ನಕಲಿ ವೈದ್ಯರ ವಿರುದ್ಧ ಕ್ರಮ

7

ನಕಲಿ ವೈದ್ಯರ ವಿರುದ್ಧ ಕ್ರಮ

Published:
Updated:

ಹಾವೇರಿ: ‘ವೈದ್ಯ ವೃತ್ತಿ ನಡೆಸುವವರು ಹಾಗೂ ಪ್ರಯೋಗಾಲಯ ಇಲ್ಲವೇ ಡೈಗ್ನೋಸ್ಟಿಕ್ ಕೇಂದ್ರಗಳ ನಡೆಸುವವರು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಡಿ ನಿಯಮದಂತೆ ಹೆಸರು ನೋಂದಾಯಿಸಿಕೊಳ್ಳದಿದ್ದರೆ, ಅಂತಹ ಎಲ್ಲ ವೈದ್ಯರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಎಚ್ಚರಿಸಿದ್ದಾರೆ.ವೈದ್ಯಕೀಯ ಸಂಸ್ಥೆಗಳ ಅಧಿನಿಯಮದಂತೆ ಜಿಲ್ಲೆಯಾದ್ಯಂತ ಅಸ್ತಿತ್ವದಲ್ಲಿರುವ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು, ಖಾಸಗಿ ವೈದ್ಯರು ಅಲ್ಲದೇ ಪ್ರಯೋಗಾಲಯ ಮತ್ತು ಡೈಗ್ನೋಸ್ಟಿಕ್ ಕೇಂದ್ರಗಳನ್ನು ನಡೆಸುತ್ತಿರುವವರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಈಗಾಗಲೇ ನೋಂದಾವಣಿಗೆ ನೀಡಿದ ಅವಕಾಶ ಮುಗಿದು ಹೋಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಅವಧಿಯಲ್ಲಿ ನೋಂದಾವಣಿಗಾಗಿ ಜಿಲ್ಲೆಯಲ್ಲಿ 593 ಅರ್ಜಿ ಬಂದಿದ್ದು, ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸದ ವೈದ್ಯರು ಹಾಗೂ ಪ್ರಯೋಗಾಲಯಗಳ ಕಾರ್ಯ ನಿರ್ವಹಿಸುವವರ ಸಂಖ್ಯೆ 138 ಜನರಿದ್ದಾರೆ. ಇಂತಹ ವೈದ್ಯರು ಸೇವೆ ನಡೆಸಲು ಅನರ್ಹರಾಗಿದ್ದು, ಕೂಡಲೇ ಕ್ಲಿನಿಕ್ ಅಥವಾ ಡೈಗ್ನಾಸ್ಟಿಕ್ ಕೇಂದ್ರಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.ಇನ್ನು ಮುಂದೆ ಹೊಸದಾಗಿ ವೈದ್ಯ ವೃತ್ತಿ ಕೈಗೊಳ್ಳುವ ಮತ್ತು ಪ್ರಯೋಗಾಲಯ ಮತ್ತಿತರ ವೈದ್ಯ ಸಂಬಂದಿ ಸೇವಾ ಕೇಂದ್ರಗಳನ್ನು ನಡೆಸುವವರು ತಮ್ಮ ಕೇಂದ್ರದ ಹೆಸರು ನೋಂದಣಿಗಾಗಿ ಫಾರ್ಮ ‘ಬಿ’ಯಲ್ಲಿ ನಿಗದಿತ ಶುಲ್ಕದೊಂದಿಗೆ ಜಿಲ್ಲಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದ್ದಾರೆ.ಅಗತ್ಯ ನೋಂದಣಿ ಪ್ರಮಾಣ ಪತ್ರ ಪಡೆಯದೇ ಇಂತಹ ಕೇಂದ್ರ ಇಲ್ಲವೇ ಸೇವೆಯನ್ನು ಕೈಗೊಂಡಲ್ಲಿ ಅಥವಾ ಮುಚ್ಚುವಂತೆ ಆದೇಶ ಪಡೆದು ಪುನಃ ತಮ್ಮ ಚಟುವಟಿಕೆ ಮುಂದುವರಿಸುವುದು ಕಂಡು ಬಂದಲ್ಲಿ, ಅಂಥವರ ವಿರುದ್ಧ ವೈದ್ಯಕೀಯ ಸಂಸ್ಥೆಗಳ ಅಧಿನಿಯಮದ ಸೆಕ್ಷನ್ 19ರ ಅಡಿಯಲ್ಲಿ ಕ್ರಿಮಿನಲ್ ಅಪರಾಧದ ಅಡಿ 3 ವರ್ಷಗಳ ಸೆರೆವಾಸ ಹಾಗೂ 10 ಸಾವಿರ ರೂ.ಗಳ ದಂಡ ವಿಧಿಸಲಾಗುವುದು. ನಕಲಿ ವೈದ್ಯರು ಕಂಡು ಬಂದಲ್ಲಿ ಪೊಲೀಸ್ ಕಾರ್ಯಾಚರಣೆ ನಡೆಸಲು ಸಹ ಕ್ರಮ ಕೈಕೊಳ್ಳಲಾಗುವುದು ಎಂದು ಹೇಳಿರುವ ಅವರು,   ಅನಧಿಕೃತ ವೈದ್ಯರು ತಮ್ಮ ಸೇವೆ ಇಲ್ಲವೇ ವೈದ್ಯಕೀಯ ಸೇವಾ ಕೇಂದ್ರಗಳನ್ನು ಕೂಡಲೇ ನಿಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry