ಗುರುವಾರ , ಮೇ 6, 2021
26 °C

ನಕಲಿ ಡೋರ್ ನಂಬರ್ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಭೂ ಪರಿವರ್ತನೆ ಆಗದ, ಅಂತಿಮ ಅನುಮೋದನೆ ಪಡೆಯದ ಕಂದಾಯ ನಿವೇಶನಗಳಿಗೆ ನೀಡಿರುವ ಡೋರ್‌ನಂಬರ್‌ಗಳನ್ನು 15 ದಿನದ ಒಳಗೆ ವಜಾಗೊಳಿಸಬೇಕು ಹಾಗೂ ಕಂದಾಯ ನಿವೇಶನಗಳಿಗೆ ಡೋರ್‌ನಂಬರ್ ನೀಡಿದ ಅಧಿಕಾರಿಗಳ ವಿರುದ್ಧ ಆಯುಕ್ತರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೇಯರ್ ಎಂ.ಎಸ್. ವಿಠ್ಠಲ್ ಆದೇಶಿಸಿದರು.ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಮುಂದುವರಿದ ಸಾಮಾನ್ಯಸಭೆಯಲ್ಲಿ ನಕಲಿಡೋರ್‌ನಂಬರ್ ಪ್ರಕರಣ ಕುರಿತು ಸುದೀರ್ಘವಾಗಿ ಚರ್ಚೆ ನಡೆದ ಬಳಿಕ ಅವರು ರೂಲಿಂಗ್ ನೀಡಿದರು.ಭೂ ಪರಿವರ್ತನೆ ಆಗಿದ್ದು, ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಂತಿಮ ಅನಮೋದನೆ ಪಡೆದಿದ್ದರೂ, ಪಾಲಿಕೆ ಸ್ಥಾಯಿ ಸಮಿತಿ ಗಮನಕ್ಕೆ ತಾರದೇ ಡೋರ್‌ನಂಬರ್ ನೀಡಿರುವ ಬಡಾವಣೆಗಳಲ್ಲಿನ ಮೂಲ ಸೌಕರ್ಯ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಹಾಗೂ ಭೂ ಪರಿವರ್ತನೆ ಆಗಿದ್ದು, ಅಂತಿಮ ಅನುಮೋದನೆ ಪಡೆದಿದ್ದರೂ ಕಳಪೆ ಮೂಲ ಸೌಕರ್ಯ ಒದಗಿಸಿದ ಬಡಾವಣೆಗಳಲ್ಲಿ ಅಗತ್ಯ ಸೌಕರ್ಯ ಕಲ್ಪಿಸುವರೆಗೂ ಅಂತಿಮ ಅನುಮತಿ ನೀಡದಿರುವಂತೆ ಸೂಚಿಸಿದರು.ನಗರಾಭಿವೃದ್ಧಿ ಪ್ರಾಧಿಕಾರ ಅಂತಿಮ ಅನುಮೋದನೆ ನೀಡುವ ಮುನ್ನ ಸಂಬಂಧಿಸಿದ ಬಡಾವಣೆಯ ಮೂಲ ಸೌಕರ್ಯಗಳ ಬಗ್ಗೆ ಮೂರನೇ ವ್ಯಕ್ತಿ ತಪಾಸಣೆ ನಡೆಸಿ, ಗುಣಮಟ್ಟ ಕುರಿತು ಅವರು ನೀಡುವ ಪ್ರಮಾಣ ಪತ್ರವನ್ನು ಲಗತ್ತಿಸಿ ಪಾಲಿಕೆಗೆ ಕಳುಹಿಸುವಂತೆ ಸಲಹೆ ನೀಡಿದರು.ನಗರದಲ್ಲಿ 1.16 ಲಕ್ಷ ಡೋರ್‌ನಂಬರ್ ನೀಡಲಾಗಿದ್ದು, ಅದರಲ್ಲಿ 75 ಸಾವಿರ ಅಧಿಕೃತವಾಗಿವೆ. ಉಳಿದ 20-25 ಅನಧಿಕೃತವಾಗಿವೆ. ಅದಲ್ಲಿ ಶೇ. 80ರಷ್ಟು ಕಂದಾಯ ನಿವೇಶನಗಳಿವೆ ಎಂದು ಮಾಹಿತಿ ನೀಡಿದರು.ಸಭೆ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಪಾಲಿಕೆ ವಿರೋಧ ಪಕ್ಷದ ನಾಯಕ ಡಿ.ಎನ್. ಜಗದೀಶ್, ಆವರಗೆರೆ ವ್ಯಾಪ್ತಿಯ 276/1-282/1ರವರೆಗಿನ ಸರ್ವೇ ನಂಬರ್‌ನಲ್ಲಿ ನಿರ್ಮಾಣವಾಗಿರುವ ಬಡಾವಣೆಯ ಮೂಲ ಸೌಕರ್ಯದ ಬಗ್ಗೆ ಮಹಾಲೇಖಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರ ಬಗ್ಗೆ ಮೇಯರ್ ಹಾಗೂ ಆಯುಕ್ತರು ವಿವರಣೆ ನೀಡಬೇಕು ಎಂದು ಒತ್ತಾಯಿಸಿದರು.ಬಡಾವಣೆಗೆ ನೀಡಿರುವ ಅನುಮತಿ ಬಗ್ಗೆ ಆಕ್ಷೇಪ ಇಲ್ಲ. ಕಾಮಗಾರಿಯ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಲೇಖಪಾಲರು ಸೂಚಿಸಿದ ಅಂಶಗಳನ್ನು ಮುಂದಿನ ಬಡಾವಣೆಗಳಿಗೆ ಅನುಮತಿ ನೀಡುವಾಗ ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ. 22.75ರ ಯೋಜನೆ ಅಡಿ ನೀಡಲಾಗುತ್ತಿರುವ ಅಡುಗೆ ಸ್ಟೌಗಳ ವಿತರಣೆ ವಿಳಂಬಕ್ಕೆ ಆಕ್ಷೇಪ ವ್ಯಕ್ತವಾಯಿತು. ವಿಳಂಬದಿಂದ ಪರಿಶಿಷ್ಟರಿಗೆ ಅನ್ಯಾಯವಾಗಿದೆ ಎಂದು ಬಹುತೇಕ ಮಹಿಳಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಕೊಳಚೆನೀರು ಶುದ್ಧೀಕರಣ ಘಟಕಕ್ಕೆ ಹಾಗೂ ಯರಗುಂಟೆ ಗ್ರಾಮದ ಸ್ಮಶಾನಕ್ಕೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.ಉಪ ಮೇಯರ್ ಜ್ಯೋತಿ ಪಾಟೀಲ್, ಆಯುಕ್ತ ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎನ್. ಶಿವಕುಮಾರ್, ರುದ್ರಮುನಿಸ್ವಾಮಿ, ಸುಶೀಲಮ್ಮ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. ದೊರೆಯದ ಮಾಹಿತಿ!

ಕಡತ ಕಣ್ಮರೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಿಸಲಾದ ಸಮಿತಿಯ ಗಮನಕ್ಕೆ ತಾರದೇ ಪ್ರಕರಣ ಇತ್ಯರ್ಥಪಡಿಸಿದ ಪ್ರಕರಣ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಬೆಳಕಿಗೆ ಬಂದಿತು.ಜಾಹೀರಾತು ಫಲಕಗಳನ್ನು ಹಾಕುವುದಕ್ಕೆ ಸಂಬಂಧಿಸಿದಂತೆ ಟೆಂಡರ್ ಪಡೆದಿದ್ದ ಸಂಗೀತಾ ಪಬ್ಲಿಸಿಟಿ ಕಡತವೂ ಸೇರಿದಂತೆ ನಾಲ್ಕು ಕಡತಗಳ ಕಣ್ಮರೆ ವಿಚಾರ ಹಾಗೂ ಕಡತಗಳ ಸತ್ಯಾಸತ್ಯತೆ ಪರಿಶೀಲಿಸಲು 9 ಸದಸ್ಯರನ್ನು ಒಳಗೊಂಡ ಸಮಿತಿ ನೇಮಿಸಲಾಗಿತ್ತು. ಆದರೆ, ಶುಕ್ರವಾರದ ಸಭೆಯಲ್ಲಿ ರೂಲಿಂಗ್ ನೀಡಿದ ಮೇಯರ್, ಸಮಿತಿಯ ಶಿಫಾರಸಿನಂತೆ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪೌರಾಡಳಿತ ನಿರ್ದೇಶನಾಲಯಕ್ಕೆ ಕಳುಹಿಸಬೇಕು ಹಾಗೂ ಮರು ಟೆಂಡರ್ ಕರೆಯಬೇಕು ಎಂದರು.ಸಮಿತಿಯ ಗಮನಕ್ಕೆ ತಾರದೇ ಪ್ರಕರಣದ ಬಗ್ಗೆ ರೂಲಿಂಗ್ ನೀಡುತ್ತಿದ್ದೀರಿ? ಸಮಿತಿಯ ಸಭೆ ಯಾವಾಗ ನಡೆಯಿತು. ಈ ಬಗ್ಗೆ ತಮಗೇ ಮಾಹಿತಿ ಇಲ್ಲ. ಸಹಿಯನ್ನೂ ಮಾಡಿಲ್ಲ ಎಂದು ಸಮಿತಿಯ ಸದಸ್ಯರೂ ಆದ ಬಾ.ಮ ಬಸವರಾಜಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಈ ಪ್ರಕರಣದಿಂದ ಆದ ನಷ್ಟವನ್ನು ಸಂಬಂಧಿಸಿದ ಅಧಿಕಾರಿಗಳಿಂದ ವಸೂಲು ಮಾಡಲು ಕ್ರಮ ಕೈಗೊಳ್ಳುವ ಭರವಸೆಯೊಂದಿಗೆ ಪ್ರಕರಣ ಮುಕ್ತಾಯಗೊಳಿಸಲಾಯಿತು.ಪ್ರತಿಧ್ವನಿಸಿದ ಲಂಚ ಆರೋಪ!

ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ರಿಯಲ್ ಎಸ್ಟೇಟ್‌ನ ಕೆಲವರು ಪಾಲಿಕೆ ಸದಸ್ಯರ ವಿರುದ್ಧ ಲಂಚದ ಗಂಭೀರ ಆರೋಪ ಮಾಡಿದ್ದು, ಈ ವಿಚಾರ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು. ಸದಸ್ಯರು ಪಕ್ಷಭೇದ ಮರೆತು ಧ್ವನಿಗೂಡಿಸಿದರು. `ದೂಡಾ~ ಹಾಗೂ ಪಾಲಿಕೆ ಅಧಿಕಾರಿಗಳ ಕರ್ತವ್ಯ ಲೋಪದ ಕೊಳೆ ತೊಳೆಯಲು ಹೊರಟ ಸದಸ್ಯರನ್ನೇ ಅನುಮಾನದಿಂದ ನೋಡುವಂತಾಗಿದೆ. ಆರೋಪ ಮಾಡಿದವರು ಅದನ್ನು ಸಾಬೀತುಪಡಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿದರು.ಅಕ್ರಮ ಡೋರ್‌ನಂಬರ್ ಯಾರ ಕೂಸು ಎಂದು ಬಿ. ಲೋಕೇಶ್, ಆಯುಕ್ತರು, ಅಧಿಕಾರಿಗಳು ಈ ವಿಚಾರದಲ್ಲಿ ನಿಷ್ಕ್ರಿಯರಾಗಿದ್ದಾರೆ. ನಗರವನ್ನೇ ಸ್ಲಂ ಮಾಡಿದ್ದಾರೆ ಎಂದು ವಸಂತಕುಮಾರ್ ಟೀಕಿಸಿದರು. ಈ ಸಂದರ್ಭದಲ್ಲಿ ಸಮಜಾಯಿಷಿ ನೀಡಲು ಆಗಮಿಸಿದ `ದೂಡಾ~ ಎಂಜಿನಿಯರ್ ರೇಣುಕಾ ಪ್ರಸಾದ್ ವಿರುದ್ಧವೂ ವಾಗ್ದಾಳಿ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.