ನಕಲಿ ಪಹಣಿ ಜಾಲ: 8 ಆರೋಪಿಗಳ ಬಂಧನ

ಬುಧವಾರ, ಜೂಲೈ 17, 2019
30 °C

ನಕಲಿ ಪಹಣಿ ಜಾಲ: 8 ಆರೋಪಿಗಳ ಬಂಧನ

Published:
Updated:

ಚನ್ನಮ್ಮನ ಕಿತ್ತೂರು: ಸರಕಾರಿ ಕೆರೆ ಅಚ್ಚುಕಟ್ಟು ಪ್ರದೇಶ ಕಬಳಿಕೆ ಹಾಗೂ ನಕಲಿ ಸ್ವಾತಂತ್ರ್ಯಯೋಧರ ಪತ್ತೆ ಮಾಡಿದ್ದ ಬೈಲಹೊಂಗಲ ತಾಲ್ಲೂಕು ಆಡಳಿತ ಈಗ ನಕಲಿ ಉತಾರ (ಪಹಣಿ ಪತ್ರಿಕೆ) ಸೃಷ್ಟಿಸಿ ವಂಚಿಸುತ್ತಿದ್ದ ತಂಡವನ್ನು ಬಯಲಿಗೆಳೆದಿದೆ.ತಹಸೀಲ್ದಾರ ಪಿ.ಎನ್. ಲೋಕೇಶ್ ಮತ್ತು ಕಿತ್ತೂರು ವಿಶೇಷ ತಹಸೀಲ್ದಾರ ಸಯಿದಾ ಆಫ್ರೀನ್ ಬಳ್ಳಾರಿ ಅವರು ವಂಚಕನೊಬ್ಬನ ನೆರವಿನಿಂದ ಇಡೀ ತಂಡವನ್ನು ಪತ್ತೆ ಮಾಡಿದ್ದಲ್ಲದೆ, ಅದರ ಹಿಂದಿನ ವ್ಯವಸ್ಥಿತ ಜಾಲವನ್ನು ಬೇಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು ಎಂಟು ಜನ ಆರೋಪಿಗಳನ್ನು ಕಿತ್ತೂರು ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.ದೇಗಾಂವ ಶಿರಗಾಪುರ ಗ್ರಾಮದ ಭರಮಣ್ಣ ಕಾಳಾರ (32), ಗದ್ದಿಕರವಿನಕೊಪ್ಪದ ನಾಗನಗೌಡ ಪಾಟೀಲ (30), ಬೈಲಹೊಂಗಲ ಡಿಟಿಪಿ ಸೆಂಟರ್‌ನ ರಾಜಶೇಖರ ಲೋಕಾಪುರ (33), ಕಿತ್ತೂರಿನ (ಸದ್ಯ ಹುಬ್ಬಳ್ಳಿ ಗಾಂಧಿ ನಗರದ ವಾಸಿ) ರಾಜು ಅಲಿಯಾಸ್ ರಾಚಯ್ಯ ವಸ್ತ್ರದ (28), ಬೈಲಹೊಂಗಲದ ದಸ್ತು ಬರಹಗಾರ ಮುಸ್ತಾಕಅಹ್ಮದ್ ಮುಲ್ಲಾ (30), ಗವನಾಳದ ಆನಂದ ಕಾಂಬಳೆ (26), ದೇವಲಾಪುರದ ಸದ್ಯ ಬೈಲಹೊಂಗಲ ಆಶ್ರಯನಗರದಲ್ಲಿ ವಾಸವಾಗಿರುವ ಜಗದೀಶ ಕಟ್ಟೀಮನಿ (31) ಹಾಗೂ ತಾರೇಶ ಶಿರೂರ (32) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.ವಂಚನೆ ಸಂಚು: ವಂಚಕರ ಜಾಲವು ರೈತರ ಭೂಮಿಯ ದಾಖಲಾದ ಸರ್ವೆ ನಂಬರ್, ಉತಾರದಲ್ಲಿಯ ಹೆಸರು ಮತ್ತು ಆಸ್ತಿ ವಿವರ ಬದಲಾವಣೆ ಮಾಡಿ ಬ್ಯಾಂಕಿಗೆ ನೀಡಿ ಲಕ್ಷಾಂತರ ರೂಪಾಯಿ ಸಾಲ ಪಡೆಯುತ್ತಿತ್ತು. ಈ ರೀತಿ ಖೊಟ್ಟಿ ದಾಖಲೆ ನೀಡಿ ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿತ್ತು ಎಂದು ತಹಸೀಲ್ದಾರ ಪಿ.ಎನ್. ಲೋಕೇಶ್ ಹಾಗೂ ವಿಶೇಷ ತಹಸೀಲ್ದಾರ ಸಯಿದಾ ಆಫ್ರೀನ್ ಬಳ್ಳಾರಿ ಅವರು ಜಂಟಿ ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.ದೊಡವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಉಡಿಕೇರಿ ಗ್ರಾಮದ ಮೂಗಬಸಪ್ಪ ಮೂಗಬಸವ, ಧಾರವಾಡದ ಅಲಹಾಬಾದ್ ಬ್ಯಾಂಕ್ ಶಾಖೆಯಲ್ಲಿ ಖೊಟ್ಟಿ ಉತಾರ ನೀಡಿ ರೂ. 16.5 ಲಕ್ಷ ಸಾಲ ಪಡೆದಿದ್ದಾರೆ~ ಎಂದು ತಿಳಿಸಿದರು.ವಂಚಕರ ತಂಡವು ಅಸಲಿ ಉತಾರ ಪಡೆದು ಅದರ ಮೇಲೆ ಅಂಟಿಸಿದ್ದ ಹಾಲೋಗ್ರಾಂ ನಂಬರ್ ಕಿತ್ತು ತಮಗೆ ಬೇಕಾದಷ್ಟು ಎಕರೆ ಭೂಮಿ ವಿವರಣೆ ಹಾಕಿಕೊಂಡಿದ್ದ ನಕಲಿ ಉತಾರಕ್ಕೆ ಅಂಟಿಸಿ ಸಾಲ ಪಡೆಯುತ್ತಿದ್ದರು ಎಂದು ವಿವರಿಸಿದರು.ಸಿಕ್ಕಿದ್ದು ಹೀಗೆ: ದೇಗಾಂವ ಗ್ರಾಮದ ದಾಖಲಾತಿ ಸಂಖ್ಯೆ 28/8ರ ಮೂಲ ಉತಾರದಲ್ಲಿ ರಾಯವ್ವ ಕಾಳಾರ, ಧನಪಾಲ್, ಯಲ್ಲಪ್ಪ, ಗೋಪಾಲ, ಅಣ್ಣಪ್ಪ, ಭರಮಣ್ಣ, ಸುಶೀಲಾ, ಅಶೋಕ, ಪ್ರಕಾಶ ಮತ್ತು ಮಂಜುನಾಥ ಕಾಳಾರ ಹೆಸರಿನಲ್ಲಿ 2 ಎಕರೆ 18 ಗುಂಟೆ ಜಮೀನು ಇದೆ. ಆದರೆ ಇದೇ ಉತಾರದ 9ನೇ ಕಾಲಂನಲ್ಲಿ  ಭರಮಣ್ಣ ಕಾಳಾರ ತಮ್ಮ ಏಕೈಕ ಹೆಸರನ್ನು ದಾಖಲು ಮಾಡಿಕೊಂಡರು. 2.18 ಎಕರೆಯಿದ್ದ ಕ್ಷೇತ್ರವನ್ನು 4.33 ಎಕರೆಗೆ ತಿದ್ದುಪಡಿ ಮಾಡಿ ನಕಲಿ ದಾಖಲೆ ಸೃಷ್ಟಿಸಿದ್ದರು.ಇದಲ್ಲದೆ ದೇಗಾಂವ ಗ್ರಾಮದ ಅರಣ್ಯ ಇಲಾಖೆ ಎಂದು ದಾಖಲಾಗಿರುವ ಸರ್ವೆ ನಂ. 288 ಅನ್ನು 288/5 ಎಂಬುದಾಗಿ ಬದಲಾಯಿಸಿ ತಮ್ಮ ಹೆಸರಿನಲ್ಲಿ ತಿದ್ದುಪಡಿ ಮಾಡಿ, ಮೂಲದಲ್ಲಿದ್ದ 8.37 ಗುಂಟೆ ಜಮೀನನ್ನು 4.33 ಎಕರೆ ಎಂದು ಬೋಗಸ್ ತಿದ್ದುಪಡಿ ಮಾಡಿಕೊಂಡನು. ಇದೇ ಉತಾರವನ್ನು ಬೈಲೂರಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಗೆ ಸಾಲ ಪಡೆಯಲು ಸಲ್ಲಿಸಿದ್ದನು. ಬ್ಯಾಂಕ್ ಅಧಿಕಾರಿಗಳು ಕಂದಾಯ ಇಲಾಖೆಗೆ ಪರಿಶೀಲನೆಗಾಗಿ ಕಳುಹಿಸಿದಾಗ ವಂಚನೆ ಹೊರಬಂದಿತು. ಇದರ ಹಿಂದಿದ್ದ ವಂಚಕರ ಜಾಲವೂ ಬಯಲಿಗೆ ಬಂದಿತು~ ಎಂದು ವಿವರಿಸಿದರು.`ಸದ್ಯ ಬೈಲಹೊಂಗಲದ ಉಪವಿಭಾಗಾಧಿಕಾರಿ ವಿ.ಬಿ. ದಾಮಣ್ಣವರ ಅವರು ತಹಸೀಲ್ದಾರ ಆಗಿದ್ದ ಸಂದರ್ಭದಲ್ಲಿ ಇಂಥದೊಂದು ಪ್ರಕರಣ ಬಯಲಿಗೆ ಬಂದಿತ್ತು. ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ್ದರು.`ಗದ್ದಿಕರವೀನಕೊಪ್ಪದ ಆರೋಪಿ ಎನ್ನಲಾದ ನಾಗನಗೌಡ ಪಾಟೀಲ ನಕಲಿ ಉತಾರ ಸೃಷ್ಟಿಯ ಮೂಲ ಸೂತ್ರದಾರ ಎಂಬುದು ಪೊಲೀಸರ ಅನುಮಾನ. ಬೈಲಹೊಂಗಲದ ಡಿಟಿಪಿ ಅಪರೇಟರ್ ರಾಜಶೇಖರ ಲೋಕಾಪುರ ಇದಕ್ಕೆ ನೆರವಾಗಿದ್ದಾರೆ ಎಂದೂ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry