ನಕಲಿ ನೇಮಕಾತಿ ಪ್ರಕರಣ ಬಯಲು

7

ನಕಲಿ ನೇಮಕಾತಿ ಪ್ರಕರಣ ಬಯಲು

Published:
Updated:

ರಾಮನಗರ: ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಜಾರಿಕಾರರು (ಪ್ರೋಸಸ್ ಸರ್ವೇಯರ್) ಮತ್ತು ದಲಾಯ್ ಹುದ್ದೆಗಳಿಗೆ ನೇಮಕ ಮಾಡಿಸಿಕೊಡುವುದಾಗಿ ಹೇಳಿ ಅಮಾಯಕರಿಂದ ಸಹಸ್ರಾರು ರೂಪಾಯಿ ಹಣ ಸ್ವೀಕರಿಸಿ, ನಕಲಿ ನೇಮಕಾತಿ ಆದೇಶವನ್ನೂ ನೀಡಿ ವಂಚಿಸಿರುವ ಪ್ರಕರಣ ಬಯಲಿಗೆ ಬಂದಿದೆ ! ಈ ಸಂಬಂಧ ದೊಡ್ಡ ವಂಚಕರ ಜಾಲವೇ ರಾಮನಗರದಲ್ಲಿ ಇದೆ ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಮೂಡ ತೊಡಗಿದೆ.ಜಿಲ್ಲಾ ನ್ಯಾಯಾಲಯ ಇತ್ತೀಚೆಗೆ ಜಾರಿಕಾರರು ಮತ್ತು ದಲಾಯ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಇದನ್ನು ದುರುಪಯೋಗ ಪಡಿಸಿಕೊಂಡಿರುವ ಕೆಲ ವಂಚಕರು ಆಕಾಂಕ್ಷಿ ಅಭ್ಯರ್ಥಿಗಳಿಗೆ ಕೆಲಸ ಕೊಡಿಸುವ ಆಸೆ ಹುಟ್ಟಿಸಿದ್ದಾರೆ.ಅಲ್ಲದೆ ಒಂದೊಂದು ಹುದ್ದೆಗೆ ಇಂತಿಷ್ಟು ಹಣ ನೀಡಿದರೆ ನೇಮಕ ಮಾಡಿಸಿಕೊಡುವುದಾಗಿ ಈ ವಂಚಕರು ಆಮಿಷವನ್ನೂ ಒಡ್ಡಿದ್ದಾರೆ. ಇದಕ್ಕೆ ಮಾರು ಹೋದ ಕೆಲವರು ತಲಾ 50 ಸಾವಿರ ರೂಪಾಯಿ ನೀಡಿದ್ದಾರೆ. ಆದರೆ ಆಕಾಂಕ್ಷಿ ಅಭ್ಯರ್ಥಿಗಳಿಂದ ಹಣ ತೆಗೆದುಕೊಂಡ ಆ ವಂಚಕರು, ಅಭ್ಯರ್ಥಿಗಳ ಕೈಗೆ ನಕಲಿ ನೇಮಕಾತಿ ಪತ್ರ ನೀಡಿ ಪರಾರಿಯಾಗಿದ್ದಾರೆ !ಸುಮಾರು ನಾಲ್ವರು ಆಕಾಂಕ್ಷಿ ಅಭ್ಯರ್ಥಿಗಳಿಂದ ವಂಚಕರು ತಲಾ 50 ಸಾವಿರ ರೂಪಾಯಿಗಳನ್ನು ಪಡೆದು, ನಕಲಿ ನೇಮಕಾತಿ ಪತ್ರ ನೀಡಿರುವುದು ಪತ್ತೆಯಾಗಿದೆ. ಆದರೆ ಈ ವಂಚಕರಿಗೆ ಮೋಸ ಹೋಗಿರುವವರ ಸಂಖ್ಯೆ ಹೆಚ್ಚಿದೆ ಎಂದು ತಿಳಿದು ಬಂದಿದೆ.ದೂರು ದಾಖಲು: ಈ ಕುರಿತು ವಂಚನೆಗೆ ಒಳಗಾದ ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಶಂಬಿನಾಯಕನಹಳ್ಳಿ ಗ್ರಾಮದ ಚೇತನ್ ಕುಮಾರ್ ಎಸ್/ಆಫ್ ಸಿ. ಆನಂದ್ ಎಂಬಾತರು ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 12ರಂದು ದೂರು ದಾಖಲಿಸಿದ್ದಾರೆ.`ರವಿ ಕುಮಾರ್ ಎಂಬಾತ ರಾಮನಗರದ ರಾಮಕೃಷ್ಣ ಎಂಬುವರ ಮನೆಗೆ ಕರೆದುಕೊಂಡು ಹೋಗಿ, ಅಲ್ಲಿ ಅರ್ಜಿ ಭರ್ತಿ ಮಾಡಿಸಿ 800 ರೂಪಾಯಿ ಪಡೆದಿದ್ದರು. ಅಲ್ಲದೆ ಒಂದೊಂದು ಕೆಲಸಕ್ಕೆ ಒಂದೊಂದು ಲಕ್ಷ ರೂಪಾಯಿ ನೀಡಿದರೆ ನೇಮಕಾತಿ ಆದೇಶ ಪತ್ರ ಕೊಡಿಸುವುದಾಗಿ ತಿಳಿಸಿದ್ದರು~ ಎಂದು ಚೇತನ್ ದೂರಿನಲ್ಲಿ ದಾಖಲಿಸಿದ್ದಾರೆ.`ಇದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 2ರಂದು 50 ಸಾವಿರ ರೂಪಾಯಿ ನೀಡಲಾಯಿತು. ಅದನ್ನು ಪಡೆದ ರವಿ ಕುಮಾರ್ ಕೆಲಸದ ಆಸೆ ತೋರಿಸಿದ. ಆದರೆ ಆತ ಕೆಲಸ ಕೊಡಿಸದೆ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುವ~ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಈ ದೂರು ಸ್ವೀಕರಿಸಿರುವ ಐಜೂರು ಪೊಲೀಸರು ಅಪರಾಧ ಸಂಖ್ಯೆ 77/11ರಲ್ಲಿ ಐಪಿಸಿ ಸೆಕ್ಷನ್ 420 ಮತ್ತು 406ರಲ್ಲಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಜಿಲ್ಲಾ ನ್ಯಾಯಾಧೀಶರಿಗೂ `ಶಾಕ್~: ಜಾರಿಕಾರರು ಮತ್ತು ದಲಾಯ್ ಹುದ್ದೆಗಳ ನೇಮಕಾತಿಗೆ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನಾ ಕೆಲಸ ನಡೆಯುತ್ತಿರುವ ಸಂದರ್ಭದಲ್ಲಿ ನೇಮಕಾತಿ ಆದೇಶ ಪತ್ರ ಹಿಡಿದು ಬಂದ ಆಕಾಂಕ್ಷಿಗಳನ್ನು ನೋಡಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್. ರುದ್ರಮುನಿ ಅವರಿಗೆ `ಶಾಕ್~ ಆಗಿದೆ.ಅರ್ಜಿಗಳ ಪರಿಶೀಲನಾ ಕಾರ್ಯವೇ ಮುಗಿದಿಲ್ಲ. ಆಗಲೇ ನಾಲ್ಕು ಜನ ನೇಮಕಾತಿ ಆದೇಶ ಪತ್ರ ತೆಗೆದುಕೊಂಡು ಬಂದಿರುವುದರಿಂದ ಅವಕ್ ಆದ ನ್ಯಾಯಾಧೀಶರು ನೇಮಕಾತಿ ಪತ್ರವನ್ನು ಪರಿಶೀಲಿಸುವಂತೆ ನ್ಯಾಯಾಲಯದ ಹಿರಿಯ ಸಿಬ್ಬಂದಿಗೆ ಸೂಚಿಸಿದ್ದಾರೆ. ಪರಿಶೀಲನೆಯ ನಂತರ ಈ ನೇಮಕಾತಿ ಪತ್ರಗಳು ಅಸಲಿ ಅಲ್ಲ, ನಕಲಿ ಎಂಬುದು ಖಚಿತವಾಗಿದೆ.ಕೂಡಲೇ ಈ ನೇಮಕಾತಿ ಪತ್ರ ಪಡೆದವರ ವಿಚಾರಣೆಯನ್ನು ನ್ಯಾಯಾಧೀಶರು ಮಾಡಿದ್ದಾರೆ. ಆಗ ಇದರ ಹಿಂದೆ ಜಾಲವೊಂದು ಕೆಲಸ ಮಾಡುತ್ತಿದೆ ಎಂಬುದು ನ್ಯಾಯಾಧೀಶರ ಗಮನಕ್ಕೆ ಬಂದಿದೆ. ಜನತೆಯನ್ನು ವಂಚಿಸುವ ಮೂಲಕ ದಿಕ್ಕು ತಪ್ಪಿಸಿ, ನ್ಯಾಯಾಲಯದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಿ ಹಣಗಳಿಕೆಯ ದಂದೆ ನಡೆಯುತ್ತಿದೆ ಎಂದು ಗೊತ್ತಾಗಿದೆ.ಆಗ ನ್ಯಾಯಾಧೀಶರು ನಾಲ್ವರು ವಂಚಿತ ಆಕಾಂಕ್ಷಿಗಳಿಗೆ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಬಿಸನಹಳ್ಳಿ ಅವರಿಗೆ ವಿಚಾರ ತಿಳಿಸಿ, ಸಮಗ್ರ ತನಿಖೆ ನಡೆಸುವಂತೆಯೂ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry