ನಕಲಿ ಲೋಕಾಯುಕ್ತ ಅಧಿಕಾರಿ ಬಂಧನ

7
ಸರ್ಕಾರಿ ನೌಕರರಿಂದ ಹಣ ಸುಲಿಗೆ ಮಾಡುತ್ತಿದ್ದ ತ್ಯಾಗರಾಜ್‌

ನಕಲಿ ಲೋಕಾಯುಕ್ತ ಅಧಿಕಾರಿ ಬಂಧನ

Published:
Updated:

ಬೆಂಗಳೂರು: ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಸರ್ಕಾರಿ ನೌಕರರಿಂದ ಹಣ ಸುಲಿಗೆ ಮಾಡುತ್ತಿದ್ದ ನಗರದ ಪಟ್ಟೇಗಾರಪಾಳ್ಯದ ನಿವಾಸಿ ತ್ಯಾಗರಾಜ್‌ ಎಂಬ ಟ್ಯಾಕ್ಸಿ ಚಾಲಕನನ್ನು ಲೋಕಾಯುಕ್ತ ಪೊಲೀಸರು ಮತ್ತು ವಿಜಯನಗರ ಪೊಲೀಸ್‌ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.ಬಸವರಾಜು ಮತ್ತು ಚಂದ್ರಶೇಖರ್‌ ಎಂಬ ಹೆಸರುಗಳಿಂದ ತನ್ನನ್ನು ಪರಿಚಯಿಸಿಕೊಂಡು ತ್ಯಾಗರಾಜ್‌, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಂದ ಹಣ ಸುಲಿಗೆ ಮಾಡುತ್ತಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರುಗಳು ಬಂದಿದ್ದವು. ಈತನ ಕುರಿತು ಖಚಿತ ಮಾಹಿತಿ ಕಲೆಹಾಕಿದ ಲೋಕಾಯುಕ್ತ ಮತ್ತು ವಿಜಯನಗರ ಠಾಣೆಯ ಪೊಲೀಸರು ಸೋಮವಾರ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎಚ್‌.ಎನ್‌.ಸತ್ಯನಾರಾಯಣ ರಾವ್‌ ತಿಳಿಸಿದ್ದಾರೆ.‘ಆರೋಪಿ ಮೊದಲು ಟ್ಯಾಕ್ಸಿ ಚಾಲಕನಾಗಿದ್ದ. ನಂತರ ಎರಡು ವಾಹನಗಳನ್ನು ಖರೀದಿಸಿ ಬಾಡಿಗೆಗೆ ನೀಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಪಟ್ಟೇಗಾರಪಾಳ್ಯದಲ್ಲಿ ಸ್ವಂತ ಮನೆ ಹೊಂದಿರುವ ತ್ಯಾಗರಾಜ್‌, ಜೂಜು ಮತ್ತಿತರ ದುಶ್ಚಟಗಳನ್ನು ಹೊಂದಿದ್ದಾನೆ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ಅವರು ವಿವರ ನೀಡಿದ್ದಾರೆ.ಆರೋಪಿ ಈ ಹಿಂದೆಯೂ ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡಿದ್ದ. ಈ ಸಂಬಂಧ 2008 ಹಾಗೂ 2009ರಲ್ಲಿ ಈತನ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry