ನಕಲಿ ಸಿಮ್ ಬಳಕೆ; ರಾವುತ್ ಮಗಳ ವಿಚಾರಣೆ

7

ನಕಲಿ ಸಿಮ್ ಬಳಕೆ; ರಾವುತ್ ಮಗಳ ವಿಚಾರಣೆ

Published:
Updated:

ಕೆಜಿಎಫ್: ಬಿಜಿಎಂಎಲ್ ಮೈಸೂರು ಮೈನ್ಸ್ ಮಿಲ್‌ನ ಕಳವು ಯತ್ನ ಪ್ರಕರಣದ ಆರೋಪಿಯಾಗಿರುವ ಬಿಜಿಎಂಎಲ್ ಮುಖ್ಯ ಭದ್ರತಾ ಅಧಿಕಾರಿ ಆನಂದ್‌ಸಿಂಗ್ ರಾವುತ್ ಅವರ ಪುತ್ರಿ ಫೋರ್ಜರಿ ಮಾಡಿ ಪಡೆದುಕೊಂಡ ಮೊಬೈಲ್ ಸಿಮ್ ಉಪಯೋಗಿಸುತ್ತಿದ್ದ ಪ್ರಸಂಗ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.ದಾಸರಹೊಸಹಳ್ಳಿ ನಿವಾಸಿ ಮುನಿರತ್ನ ಎಂಬುವರು ಸಿಮ್ ಫೋರ್ಜರಿ ಬಗ್ಗೆ ನೀಡಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಆನಂದ್‌ಸಿಂಗ್ ರಾವುತ್ ಪುತ್ರಿ ಸಿಮ್ ಬಳಕೆ ಮಾಡುತ್ತಿರುವುದನ್ನು ಪತ್ತೆ ಮಾಡಿದ್ದಾರೆ.ದೂರುದಾರ ಮುನಿರತ್ನ ಅವರು ದಾಸರಹೊಸಹಳ್ಳಿಯ ಅಂಗಡಿಯೊಂದರಲ್ಲಿ ತಮ್ಮ ಮತದಾರರ ಗುರ್ತಿನ ಚೀಟಿ ನೀಡಿ ವೊಡಾಫೋನ್ ಕಂಪನಿಯ ಎರಡು ಸಿಮ್‌ಗಳನ್ನು ಖರೀದಿ ಮಾಡಿದ್ದರು. ಎರಡೂ ಸಿಮ್‌ಗಳನ್ನು ಸಹ ಅವರೇ ಉಪಯೋಗಿಸುತ್ತಿದ್ದರು.ಅವರ ಹೆಸರಿನ ಮತದಾರರ ಗುರ್ತಿನ ಚೀಟಿಯನ್ನು ಉಪಯೋಗಿಸಿಕೊಂಡು ಅವರ ಸಹಿಯನ್ನು ಫೋರ್ಜರಿ ಮಾಡಿ ರಿಲೆಯನ್ಸ್ ಕಂಪೆನಿಯ ಮತ್ತೊಂದು ಸಿಮ್‌ನ್ನು ಪಡೆಯಲಾಗಿದೆ.ಬಿಜಿಎಂಎಲ್ ಮೈಸೂರು ಮೈನ್ಸ್ ಮಿಲ್ ಕಳ್ಳತನ ಪ್ರಯತ್ನದಲ್ಲಿ ಆರೋಪಿಗಳಿಗೆ ಸಹಕಾರ ನೀಡಿದ ಆರೋಪದ ಮೇರೆಗೆ  ಈಗ ಬಂಧಿತರಾಗಿರುವ ಮುಖ್ಯ ಭದ್ರತಾ ಅಧಿಕಾರಿ ಮತ್ತು ಬಿಎಸ್‌ಎಫ್‌ನ ಸೆಕೆಂಡ್ ಇನ್ ಕಮಾಂಡೆಂಟ್ ಆನಂದ್ ಸಿಂಗ್ ರಾವುತ್ ಅವರ ಮೊಬೈಲ್ ಕಾಲ್ ವಿವರಗಳನ್ನು ಪೊಲೀಸರು ತನಿಖೆಗೆ ಒಳಪಡಿಸಿದಾಗ  ಘಟನೆ ಬೆಳಕಿಗೆ ಬಂದಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಬೆಮಲ್‌ನಗರ ಪೊಲೀಸರು ರಾವುತ್ ಪುತ್ರಿಯನ್ನು ತನಿಖೆಗೆ ಒಳಪಡಿಸಿದಾಗ ಮೊಬೈಲ್ ಬಳಸುತ್ತಿದ್ದುದನ್ನು ಒಪ್ಪಿಕೊಂಡಿದ್ದಾರೆ. ಉತ್ತರ ಭಾರತದ ಮೂಲದ ನಮಗೆ ಸ್ಥಳೀಯವಾಗಿ ಉಪಯೋಗಿಸಲು ಮೊಬೈಲ್ ಸಿಮ್ ಬೇಕೆಂದು ಆನಂದ್‌ಸಿಂಗ್ ರಾವುತ್  ಚಾಲಕ ಅರಸು ಎಂಬುವರಿಗೆ ಹೇಳಲಾಗಿತ್ತು.ಅರಸು ತಂದು ಕೊಟ್ಟ ಸಿಮ್ ಉಪಯೋಗಿಸಿಕೊಳ್ಳುತ್ತಿದ್ದುದಾಗಿ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಸಿಮ್ ಫೋರ್ಜರಿ ಪ್ರಕರಣ ತಿರುವು ಪಡೆದುಕೊಳ್ಳುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry