ಶುಕ್ರವಾರ, ಮೇ 7, 2021
21 °C

ನಕಲಿ ಮದ್ಯ ತಯಾರಿಕಾ ಘಟಕ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಇಲ್ಲಿಗೆ ಸಮೀಪದ ಕಲ್ಮಕ್ಕಿ ಬಳಿ ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ಬುಧವಾರ ಸಂಜೆ ದಾಳಿ ನಡೆಸಿರುವ ಅಬಕಾರಿ ಪೊಲೀಸರು ಇಬ್ಬರನ್ನು ಬಂಧಿಸಿ ಮದ್ಯಸಾರವನ್ನೂ ವಶಪಡಿಸಿಕೊಂಡಿದ್ದಾರೆ.ಕಲ್ಮಕ್ಕಿ ಸಮೀಪದ ಕಚಗಾನೆಯ ದಿನಸಿ ಅಂಗಡಿಯ ಮಾಲೀಕ ರವಿ (35) ಎಂಬಾತ ನಕಲಿ ಮದ್ಯ ತಯಾರಿಸಿ ತನ್ನ ಅಂಗಡಿಯಲ್ಲಿ ಮಾರುತ್ತಿದ್ದನು ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ಅಬಕಾರಿ ಜಿಲ್ಲಾಧಿಕಾರಿ ವೆಂಕಟೇಶ್ ಪದಕಿ ಮಾರ್ಗದರ್ಶನದಲ್ಲಿ ರವಿಯ ಅಂಗಡಿಯ ಮೇಲೆ ದಾಳಿ ನಡೆಸಿದರು.ಅಬಕಾರಿ ಪ್ರಭಾರಿ ಡಿವೈಎಸ್‌ಪಿ ರತ್ನಾಕರ ರೈ, ಇನ್ಸ್‌ಪೆಕ್ಟರ್ ಶಿವಾನಂದ ಮತ್ತು ಸಿಬ್ಬಂದಿ ನಡೆಸಿದ ದಾಳಿಯ ಸಂದರ್ಭದಲ್ಲಿ ರವಿಯ ಬಳಿ 20 ಲೀಟರ್ ಮದ್ಯಸಾರ ಪತ್ತೆಯಾಗಿದೆ. ಜೊತೆಗೆ ನಕಲಿ ಮದ್ಯ ತಯಾರಿಕೆಗೆ ಬಳಕೆಯಾಗುತ್ತಿದ್ದ 158 ಖಾಲಿ ಬಾಟಲಿಗಳು ಮತ್ತು 32 ನಕಲಿ ಭದ್ರತಾ ಚೀಟಿಗಳು (ಲೇಬಲ್) ಕೂಡ ಅಬಕಾರಿ ಪೊಲೀಸರಿಗೆ ಸಿಕ್ಕಿದೆ.

  

ರವಿ ನೀಡಿದ ಮಾಹಿತಿಯ ಮೇರೆಗೆ ಆತನಿಗೆ ಮದ್ಯಸಾರ ಸರಬರಾಜು ಮಾಡುತ್ತಿದ್ದ ಶೃಂಗೇರಿ ಬಳಿಯ ನೆಮ್ಮಾರಿನ ಗಣಪತಿ ಎಂಬಾತನನ್ನೂ ಬಂಧಿಸಲಾಗಿದೆ. ಶೃಂಗೇರಿಯಲ್ಲಿ ಇದೇ ತಿಂಗಳ ಮೊದಲ ವಾರ ಪತ್ತೆಯಾದ ನಕಲಿ ಮದ್ಯ ತಯಾರಿಕಾ ಘಟಕಕ್ಕೂ ಕಳಸದ ಘಟಕಕ್ಕೂ ಸಂಬಂಧ ಇದೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.

 

ನಕಲಿ ಮದ್ಯ ತಯಾರಿಕೆ ಜಾಲಕ್ಕೆ ಸಂಬಂಧಿಸಿದಂತೆ ಒಟ್ಟು 80 ಜನರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗುತ್ತಿದ್ದು ಇನ್ನಷ್ಟು ಮಂದಿಯ ಶೋಧ ಮುಂದುವರೆದಿದೆ ಎಂದು ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ. ಆರೋಪಿಗಳ ಬಂಧನಕ್ಕೆ ಶೃಂಗೇರಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಚಂದ್ರಶೇಖರ, ಸಿಬ್ಬಂದಿಗಳಾದ ಮೋಹನ್, ನಾರಾಯಣ ಗೌಡ, ರಂಗನಾಥ್, ಶಿವಾಜಿ ಮತ್ತು ಸತೀಶ್ ಶೆಟ್ಟಿ ನೆರವು ನೀಡಿದರು ಎಂದೂ ಅಬಕಾರಿ ಇಲಾಖೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.