ನಕಲಿ ನೋಟು: ಭಾರತ ಆತಂಕ

7

ನಕಲಿ ನೋಟು: ಭಾರತ ಆತಂಕ

Published:
Updated:

ವಾಷಿಂಗ್ಟನ್ (ಐಎಎನ್‌ಎಸ್):  ಪಾಕಿಸ್ತಾನದಲ್ಲಿ ಮುದ್ರಣಗೊಂಡ ಖೋಟಾ ನೋಟುಗಳು ಬಾಂಗ್ಲಾದೇಶ,  ಥಾಯ್ಲೆಂಡ್, ನೇಪಾಳ ಮತ್ತಿತರ ನೆರೆಯ ದೇಶಗಳಲ್ಲಿ ಚಲಾವಣೆ ಆಗುತ್ತಿದೆ. ಅಲ್ಲಿಂದ ಭಾರತದೊಳಗೆ ಪ್ರವೇಶಿಸುತ್ತಿದೆ. ಇದು ಭಾರತಕ್ಕೆ ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.‘ಈ ಭಾರೀ ಪ್ರಮಾಣದ ನಕಲಿ ನೋಟುಗಳ ಚಲಾವಣೆ, ಪಾಕ್‌ನಲ್ಲಿನ ಕೆಲವು ಶಕ್ತಿಗಳು ದುರುದ್ದೇಶಪೂರಕವಾಗಿ ಭಾರತದಲ್ಲಿ ಗೊಂದಲ ಸೃಷ್ಟಿಸಲು ಅನುಸರಿಸುತ್ತಿರುವ ಪಿತೂರಿಯಾಗಿದೆ’ ಎಂದು ಇಲ್ಲಿನ ಜಾಗತಿಕ ಹಣಕಾಸು ಸಮಗ್ರತಾ ಅಧ್ಯಯನ ತಂಡ ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ.“ಅಭಿವೃದ್ಧಿಶೀಲ ಜಗತ್ತಿನಲ್ಲಿನ ಅಂತರರಾಷ್ಟ್ರೀಯ ಅಪರಾಧಗಳ ಅಂದಾಜು ಪ್ರಮಾಣವು ಸರಕು, ಶಸ್ತ್ರಾಸ್ತ್ರ, ಮಾನವ ಹಾಗೂ ಸ್ವಾಭಾವಿಕ ಸಂಪನ್ಮೂಲಗಳ ಅಕ್ರಮ ವ್ಯಾಪಾರಗಳು ಸುಮಾರು 650 ಶತಕೋಟಿ ಡಾಲರ್‌ಗಳನ್ನು ಮೀರಿದ್ದು ಇವು ಈ ರಾಷ್ಟ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ” ಎಂದು ವರದಿ ಎಚ್ಚರಿಸಿದೆ.ಭಾರತೀಯ ಆಡಳಿತದ ಅಂದಾಜಿನ ಪ್ರಕಾರ, ಉತ್ತರಪ್ರದೇಶ ರಾಜ್ಯವೊಂದರಲ್ಲೇ ಸುಮಾರು  40 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ನಕಲಿ ನೋಟುಗಳು ಚಲಾವಣೆಯಲ್ಲಿವೆ. ನೆರೆಯ ನೇಪಾಳದಲ್ಲಿನ ನಕಲಿ ನೋಟು ವ್ಯಾಪಾರಿಗಳು ಅಂದಾಜಿಸಿರುವಂತೆ, 2010ರಲ್ಲಿ ಸುಮಾರು 10 ಸಾವಿರ ಕೋಟಿ ಖೋಟಾ ನೋಟುಗಳು ಭಾರತದಲ್ಲಿ ಚಲಾವಣೆಗೊಂಡಿರುವುದಾಗಿ ವರದಿ ಬಹಿರಂಗಪಡಿಸಿದೆ.‘ಸೊಮಾಲಿಯ ಯುದ್ಧಕೋರರು ಮತ್ತು ಅಲ್‌ಖೈದಾ, ಬಾಂಗ್ಲಾದ ಹುಜಿ  ಮತ್ತು ಜೆಎಂಬಿ ಮತ್ತಿತರ ಭಯೋತ್ಪಾದನಾ ಸಂಘಟನೆಗಳ ಜತೆ ಸಂಪರ್ಕ ಹೊಂದಿದ ಭಾರತದಲ್ಲಿನ ಎರಡು ಇಸ್ಲಾಮಿಕ್ ಉಗ್ರಗಾಮಿ ಗುಂಪುಗಳು ಅಕ್ರಮವಾಗಿ ಆನೆಗಳು ಮತ್ತು ಘೇಂಡಾಮೃಗಗಳನ್ನು ಬೇಟೆಯಾಡಿ, ಅವುಗಳ ದಂತಗಳನ್ನು ಕಳ್ಳಸಾಗಣೆ ಮಾಡುತ್ತಿವೆ” ಎಂದೂ ವರದಿ ತಿಳಿಸಿದೆ.

ಈ ಅಕ್ರಮ ಚಟುವಟಿಕೆಗಳು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು ಮಾತ್ರವಲ್ಲದೆ, ಅಂತರರಾಷ್ಟ್ರೀಯ ಭದ್ರತೆಗೂ ಧಕ್ಕೆ ಉಂಟು ಮಾಡಲಿವೆ. ನಕಲಿ ಸರಕುಗಳಿಗೆ ಚೀನಾ ಪ್ರಮುಖ ಮಾರುಕಟ್ಟೆಯಾಗಿದ್ದು ಹಾಗೆಯೇ ತೈವಾನ್, ವಿಯೆಟ್ನಾಂ, ಫಿಲಿಪ್ಪೀನ್ಸ್, ಮಲೇಷ್ಯಾ, ಭಾರತ, ರಷ್ಯಾ, ಮಾಜಿ ಸೋವಿಯತ್ ಗಣರಾಜ್ಯ, ಲ್ಯಾಟಿನ್ ಅಮೆರಿಕ ದೇಶಗಳು ಹಾಗೂ ಆಫ್ರಿಕಾ ನಕಲಿ ಉತ್ಪನ್ನಗಳ ತಯಾರಿಕೆಗೆ ಹೆಸರಾಗಿವೆ. ಇದರ ಜೊತೆಗೆ ಬಡ ಮತ್ತು ಹಿಂದುಳಿದ ದೇಶಗಳಿಂದ ಶ್ರೀಮಂತ ರಾಷ್ಟ್ರಗಳಿಗೆ ಮಾನವ ಕಿಡ್ನಿಗಳ ಕಳ್ಳಸಾಗಣೆ ನಿರಂತರ ನಡೆಯುತ್ತಿವೆ ಎಂದೂ ವರದಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry