ಬುಧವಾರ, ಏಪ್ರಿಲ್ 21, 2021
30 °C

ನಕಲಿ ಹಾಜರಿ ಪುಸ್ತಕ ಸೃಷ್ಟಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸದಾಗಿ ಈಗ ಅತಿಥಿ ಉಪನ್ಯಾಸಕರ ನೇಮಕಾತಿ ವಿವಾದ ಸುತ್ತಿಕೊಂಡಿದೆ.ಅತಿಥಿ ಉಪನ್ಯಾಸಕರ ಹೆಸರಿನಲ್ಲಿ ಹಣದ ದುರುಪಯೋಗ ನಡೆದಿದೆ. ಎರಡು ಹಾಜರಿ ಪುಸ್ತಕಗಳನ್ನು ನಿರ್ವಹಿಸುವ ಮೂಲಕ ಒಂದೆಡೆ ಬೋಧಕ ಸಿಬ್ಬಂದಿಗೆ ಇನ್ನೊಂದೆಡೆ ವಿಶ್ವವಿದ್ಯಾಲಯದ ದಾರಿ ತಪ್ಪಿಸುವ ಕೆಲಸ ಈ ಕಾಲೇಜಿನಲ್ಲಿ ವ್ಯವಸ್ಥಿತವಾಗಿ ನಡೆದಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್‌ನ (ಎಸ್.ಎಫ್.ಐ) ಜಿಲ್ಲಾ ಘಟಕ ದೂರಿದೆ.ನೇಮಕಗೊಂಡಿರುವ ಐವರು ಅತಿಥಿ ಉಪನ್ಯಾಸಕರು ದ್ವಿತೀಯ ಸೆಮಿಸ್ಟರ್ ಅವಧಿಯಲ್ಲಿ (ಈ ವರ್ಷದ ಜನವರಿ) ಸೇವೆಗೆ ಹಾಜರಾಗಿದ್ದಾರೆ. ಆದರೆ, ಈ ಉಪನ್ಯಾಸಕರು ಮೊದಲ ಸೆಮಿಸ್ಟರ್‌ನಲ್ಲಿಯೇ (ಆಗಸ್ಟ್ 2010) ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ತೋರಿಸುವ ದಾಖಲೆಗಳನ್ನು ಸೃಷ್ಟಿಸುವ ಮೂಲಕ ವಿ.ವಿ ಕಣ್ಣಿಗೆ ಮಣ್ಣೆರೆಚುವ ಕಾರ್ಯ ನಡೆದಿದೆ ಎಂದು ಎಸ್.ಎಫ್.ಐ. ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ದೇಸಾಯಿ, ಉಪಾಧ್ಯಕ್ಷ ಅಮರೇಶ ಕಡಗದ ದೂರಿದ್ದಾರೆ.ಅಲ್ಲದೇ, ತಮ್ಮ ಆರೋಪಕ್ಕೆ ಪುರಾವೆಯಾಗಿ ಅವರು ದಾಖಲೆಗಳನ್ನು ಸಹ ‘ಪ್ರಜಾವಾಣಿ’ಗೆ ಒದಗಿಸಿದ್ದಾರೆ.ಅನುರಾಧಾ ಬಿ. ಎಂಬ ಇಂಗ್ಲಿಷ್ ಉಪನ್ಯಾಸಕಿ 12.8.2010ರಂದು ನೇಮಕಗೊಂಡಿದ್ದಾರೆ ಎಂದು ನಗರದ ಪ್ರಥಮ ದರ್ಜೆ ಕಾಲೇಜಿಗೆ ನೇಮಕಾತಿಗೊಂಡ ಅತಿಥಿ ಉಪನ್ಯಾಸಕರಿಗೆ ಅನುಮೋದನೆ ನೀಡಿ ಕಾಲೇಜು ಶಿಕ್ಷಣ ಇಲಾಖೆಯ ಗುಲ್ಬರ್ಗ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಹೊರಡಿಸಿರುವ ಆದೇಶ ಸ್ಪಷ್ಟಪಡಿಸುತ್ತದೆ. ಈ ಆದೇಶದಂತೆ ಒಟ್ಟು 45 ಜನ ಅತಿಥಿ ಉಪನ್ಯಾಸಕರಿಗೆ ಅನುಮೋದನೆ ನೀಡಲಾಗಿದೆ.ಅದರೆ, ಆಗಸ್ಟ್ ತಿಂಗಳ ಹಾಜರಿ ಪುಸ್ತಕದಲ್ಲಿ ಉಪನ್ಯಾಸಕಿ ಅನುರಾಧಾ ಬಿ. ಅವರ ಸಹಿಯೇ ಇಲ್ಲ.  ಆದರೆ, ಸೆಪ್ಟೆಂಬರ್ ತಿಂಗಳಿಗೆ ಸಂಬಂಧಿಸಿದಂತೆ ಎರಡು ಹಾಜರಾತಿ ಪುಸ್ತಕಗಳಿದ್ದು, ಒಂದು ಪುಸ್ತಕದಲ್ಲಿ ಮಾತ್ರ ಸದರಿ ಉಪನ್ಯಾಸಕಿಯ ಸಹಿ ಇದೆ. ಹಾಗಾದರೆ, ಮತ್ತೊಂದು ಹಾಜರಿ ಪುಸ್ತಕವನ್ನು ಏಕೆ ನಿರ್ವಹಣೆ ಮಾಡಲಾಗಿದೆ ಎಂದು ಗುರುರಾಜ ದೇಸಾಯಿ ಪ್ರಶ್ನಿಸುತ್ತಾರೆ.ಅದೇ ರೀತಿ ವಾಣಿಜ್ಯ ಮತ್ತು ಆಡಳಿತ ವಿಭಾಗದ ಉಪನ್ಯಾಸಕ ಮಹ್ಮದ್ ಹುಸೇನ್ ಅವರು ಸಹ 12.8.2010ರಂದೇ ನೇಮಕಗೊಂಡಿದ್ದಾರೆ. ಇವರ ಸಹಿ ಸಹ ಆಗಸ್ಟ್ ತಿಂಗಳ ಹಾಜರಿ ಪುಸ್ತಕದಲ್ಲಿ ಇಲ್ಲ. ಆದರೆ, ಸೆಪ್ಟೆಂಬರ್ ತಿಂಗಳಿಗೆ ಸಂಬಂಧಿಸಿದಂತೆ ಎರಡು ಪುಸ್ತಕಗಳ ಪೈಕಿ ಒಂದೇ ಹಾಜರಿ ಪುಸ್ತಕದಲ್ಲಿ ಮಾತ್ರ ಸಹಿ ಇದೆ ಎಂದೂ ಅವರು ದಾಖಲೆಗಳ ಸಮೇತ ದೂರುತ್ತಾರೆ.ಇನ್ನು, ಕಾಲೇಜಿನ ವಿದ್ಯಾರ್ಥಿಗಳ ಹೇಳಿಕೆ ಪ್ರಕಾರ ಗಣಕಶಾಸ್ತ್ರ ವಿಷಯದ ಉಪನ್ಯಾಸಕ ಶರಣಪ್ಪ ಹೂಗಾರ ನೇಮಕಗೊಂಡಾಗಿನಿಂದ ಕಾಲೇಜಿಗೆ ಬಂದಿಲ್ಲ. ಆದರೆ, ನಿಗದಿತ ವಿದ್ಯಾರ್ಹತೆ ಹೊಂದಿರದ ನಳಿನಿ ಎಂಬುವವರು ಈ ವಿಷಯ ಬೋಧನೆ ಮಾಡುತ್ತಿದ್ದಾರೆ. ಈ ವಿಷಯವನ್ನು ಹೆಸರು ಹೇಳಲು ಬಯಸದ ಅದೇ ಕಾಲೇಜಿನ ಇತರ ಸಿಬ್ಬಂದಿ ಒಪ್ಪಿಕೊಳ್ಳುತ್ತಾರೆ ಎಂದೂ ಗುರುರಾಜ ದೇಸಾಯಿ ದೂರಿದ್ದಾರೆ.ಈ ವಿಷಯ ಕುರಿತು ಸಮಗ್ರ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಸಂಘಟನೆ ಉಗ್ರ ಹೋರಾಟ ಮಾಡಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.