ನಕ್ಷತ್ರಗಳ ಪಲಾಯನ

7

ನಕ್ಷತ್ರಗಳ ಪಲಾಯನ

Published:
Updated:
ನಕ್ಷತ್ರಗಳ ಪಲಾಯನ

ಪಲಾಯನ ಎಂದರೆ ಓಡಿಹೋಗುವುದು ಎಂದು ಹೇಳಿಬಿಡಬಹುದಾದರೂ ಇರಬೇಕಾದ ಜಾಗದಲ್ಲಿ ಕಾಣಿಸಿಕೊಳ್ಳದೇ ಬೇರೆಲ್ಲೋ ಇರುವುದು ಎಂದೂ ವಿಶ್ಲೇಸಬಹುದು.

 

ಈ ಅರ್ಥದಲ್ಲಿ ಕೆಲವೊಂದು ನಕ್ಷತ್ರಗಳು ವಿಶೇಷ ಗಮನ ಸೆಳೆಯುತ್ತವೆ. ಸಾಮಾನ್ಯವಾಗಿ ಎಲ್ಲ ನಕ್ಷತ್ರಗಳೂ ಆಕಾಶಗಂಗೆಯ ತಟ್ಟೆಯಂತಹ ಭಾಗದಲ್ಲಿಯೇ ಕಾಣಿಸಿಕೊಳ್ಳುತ್ತವೆ. ಭೂಮಿಗೆ ಹೋಲಿಸುವುದಾದರೆ ಇವೆಲ್ಲವೂ ಸಮಭಾಜಕ ವೃತ್ತದ ಆಸುಪಾಸಿನಲ್ಲಿ ಅಂದರೆ 5-10 ಡಿಗ್ರಿ ಅಕ್ಷಾಂಶದಲ್ಲಿ ಇರುತ್ತವೆ ಎನ್ನಬಹುದು. ಇದೇ ರೀತಿ ಗೆಲಾಕ್ಸಿಗೂ ಅಕ್ಷಾಂಶವನ್ನು ನಿಗದಿ ಪಡಿಸಬಹುದು.ಅಂದರೆ ಎಲ್ಲ ನಕ್ಷತ್ರಗಳ ಗೆಲಕ್ಟಿಕ್ ಅಕ್ಷಾಂಶ ಬಹಳ ಕಡಿಮೆ. ಯಾವುದಾದರೂ ಒಂದು ನಕ್ಷತ್ರದ ಅಕ್ಷಾಂಶ ಹೆಚ್ಚಿದ್ದರೆ ಅದಕ್ಕೊಂದು ವಿಶೇಷ ಕಾರಣವಿರಬೇಕು ಎನ್ನಬಹುದು. ಅಂತಹವುಗಳನ್ನು ಹೈ ಗೆಲಕ್ಟಿಕ್ ಲ್ಯಾಟಿಟ್ಯೂಡ್ ನಕ್ಷತ್ರಗಳು ಎಂದೇ ಗುರುತಿಸುತ್ತಾರೆ.

 

ಇಂತಹ ಒಂದು ನಕ್ಷತ್ರ ಆರಿಗಾ (ವಿಜಯಸಾರಥಿ) ಪುಂಜದಲ್ಲಿದೆ. ಇದನ್ನು ಎಇ ಆರಿಗಾ ಎಂದು ಚಂಚಲ ನಕ್ಷತ್ರಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ. ಅತಿ ಹೆಚ್ಚು ಉಷ್ಣತೆಯ (ಸುಮಾರು 30000) ನೇರಿಳೆ ಬಣ್ಣದ ನಕ್ಷತ್ರ ಇದು.ಸುಮಾರು 1460 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದ್ದರೂ ಬರಿಗಣ್ಣಿಗೆ ಕಾಣುವಷ್ಟು ಪ್ರಕಾಶಮಾನವಾದದ್ದು. ಇನ್ನೊಂದು ನಕ್ಷತ್ರ ಕೊಲಂಬಾ (ಕಪೋತ ಎಂದು ಹಿರಿಯ ವಿಜ್ಞಾನಿಯಾದ ದಿವಂಗತ ಆರ್ ಎಲ್ ನರಸಿಂಹಯ್ಯನವರು ಅನುವಾದಿಸಿದ್ದಾರೆ) ಎಂಬ ಪುಂಜದಲ್ಲಿ ದಕ್ಷಿಣ ಆಕಾಶದಲ್ಲಿದೆ. ಪ್ರಕಾಶದ ಅನುಕ್ರಮಣಿಕೆಯಲ್ಲಿ ಇದಕ್ಕೆ ಮ್ಯೂ ಎಂಬ ಗ್ರೀಕ್ ಅಕ್ಷರ ಸೇರಿ ಮ್ಯೂ ಕೊಲಂಬಾ ಎಂಬ ಹೆಸರಿದೆ. ಇದೂ ಕೂಡ ನೇರಿಳೆ ಬಣ್ಣದ್ದು 1300 ಜ್ಯೋತಿರ್ವರ್ಷ ದೂರದಲ್ಲಿದೆ.ಮೂರನೆಯದೊಂದು ನೇರಿಳೆ ನಕ್ಷತ್ರ ಮೇಷ ರಾಶಿಯಲ್ಲಿದೆ. ಅದು ಚಂಚಲ ನಕ್ಷತ್ರಗಳ ಪಟ್ಟಿಯಲ್ಲಿ 53 ಏರೀಸ್ ಎಂಬ ಹೆಸರು ಪಡೆದಿದೆ. ಈ ಮೂರೂ ನಕ್ಷತ್ರಗಳ ಆಕಾಶದ ಬೇರೆ ಬೇರೆ ದಿಕ್ಕಿನಲ್ಲಿದ್ದರೂ ಅವುಗಳ ವೇಗದ ವೈಶಿಷ್ಟ್ಯದ ಕಾರಣ ಅಧ್ಯಯನಕ್ಕೆ ಒಳಪಟ್ಟಿವೆ. ರೋಹಿತಗಳಿಂದ ಅವುಗಳ ವೇಗವನ್ನು ಅಳತೆ ಮಾಡಬಹುದು.  ನಮ್ಮ  ದೃಷ್ಟಿ ರೇಖೆಯ ದಿಕ್ಕಿನ ವೇಗವನ್ನು ಅಂದರೆ ಅದು ನಮ್ಮತ್ತ ಬರುತ್ತಿದೆಯೇ ಅಥವಾ ದೂರ ಸರಿಯುತ್ತಿದೆಯೇ ಎಂಬುದನ್ನು ಡಾಪ್ಲರ್ ಪರಿಣಾಮ ತಿಳಿಸಿಕೊಡುತ್ತದೆ. ಅದರ ಲಂಬ ದಿಕ್ಕಿನ ವೇಗವನ್ನು 50-60 ವರ್ಷಗಳ ಅಂತರದಲ್ಲಿ ತೆಗೆದ ಚಿತ್ರಗಳನ್ನು ಪರಿಶೀಲಿಸಿ ಲೆಕ್ಕಹಾಕಬಹುದು.ಈ ಎರಡೂ ಪರಸ್ಪರ ಲಂಬ ದಿಕ್ಕಿನ ವೇಗಗಳನ್ನೂ, ನಕ್ಷತ್ರದ ದೂರವನ್ನೂ ತಿಳಿದು ಅವು ಮಿಲಿಯನ್ ವರ್ಷಗಳ ಹಿಂದೆ ಎಲ್ಲಿದ್ದವು ಎಂದು ಲೆಕ್ಕ ಮಾಡಬಹುದು.ಆಕಾಶಗಂಗೆಯ ತಟ್ಟೆಯಲ್ಲಿರಬೇಕಾಗಿದ್ದ ಇವು ದೂರ ಓಡಿ ಹೋಗಿವೆ ಎಂದು ಈ ಬಗೆಯ ಲೆಕ್ಕದಿಂದ ತಿಳಿಯಬಹುದು. ಹೀಗೆ ಈ ಮೂರೂ ನಕ್ಷತ್ರಗಳ ಮಾಹಿತಿಯನ್ನು ಕೋಢೀಕರಿಸಿದಾಗ ಆಶ್ಚರ್ಯಕರ ವಿಷಯ ಹೊರಬಿದ್ದಿತು.

 

ಇವೆಲ್ಲವೂ ಹಲವು ದಶಲಕ್ಷ ವರ್ಷಗಳ ಹಿಂದೆ ಒರೈಯನ್ ನೆಬ್ಯುಲಾದ ಸಮೀಪವೇ ಇದ್ದವು. ಹಾಗಾದರೆ ಓಡಿ ಹೋದದ್ದೇಕೆ? ಇದಕ್ಕೆ ಎರಡು ಉತ್ತರಗಳಿವೆ. ಯಮಳ ನಕ್ಷತ್ರಗಳ ಗುಂಪೊಂದು ಪರಸ್ಪರ ಗುರುತ್ವ ಪ್ರಭಾವದ ಕಾರಣ ಸಂಘರ್ಷಕ್ಕೆ ಒಳಗಾಗಿರಬಹುದು.ಆಗ ಆ ಗುಂಪಿನ ಕೆಲವು ನಕ್ಷತ್ರಗಳು ದೂರಕ್ಕೆ ಧಾವಿಸಿರಬಹುದು. ಇನ್ನೊಂದು ಸಿದ್ಧಾಂತದ ಪ್ರಕಾರ ದಟ್ಟವಾದ ಮೋಡಗಳಲ್ಲಿ ಅತಿ ಹೆಚ್ಚು ದ್ರವ್ಯರಾಶಿಯ ನಕ್ಷತ್ರಗಳು ರಚಿತವಾದವು. ಅವುಗಳಲ್ಲಿ ಕೆಲವು ಯಮಳಗಳು. ಕೆಲವೇ ದಶಲಕ್ಷ ವರ್ಷಗಳಲ್ಲಿ ಇವು ಸೂಪರ್ ನೋವಾ ಆಗಿ ಅವಸಾನ ಹೊಂದಿದವು. ಅವುಗಳ ಸಂಗಾತಿಗಳು ಸಿಡಿತದ ಸಂದರ್ಭದಲ್ಲಿ ಹೊರಕ್ಕೆ ಎಸೆಯಲ್ಪಟ್ಟವು.

 

ಹಾಗಾಗಿ ಅವು ಗೆಲಾಕ್ಸಿಯ ತಟ್ಟೆಯ ತಲದಿಂದ ಬಹಳ ಎತ್ತರಕ್ಕೆ ಚಿಮ್ಮಿದವು. ಈ ಎರಡನೆಯ ಸಿದ್ಧಾಂತ ಈಗ ಮನ್ನಣೆ ಪಡೆಯುತ್ತಿದೆ. ಏಕೆಂದರೆ ಈ ಮೂರೂ ಉದಾಹರಣೆಗಳಲ್ಲಿ ನಕ್ಷತ್ರದ ವೇಗ ಹೆಚ್ಚು  - ಸೆಕೆಂಡಿಗೆ ಸುಮಾರು 100 ಕಿಮೀ. (ಸೂರ್ಯನದ್ದು ಕೇವಲ 20 ಕಿಮೀ ಎಂದು ನೆನಪು ಮಾಡಿಕೊಳ್ಳಿ).ಒರೈಯನ್ ನಕ್ಷತ್ರಪುಂಜದಲ್ಲಿ ಕಾಣುವ ಕಮಾನಿನ ಆಕಾರದ ರಚನೆಯೊಂದು (ಇದಕ್ಕೆ ಬರ್ನಾರ್ಡ್ ಲೂಪ್ ಎಂಬ ಹೆಸರಿದೆ; ಹಿಂದೆ ನೀಹಾರಿಕಾ ಲೋಕದಲ್ಲಿ ಇದರ ವಿವರಣೆ ಕೊಟ್ಟಿದ್ದೆ) ಸೂಪರ್ ನೋವಾದ ಸಿಡಿತವನ್ನು ಸೂಚಿಸುತ್ತಿದೆ. ಅದೇ ಸಿಡಿತವೇ ಈ ಮೂರೂ ನಕ್ಷತ್ರಗಳ ಪಲಾಯನಕ್ಕೆ ಕಾರಣ.ಇದೀಗ ಹಬಲ್ ದೂರದರ್ಶಕ ಇಂತಹ ಹದಿನಾಲ್ಕು ಪಲಾಯನ ನಕ್ಷತ್ರಗಳನ್ನು ಗುರುತಿಸಿದೆ. ಅವು ತಮ್ಮ ದಾರಿಯುದ್ದಕ್ಕೂ ಸುಳಿವನ್ನು ಬಿಟ್ಟು ಹೋಗಿವೆ. ಅವುಗಳ ಮೂಲ ಸೂಪರ್ ನೋವಾ ಯಾವುದು? ಈ ಹುಡುಕಾಟ ಈಗ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry