹ ಅಂಶ­ವನ್ನು ಸೇರಿಸಲಾಗಿದೆ ಎಂದು ಅಧಿಕಾರಿ­ಗಳ ಸಮ್ಮುಖದಲ್ಲಿಯೇ ಜರಡಿ ಹಿಡಿದು ಯೂರಿಯಾ ಇರುವುದನ್ನು ಪತ್ತೆ ಮಾಡಿ ತೋರಿಸಿದ ರೈತರು, ಸ್ಥಳದಲ್ಲಿ ಪ್ರತಿಭಟನೆಯನ್ನು ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಅಧಿಕಾರಿಗಳು ಸುಮಾರು 60 ಟನ್ ದಾಸ್ತಾನಿರುವ ಗೊಬ್ಬರವನ್ನು, ಪರೀಕ್ಷೆಯ ವರದಿ ಬರುವವರೆಗೂ ಮಾರಾಟ ಮಾಡ­ದಂತೆ ತಡೆದಿದ್ದು, ಗೊಬ್ಬರದ ಸ್ಯಾಂಪ­ಲ್ಲನ್ನು ಪರೀಕ್ಷೆಗಾಗಿ ಕಳುಹಿಸಿದ್ದಾರೆ.ಕಡಿಮೆ ಬೆಲೆಯ ಗೊಬ್ಬರಗಳಾದ ಯೂರಿಯಾ, ಮಿಕ್ಸರ್ ಮುಂತಾದವು­ಗಳನ್ನು, 900 ರೂಪಾಯಿ ಬೆಲೆ ಹೊಂದಿರುವ ಪೊಟಾಶ್‌ನಂತಹ ಗೊಬ್ಬ­ರಕ್ಕೆ ಬೆರೆಸಿ ಲಾಭ ಮಾಡು­ವುದು, ಮಿಕ್ಸರ್ ಗೊಬ್ಬರಕ್ಕೆ, ಮರಳು, ಮರದ ಹೊಟ್ಟು, ಉಪ್ಪು ಮುಂತಾದ ಪದಾರ್ಥಗಳನ್ನು ಸೇರಿಸುವುದು ಹೀಗೆ ನಾನಾ ಪ್ರಕಾರಗಳಲ್ಲಿ ನಕಲಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ದಂದೆಯಲ್ಲಿ ಕೆಲವು ಅಧಿಕಾರಿಗಳು, ಮಾರಾಟ ಮಳಿಗೆಯ ವ್ಯವಸ್ಥಾಪಕರ ಕೈವಾಡವೂ ಇರಬಹುದೆಂಬ ಅನುಮಾನ ರೈತ­ವರ್ಗ­ದಲ್ಲಿ ವ್ಯಕ್ತವಾಗಿದ್ದು, ಸತ್ಯಾಂಶ ಬಹಿರಂಗಗೊಳ್ಳಬೇಕಿದೆ.ಗೊಬ್ಬರ ಗುಣಮಟ್ಟ ಪರೀಕ್ಷೆಗಾಗಿ ಮಂಗಳೂರಿನ ಬೆಳ್ತಂಗಡಿ ಮತ್ತು ಬೆಂಗಳೂರಿನಲ್ಲಿ ಸರ್ಕಾರಿ ಪ್ರಯೋ­ಗಾಲ­­ಯವಿದ್ದು, ತಾಲ್ಲೂಕಿನಲ್ಲಿ ಯಾವುದೇ ನಕಲಿ ಗೊಬ್ಬರದ ದೂರು ಬಂದರೂ, ಈ ಕೇಂದ್ರಗಳಲ್ಲಿಯೇ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷಾ ಕೇಂದ್ರಗಳು ದೂರದಲ್ಲಿರುವುದರಿಂದ ಅಲ್ಲಿ ನಡೆಯುವ ಕರಾಮತ್ತುಗಳು ಸ್ಥಳೀಯ ರೈತರ ಅರಿವಿಗೇ ಬಾರದೇ, ಅಲ್ಲಿಂದ ಬರುವ `ಉತ್ತಮ ಗುಣ­ಮಟ್ಟವಿದೆ' ಎಂಬ ಸರ್ಟಿಫಿಕೇಟ್ ಪ್ರದರ್ಶನ ನಡೆಸಿ ಮಾರಾಟ ಪ್ರಕ್ರಿಯೆ ಮುಂದುವರೆಸ­ಲಾಗುತ್ತದೆ. ಈ ಪರೀಕ್ಷೆ ಎಂಬುದು ಅಧಿಕಾರಿ­ಗಳು ಮತ್ತು ಕಂಪೆನಿಗಳು ಹಾಗೂ ಮಾರಾಟಗಾರರ ನಡುವಿನ ಹುನ್ನಾರ ಎಂಬುದು ಸ್ಥಳೀಯ ರೈತರ ಆರೋಪವಾಗಿದೆ.ಗೊಬ್ಬರದ ಪ್ರತಿ ಲೋಡ್ ಅನ್ನೂ ಸ್ಯಾಂಪಲ್ ಪರೀಕ್ಷೆ ನಡೆಸಿ, ವಿತರಣೆ ಮಾಡಬೇಕೆಂಬ ನಿಯಮವಿದ್ದರೂ, ಅಧಿಕಾರಿಗಳ ಆಲಸ್ಯ ಮನೋ­ಭಾವನೆ­ಯಿಂದಾಗಿ, ನಿಯಮವನ್ನು ಗಾಳಿಗೆ ತೂರಿರುವುದು ನಕಲಿ ಗೊಬ್ಬರದ ಶಂಕೆ ಬಲವಾಗಲು ಕಾರಣವಾಗಿದೆ. ಮಲೆ­ನಾಡಿನಲ್ಲಿ ತಾನು ಬೆಳೆದ ಬೆಳೆಯೆಲ್ಲ­ವನ್ನೂ ಕಳೆದುಕೊಂಡಿರುವ ರೈತ, ಅಳಿದುಳಿದ ಬೆಳೆಯಾದರೂ ಉಳಿ­ಯಲಿ ಎಂದು ಸಾಲಮಾಡಿ ಖರೀದಿ­ಸುವ ಗೊಬ್ಬರವನ್ನಾದರೂ ಸೂಕ್ತ­ವಾಗಿ ಒದಗಿಸಬೆಕು ಎಂಬುದು ರೈತರ ಒತ್ತಾಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry