ಭಾನುವಾರ, ಜೂನ್ 20, 2021
25 °C

ನಕಲಿ ಮದ್ಯ ಸೇವಿಸಿ ವ್ಯಕ್ತಿ ಮೃತಪಟ್ಟ ಹಿನ್ನೆಲೆ:ಮದ್ಯ ನಿಷೇಧಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಯಕನಹಟ್ಟಿ:  ನಕಲಿ ಮದ್ಯ ಸೇವನೆಯಿಂದ ಗ್ರಾಮದ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಸಮೀಪದ ಗೌರೀಪುರದ ಗ್ರಾಮಸ್ಥರು ಇಲ್ಲಿನ ನಾಡಕಚೇರಿಗೆ ತೆರಳಿ ಶನಿವಾರ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಆಗ್ರಹಿಸಿ ಉಪ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.ಯುಗಾದಿ ಹಬ್ಬದ ವೇಳೆಯಲ್ಲಿ ಗ್ರಾಮದ ಗಂಗಾಧರಪ್ಪ (45) ಮದ್ಯ ಸೇವನೆಯಿಂದ ಮೃತಪಟ್ಟ ಹಿನ್ನಲೆಯಲ್ಲಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿ ಉಪ ತಹಶೀಲ್ದಾರರಿಗೆ ಮದ್ಯ ಮಾರಾಟ ನಿಷೇಧಿಸುವಂತೆ ಆಗ್ರಹಿಸಿದರು. ಗ್ರಾ.ಪಂ. ಸದಸ್ಯ ಶಿವಾನಂದಯ್ಯ ಮಾತನಾಡಿ, ಗ್ರಾಮದಲ್ಲಿ ನಕಲಿ ಮದ್ಯದ ಹಾವಳಿ ಹೆಚ್ಚಾಗಿದೆ. ಪೊಲೀಸರು ಜಾಣ ಕುರುಡು ಅನುಸರಿಸುತ್ತಿದ್ದಾರೆ. ಸಂಜೆ ಯಾಗುತ್ತಿದ್ದಂತೆ ಕುಡುಕರ ಹಾವಳಿ ಹೆಚ್ಚಾಗಿದೆ. ಆದರೂ ಸಂಬಂಧಿಸಿದವರು ಕ್ರಮಕೈಗೊಳ್ಳುತ್ತಿಲ್ಲ. ಈ ಬಗ್ಗೆ ಶೀಘ್ರವೆ ಕ್ರಮ ಕೈಗೊಳ್ಳದಿದ್ದರೆ ಗ್ರಾಮಸ್ಥರೆಲ್ಲಾ ಸೇರಿ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಮಹಿಳಾ ಸ್ವ-ಸಹಾಯ ಸಂಘದ ಈಶ್ವರಮ್ಮ ಮಾತನಾಡಿ, ಗ್ರಾಮದಲ್ಲಿ ದಿನಸಿ ಸಿಗುವಷ್ಟು ಸುಲಭವಾಗಿ ಮದ್ಯ ಸಿಗುತ್ತದೆ. ಇದರಿಂದ ಮಹಿಳೆಯರಿಗೆ, ಮಕ್ಕಳಿಗೆ ತೊಂದರೆಯಾಗುತ್ತದೆ. ಕೂಡಲೇ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು.ದೂರವಾಣಿಯಲ್ಲಿ  ತಹಶೀಲ್ದಾರ್ ರಾಮಚಂದ್ರಪ್ಪ  ಮಾತನಾಡಿ, ಗ್ರಾಮದಲ್ಲಿ ನಕಲಿ ಮದ್ಯ ಮಾರಾಟ ಮಾಡುವವರ ಬಗ್ಗೆ ಇಲಾಖೆಗೆ ತಿಳಿಸಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೂಡಲೇ ಸಂಬಂಧಿಸಿದವರಿಗೆ ತಿಳಿಸಿ ಗ್ರಾಮದಲ್ಲಿ ನಕಲಿ ಮದ್ಯ ಮಾರಾಟ ತಡೆಯಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು. ಸ್ಥಳಕ್ಕೆ ಅಬಕಾರಿ ಅಧಿಕಾರಿ ಓಬಣ್ಣ ಆಗಮಿಸಿ, ಮನವಿ ಸ್ವೀಕರಿಸಿದರು.ಮಲಿಯಮ್ಮ, ಅಕ್ಕ ಮಹಾದೇವಿ, ವೀರಶೈವ ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳು, ಗ್ರಾಮ ಪಂಚಾಯ್ತಿ ಸದಸ್ಯೆ ತಿಮ್ಮಕ್ಕ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.