ಗುರುವಾರ , ನವೆಂಬರ್ 21, 2019
21 °C

`ನಕಲಿ ಮತದಾನ ತಡೆಗೆ ನೈಜತೆ ಪರಿಶೀಲನೆ'

Published:
Updated:

ಔರಾದ್: ಮತಪಟ್ಟಿಯಲ್ಲಿ ನಕಲಿ ಮತದಾರರ ಹೆಸರು ಸೇರ್ಪಡೆಯಾಗದಂತೆ ಚುನಾವಣೆ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅಧಿಕಾರಿಗಳು ಖುದ್ದಾಗಿ ಮತದಾರರ ನೈಜತೆ ಪರಿಶೀಲಿಸುತ್ತಿದ್ದಾರೆ.ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ತಾಲ್ಲೂಕಿನಾದ್ಯಂತ ಏಳು ಸಾವಿರಕ್ಕೂ ಜಾಸ್ತಿ ಅರ್ಜಿಗಳು ಬಂದಿವೆ. ಅರ್ಜಿ ಸಲ್ಲಿಕೆಗೆ ಇನ್ನು ಎರಡು ದಿನ ಕಾಲಾವಕಾಶವಿದೆ. ನಮೂನೆ 6 ತುಂಬಿ ಹೆಸರು ಸೇರ್ಪಡೆ ಮತ್ತು ನಮೂನೆ 7 ತುಂಬಿ ಪಟ್ಟಿಯಿಂದ ಹೆಸರು ಕೈಬಿಡಲಾಗುತ್ತದೆ. ನಮೂನೆ 8ರಲ್ಲಿ ಹೆಸರು ತಿದ್ದುಪಡಿ ಮತ್ತು ನಮೂನೆ 8ಎ ರಲ್ಲಿ ಮತಪಟ್ಟಿಯಿಂದ ಹೆಸರು ವರ್ಗಾವಣೆ ಮಾಡಲು ಅವಕಾಶವಿದೆ.ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದವರನ್ನು ಖುದ್ದಾಗಿ ಹಾಜರಾಗುವಂತೆ ಸೂಚನಾ ಪತ್ರ ಕಳುಹಿಸಲಾಗಿದೆ. ಎಪ್ರಿಲ್ 2ರಿಂದ 6ರ ವರೆಗೆ ಮಿನಿ ವಿಧಾನಸೌಧಕ್ಕೆ ಬಂದು ಮತದಾರರ ನೈಜತೆ ಪರಿಶೀಲನೆ ವೇಳೆ ಹಾಜರಿರುವಂತೆ ತಿಳಿಸಲಾಗಿದೆ.

ತಾಲ್ಲೂಕಿನ ಎಲ್ಲ ಆರು ಹೋಬಳಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಸಂಬಂಧಿತ ವ್ಯಕ್ತಿ ಅಲ್ಲಿಗೆ ಹೋಗಿ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಲು ಅಗತ್ಯ ಮಾಹಿತಿ ಮತ್ತು ದಾಖಲೆ ನೀಡಿದರೆ ಮಾತ್ರ ಅರ್ಜಿ ಸ್ವೀಕರಿಸಲಾಗುವುದು.

ಖುದ್ದಾಗಿ ಹಾಜರಾಗದ ಮತ್ತು ಅಗತ್ಯ ದಾಖಲಾತಿ ನೀಡದವರ ಹೆಸರು ಮತಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ ಎಂದು ತಹಸೀಲ್ದಾರ್ ಸಿದ್ದಲಿಂಗಪ್ಪ ನಾಯಕ ತಿಳಿಸಿದ್ದಾರೆ. ಮತಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ 1500 ಜನ ಗುರುವಾರ ನೈಜತೆ ಪರಿಶೀಲನೆ ವೇಳೆ ಹಾಜರಾಗಿದ್ದರು. ಈ ಪೈಕಿ 1100 ಅರ್ಜಿಗಳು ಸ್ವೀಕೃತವಾಗಿ 400 ಅರ್ಜಿಗಳು ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಹಾಯಕ ಆಯುಕ್ತರು ಶುಕ್ರವಾರ ಮತದಾರರ ಹೆಸರು ಸೇರ್ಪಡೆ ಪ್ರಕ್ರಿಯೆ ಪರಿಶೀಲಿಸಿದರು.

ಸಲ್ಲಿಸಿದ ಅರ್ಜಿಗಳು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಕರ್ತವ್ಯನಿರತ ಸಿಬ್ಬಂದಿಗಳಿಗೆ ಸೂಚಿಸಿದರು. ಮತದಾರರ ನೈಜತೆ ಪರಿಶೀಲನೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ನಕಲಿ ಮತದಾರರು ಪಟ್ಟಿಯ್ಲ್ಲಲಿ ಸೇರ್ಪಡೆಯಾಗುವುದನ್ನು ತಡೆಯಲು ಸಾಧ್ಯವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಪ್ರತಿಕ್ರಿಯಿಸಿ (+)