ನಕಲಿ ಟೀ ಶರ್ಟ್ ಮಾರಾಟ: ಬಂಧನ

7

ನಕಲಿ ಟೀ ಶರ್ಟ್ ಮಾರಾಟ: ಬಂಧನ

Published:
Updated:

ಬೆಂಗಳೂರು: ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ಟೀ ಶರ್ಟ್‌ಗಳನ್ನು ಮಾರುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಸುಮಾರು ಆರು ಲಕ್ಷ ರೂಪಾಯಿ ಮೌಲ್ಯದ ಟೀ ಶರ್ಟ್‌ಗಳನ್ನು ಜಪ್ತಿ ಮಾಡಿದ್ದಾರೆ.ಯಾರಬ್‌ನಗರದ ಆಸಿಫ್ ಉಲ್ಲಾ ಬೇಗ್ (26), ಪೀಣ್ಯ ಬಳಿಯ ಮಾರುತಿನಗರದ ರವಿಕುಮಾರ್ (43), ಗೋರಿಪಾಳ್ಯದ ಮುಜೀರ್ (38) ಮತ್ತು ಜಮೀರ್ (25) ಬಂಧಿತರು. ಆರೋಪಿಗಳು ಕಾಟನ್‌ಪೇಟೆಯ ಓಟಿಸಿ ರಸ್ತೆ ಮತ್ತು ಎಸ್.ಪಿ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ನಕಲಿ ಟೀ ಶರ್ಟ್ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಆತ್ಮಹತ್ಯೆ: ಎಂಜಿನಿಯರಿಂಗ್ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರ ಬಳಿಯ ಮುತ್ಯಾಲನಗರದಲ್ಲಿ ಶುಕ್ರವಾರ ನಡೆದಿದೆ.ಮುತ್ಯಾಲನಗರ 17ನೇ ಅಡ್ಡರಸ್ತೆ ನಿವಾಸಿ ಪ್ರಸಾದ್ ಎಂಬುವರ ಪುತ್ರಿ ಪವಿತ್ರಾ (21) ಆತ್ಮಹತ್ಯೆ ಮಾಡಿಕೊಂಡವರು. ಅವರು ರೇವಾ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಬಿ.ಇ ಓದುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಕುಟುಂಬ ಸದಸ್ಯರು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಪವಿತ್ರಾ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅಪಘಾತ-ಸಾವು: ಹೆಬ್ಬಾಳ ಮೇಲ್ಸೇತುವೆ ಸಮೀಪದ ಭೂಪಸಂದ್ರ ರಸ್ತೆಯಲ್ಲಿ ಆಟೊ ಮಗುಚಿ ಬಿದ್ದು ಚಾಲಕ ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ರಾಜೇಶ್ (27) ಮೃತಪಟ್ಟವರು. ಆಟೊ ಚಾಲಕರಾಗಿದ್ದ ಅವರು ಸ್ನೇಹಿತರೊಂದಿಗೆ ಸಂಜಯನಗರದಲ್ಲಿ ವಾಸವಾಗಿದ್ದರು. ಅವರು ಸ್ನೇಹಿತ ಜಮೀರ್ ಬೇಗ್ ಜತೆ ಆಟೊದಲ್ಲಿ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಜಲಮಂಡಳಿ ಕೆಲಸಗಾರರು ಮ್ಯಾನ್‌ಹೋಲ್ ಕಾಮಗಾರಿಗಾಗಿ ಭೂಪಸಂದ್ರ ರಸ್ತೆ ಬದಿಯಲ್ಲಿ ಗುಂಡಿ ತೆಗೆದು, ಅದರ ಸಮೀಪ ಸಿಮೆಂಟ್ ಇಟ್ಟಿಗೆಗಳನ್ನು ಇಟ್ಟಿದ್ದರು. ರಾತ್ರಿ ಅದೇ ಮಾರ್ಗವಾಗಿ ಆಟೊದಲ್ಲಿ ಬಂದ ರಾಜೇಶ್, ಆ ಇಟ್ಟಿಗೆಗಳ ಮೇಲೆ ವಾಹನ ಹತ್ತಿಸಿದ್ದಾರೆ. ಇದರಿಂದಾಗಿ ಅಡ್ಡಾದಿಡ್ಡಿ ಚಲಿಸಿದ ಆಟೊ ಮಗುಚಿ ಬಿದ್ದಿದೆ.ಅದೇ ವೇಳೆಗೆ ಎದುರುಗಡೆಯಿಂದ ಬಂದ ಕಾರು, ಆಟೊಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ರಾಜೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.ಜಮೀರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೊ ಮತ್ತು ಕಾರು ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್.ಟಿ.ನಗರ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry