ನಕ್ಷತ್ರ ವೈವಿಧ್ಯ

7

ನಕ್ಷತ್ರ ವೈವಿಧ್ಯ

Published:
Updated:
ನಕ್ಷತ್ರ ವೈವಿಧ್ಯ

ಗೆಳೆಯರೇ, ವಿಶ್ವದಲ್ಲಿನ ಪ್ರಧಾನ ಕಾಯಗಳು ನಕ್ಷತ್ರಗಳೇ ಹೌದಲ್ಲ? ವಿಶ್ವದಲ್ಲಿನ ಒಟ್ಟು ದ್ರವ್ಯದ ಬಹುಭಾಗವೆಲ್ಲ ನಕ್ಷತ್ರಗಳ ರೂಪದಲ್ಲೇ ಸಂಗ್ರಹ; ಆದ್ದರಿಂದಲೇ ಇರುಳಿನಾಗಸದಲ್ಲಿ ಬರಿಗಣ್ಣಿಗೆ ಅಷ್ಟೊಂದು ತಾರೆಗಳು ಗೋಚರ; ಅಸಂಖ್ಯ ಎನಿಸುವಂತೆ ಅವುಗಳ ಚಿತ್ರ - ಚಿತ್ತಾರ.ವಾಸ್ತವವಾಗಿಯೂ ನಕ್ಷತ್ರಗಳದು ಅಸಂಖ್ಯವೇ ಎನಿಸುವ, ಕಲ್ಪನೆಗೂ ನಿಲುಕದ ಭಾರೀ ಸಂಖ್ಯೆ ವೈಜ್ಞಾನಿಕ ಗಣತಿಯ ಪ್ರಕಾರ ವಿಶ್ವದಲ್ಲಿರುವ ನಕ್ಷತ್ರಗಳ ಒಟ್ಟು ಸಂಖ್ಯೆ ಒಂದು ನೂರು ಕೋಟಿ ಕೋಟಿ ಕೋಟಿ ಕೋಟಿ! (1ರ ಮುಂದೆ 30 ಸೊನ್ನೆಗಳನ್ನು ಬರೆವಾಗ ಬರುವ ಸಂಖ್ಯೆ!) ಇಷ್ಟೂ ನಕ್ಷತ್ರಗಳೂ ವಿಶ್ವದಲ್ಲಿ ಸಮರೂಪದಲ್ಲೇನೂ ಹರಡಿಲ್ಲ.ಅವು `ಗ್ಯಾಲಕ್ಸಿ~ಗಳೆಂಬ (ಚಿತ್ರ - 1, 2) ಬೃಹತ್ ನಕ್ಷತ್ರ ಮಂಡಲಗಳಲ್ಲಿ ಸಾವಿರಾರು ಕೋಟಿ ಸಂಖ್ಯೆಗಳಲ್ಲಿ ಗುಂಪು ಗುಂಪಾಗಿವೆ. ನಕ್ಷತ್ರಗಳೆಲ್ಲ ಒಟ್ಟಾಗಿ ಜನಿಸಿಲ್ಲ; ಅವುಗಳು ಶಾಶ್ವತವೂ ಅಲ್ಲ; ಅವು ಸಮಾನ ಆಯುಷ್ಯವನ್ನೂ ಪಡೆದಿಲ್ಲ. ದ್ರವ್ಯರಾಶಿಯಲ್ಲಿ, ಗಾತ್ರದಲ್ಲಿ, ಮೇಲ್ಮೈ ಉಷ್ಣತೆಯಲ್ಲಿ, ಬಾಹ್ಯ ವರ್ಣದಲ್ಲಿ, ಕಾಂತಿಯಲ್ಲಿ, ಒಂದಕ್ಕೊಂದು ಇರುವ ದೂರಗಳಲ್ಲಿ ... ಹಾಗೆ ನಕ್ಷತ್ರಗಳಲ್ಲಿ ತುಂಬ ಭಿನ್ನತೆ ಇದೆ.ಅವೇನೇ ಇರಲಿ ಎಲ್ಲ ತಾರೆಗಳ ಜನನ ವಿಧಾನ ಮಾತ್ರ ಒಂದೇ. ಅನಿಲಗಳು ಮತ್ತು ಧೂಳಿನ ಕಣಗಳ ಮಹಾನ್ ರಾಶಿಗಳು ಒಟ್ಟುಗೂಡಿ (ಚಿತ್ರ - 3) ಸ್ವಗುರುತ್ವದಿಂದ ಕುಗ್ಗಿ ಸಾಂದ್ರವಾದಾಗ ತಾರೆಗಳು ಮೈದಳೆಯುತ್ತವೆ. ಅವುಗಳ ಗರ್ಭದಲ್ಲಿ ಉಷ್ಣ ಬೈಜಿಕ ಕ್ರಿಯೆಗಳು ಆರಂಭಗೊಂಡನಂತರ ಅವು ಕಾಂತಿಯನ್ನುಗುಳಿ ಹೊಳೆಯತೊಡಗುತ್ತವೆ (ಚಿತ್ರ - 4).ನಕ್ಷತ್ರಗಳ ವೈವಿಧ್ಯಕ್ಕೆ ಮೂಲ ಕಾರಣ ಅವುಗಳ ಭಿನ್ನ ಭಿನ್ನ ಪ್ರಮಾಣದ ದ್ರವ್ಯ ರಾಶಿ. ತಾರೆಗಳ ಆರಂಭಿಕ ದ್ರವ್ಯರಾಶಿಯನ್ನಾಧರಿಸಿ ಅವುಗಳನ್ನು ಎರಡು ಪ್ರಧಾನ ವಿಧಗಳನ್ನಾಗಿ ವರ್ಗೀಕರಿಸಲಾಗಿದೆ: `ಕುಬ್ಜರು ಮತ್ತು ದೈತ್ಯರು~ ನಮ್ಮ ಸೂರ್ಯನ ದ್ರವ್ಯರಾಶಿಯ (ಅದು ಇನ್ನೂರು ಕೋಟಿ ಕೋಟಿ ಕೋಟಿ ಕೋಟಿ ಕಿ.ಗ್ರಾಂ. ಎಂದರೆ 2/1030 ಕಿ.ಗ್ರಾಂ) ಒಂದೂವರೆ ಪಟ್ಟು ದ್ರವ್ಯರಾಶಿಗಿಂತ ಕಡಿಮೆ ದ್ರವ್ಯರಾಶಿಯೊಡನೆ ಜನ್ಮ ತಳೆವ ತಾರೆಗಳೆಲ್ಲ ಕುಬ್ಜರು. ಅದಕ್ಕಿಂತ ಅಧಿಕ ದ್ರವ್ಯರಾಶಿಯ ತಾರೆಗಳೆಲ್ಲ ದೈತ್ಯರು.ಇಲ್ಲೊಂದು ಮುಖ್ಯ ವಿಷಯ: ಕುಬ್ಜ ತಾರೆಗಳ ಕನಿಷ್ಠ ದ್ರವ್ಯರಾಶಿ ನಮ್ಮ ಸೂರ್ಯನ ದ್ರವ್ಯರಾಶಿಯ ಇಪ್ಪತ್ತರ ಒಂದಂಶದಷ್ಟಾದರೂ ಇರಲೇಬೇಕು. ಅದಕ್ಕಿಂತ ಕಡಿಮೆ ದ್ರವ್ಯದಾಸ್ತಾನಿನೊಡನೆ ಜನಿಸುವ ಅನಿಲ ಕಾಯಗಳ ಆಂತರ್ಯದಲ್ಲಿ ಉಷ್ಣ ಬೈಜಿಕ ಕ್ರಿಯೆ ನಡೆವುದು ಸಾಧ್ಯವಿಲ್ಲ.

 

ನಮ್ಮ ಗುರುಗ್ರಹಕ್ಕಿಂತ ಹೆಚ್ಚಿನದಾದ ಆದರೆ ಸೂರ್ಯನ ಇಪ್ಪತ್ತರ ಒಂದಂಶಕ್ಕಿಂತ ಕಡಿಮೆ ದ್ರವ್ಯರಾಶಿಯ ಅಂಥ ಕಾಯಗಳು `ಹಾಟ್ ಜ್ಯೂಪಿಟರ್ಸ್‌ (ಬಿಸಿ ಗುರು)~ ಅಥವಾ `ಕಂದು ಕುಬ್ಜ~ ರೆಂದೇ ಪ್ರಸಿದ್ಧ. ಬರೀ ಬಿಸಿಯ ಕಾಂತಿ ರಹಿತ ಕಾಯಗಳು ಅವು.

ಕುಬ್ಜ ನಕ್ಷತ್ರಗಳಲ್ಲೇ ಎರಡು ವಿಧಗಳಿವೆ: `ಕೆಂಪು ಕುಬ್ಜ ಮತ್ತು ಹಳದಿ ಕುಬ್ಜ~ ನಮ್ಮ ಸೂರ್ಯನಿಗಿಂತ ಕಡಿಮೆ ದ್ರವ್ಯರಾಶಿಯ ನಕ್ಷತ್ರಗಳೆಲ್ಲ ಕೆಂಪು ಕುಬ್ಜರು.ಅವುಗಳ ಮೇಲ್ಮೈ ಉಷ್ಣತೆ ತುಂಬ ಕಡಿಮೆ ಹಾಗಾಗಿ ಅವುಗಳದು ಕೆಂಪು ಬಣ್ಣ; ಬಹು ಮಂದ ಕಾಂತಿ. ನಮ್ಮ ಸೂರ್ಯ ಮತ್ತು ಅದಕ್ಕಿಂತ ಹೆಚ್ಚಿನ ದ್ರವ್ಯರಾಶಿಯ ಕುಬ್ಜ ತಾರೆಗಳೆಲ್ಲ ಹಳದಿ ಕುಬ್ಜರು. ಇಂಥ ನಕ್ಷತ್ರಗಳದೆಲ್ಲ ಬಿಳಿ - ಹಳದಿ ವರ್ಣ, ಸೂರ್ಯ - ಸದೃಶ ಕಾಂತಿ. ನಮ್ಮ ಸೂರ್ಯ `ಹಳದಿ ಕುಬ್ಜ~ ಎಂಬುದು ಸ್ಪಷ್ಟ ತಾನೇ?ದೈತ್ಯ ನಕ್ಷತ್ರಗಳದೆಲ್ಲ ಕುಬ್ಜರಿಗಿಂತ ಅಧಿಕ ಗಾತ್ರ; ವಿಪರೀತ ಅಧಿಕ ಮೇಲ್ಮೈ ಉಷ್ಣತೆ. ಹಾಗಾಗಿ ಅವು ನೀಲ ವರ್ಣದ, ಉಜ್ವಲ ಕಾಂತಿಯ ತಾರೆಗಳು. ಹೀಗೆ ಕುಬ್ಜ ಮತ್ತು ದೈತ್ಯ ನಕ್ಷತ್ರಗಳ ಮೇಲ್ಮೈ ಉಷ್ಣತೆ ವ್ಯಾಪ್ತಿಗಳನ್ನೂ ಬಣ್ಣಗಳನ್ನೂ ಆಧರಿಸಿ ಸ್ಥಿರ ಸ್ಥಿತಿಯಲ್ಲಿ ಯುವ ಹಂತದಲ್ಲಿರುವ ನಕ್ಷತ್ರಗಳಲ್ಲೇ ಸಪ್ತ ವಿಧಗಳನ್ನು ಗುರುತಿಸಲಾಗಿದೆ: `ಒ, ಬಿ, ಎ, ಎಫ್, ಜಿ, ಕೆ ಮತ್ತು ಎಂ~ ಈ ಪೈಕಿ ಮೊದಲ ನಾಲ್ಕು ದೈತ್ಯರ ವರ್ಗ. ಇನ್ನು ಮೂರೂ ಕುಬ್ಜರು. ನಿರಭ್ರ ರಾತ್ರಿಯಾಗಸವನ್ನು ಸೂಕ್ಷ್ಮವಾಗಿ ಗಮನಿಸಿದರೆ ಭಿನ್ನ ಭಿನ್ನ ವರ್ಣಗಳ ಇಂಥ ಕುಬ್ಜರನ್ನೂ ದೈತ್ಯರನ್ನೂ ಕಾಣಬಹುದು (ಚಿತ್ರ - 5).ಆರಂಭಿಕ ದ್ರವ್ಯರಾಶಿಯನ್ನಾಧರಿಸಿದ ನಕ್ಷತ್ರ ವೈವಿಧ್ಯದಿಂದ ಸಂಪೂರ್ಣ ಭಿನ್ನವಾಗಿ ತಮ್ಮ ಬದುಕಿನ ವಿವಿಧ ಹಂತಗಳಲ್ಲೂ ತಾರೆಗಳು ವಿಧ ವಿಧ ಸ್ವರೂಪಗಳನ್ನು ತಾಳುತ್ತವೆ. ಅದೇ ಬೇರೊಂದು ಬಗೆಯ ಬಹು ಸೋಜಿಗದ ನಕ್ಷತ್ರ ವೈವಿಧ್ಯ. `ಶ್ವೇತ ಕುಬ್ಜ~, ನ್ಯೂಟ್ರಾನ್ ತಾರೆ, ಕಪ್ಪು ರಂಧ್ರ ಇತ್ಯಾದಿ ವಿಧಗಳು ಅವು.* ನಮ್ಮ ಸೂರ್ಯನ ಸುಮಾರು ಒಂದೂವರೆ ಮಡಿಗಿಂತ ಕಡಿಮೆ ದ್ರವ್ಯರಾಶಿಯ ಎಲ್ಲ ನಕ್ಷತ್ರಗಳು ಅವುಗಳ ಬಾಳಿನ ಅಂತ್ಯದಲ್ಲಿ ಭಾರೀ ಗಾತ್ರಕ್ಕೆ ಉಬ್ಬಿ, ಕೆಂಬಣ್ಣ ತಳೆದು `ಕೆಂಪು ದೈತ್ಯ~ ರಾಗುತ್ತವೆ. ನಂತರ ತಮ್ಮ ಹೊಸಪದರಗಳನ್ನೆಲ್ಲ ಕಳಚಿ ಹಾಕುತ್ತವೆ.ಅಂಥ ನಕ್ಷತ್ರಗಳ ಗರ್ಭದ ಅತ್ಯಂತ ಸಾಂದ್ರವಾದ ಕುಬ್ಜಗಾತ್ರದ ದ್ರವ್ಯ ಬೆಳ್ಳನ್ನ ಉಜ್ವಲ ಕಾಂತಿಯಿಂದ ಹೊಳೆಯ ತೊಡಗುತ್ತದೆ. ಅಂಥ ತಾರಾ ಅವಶೇಷವೇ `ಶ್ವೇತ ಕುಬ್ಜ~ (ಚಿತ್ರ 9, 10, 11 ನೋಡಿ) ಶ್ವೇತ ಕುಬ್ಜಗಳ ವ್ಯಾಸ ಸುಮಾರು ಭೂ ವ್ಯಾಸದಷ್ಟಿದ್ದು ಅದರ ದ್ರವ್ಯದ ಪ್ರತಿ ಘನ ಸೆಂಮೀ ಒಂದು ಟನ್ ತೂಗುತ್ತದೆ!* ಸೂರ್ಯನ ಒಂದೂವರೆ ಮಡಿಗಿಂತ ಅಧಿಕ ದ್ರವ್ಯರಾಶಿಯ ನಕ್ಷತ್ರಗಳು ತಮ್ಮ ಜೀವಿತದ ಕೊನೆಗೆ ಮೂಲಗಾತ್ರದ ಹಲವು ನೂರು ಪಟ್ಟು ಉಬ್ಬಿ `ಕೆಂಪು ಸೂಪರ್ ದೈತ್ಯ~ ರಾಗುತ್ತವೆ. ನಂತರ ಭೀಕವಾಗಿ ಸ್ಫೋಟಿಸುತ್ತವೆ. ಆಗ ಉಳಿವ ಅತ್ಯಂತ ಸಾಂದ್ರ ಅವಶೇಷವಿಡೀ ಬರೀ `ನ್ಯೂಟ್ರಾನ್~ ಗಳಿಂದಲೇ ಕೂಡಿರುತ್ತದಾದ್ದರಿಂದ ಅದು `ನ್ಯೂಟ್ರಾನ್ ತಾರೆ~ ಎಂದೇ ಪ್ರಸಿದ್ಧ (ಚಿತ್ರ - 12) ಕೆಲ ನ್ಯೂಟ್ರಾನ್ ತಾರೆಗಳು ಗಿರಿ ಗಿರಿ ಸುತ್ತುತ್ತ ರೇಡಿಯೋ ಅಲೆಗಳ ಲಯಬದ್ಧ ಮಿಡಿತಗಳನ್ನು ನಿರಂತರ ಹೊಮ್ಮಿಸುತ್ತವೆ (ಚಿತ್ರ - 6) ಅವೇ `ಪಲ್ಸಾರ್~ಗಳು. ನ್ಯೂಟ್ರಾನ್ ತಾರೆಗಳದು ಎಂಥ ಕಲ್ಪನಾತೀತ ಸಾಂದ್ರತೆಯೆಂದರೆ ಒಂದು ಟೀ ಚಮಚೆಯಲ್ಲಿ ಹಿಡಿಯುವಷ್ಟೇ ಅದರ ದ್ರವ್ಯ ಒಂದು ನೂರು ದಶಲಕ್ಷ ಟನ್ ತೂಗುತ್ತದೆ!* ಸೂರ್ಯನ ಹತ್ತಾರು ನೂರು ಪಟ್ಟು ಆರಂಭಿಕ ದ್ರವ್ಯರಾಶಿಯ ಮಹಾನ್ ದೈತ್ಯ ತಾರೆಗಳು ಸೂಪರ್ ನೋವಾಗಳಾಗಿ ಸ್ಫೋಟಿಸಿದ ನಂತರ ಉಳಿಯುವ ಅವುಗಳ ಅವಶೇಷ ನ್ಯೂಟ್ರಾನ್ ತಾರೆಗಳಿಗಿಂತ ಅಧಿಕ ಸಾಂದ್ರತೆಯ `ಹಿಡಿ ಗಾತ್ರ~ದ ಕಾಯವಾಗುತ್ತದೆ. ಇಡೀ ಭೂಮಿಯನ್ನು ಒಂದೇ ಸೆಂಟಿಮೀಟರ್ ವ್ಯಾಸಕ್ಕೆ ಕುಗ್ಗಿಸಿದಂಥ ಪರಮ ಸಾಂದ್ರತೆಯ, ಪರಮ ಗುರುತ್ವದ ಇಂಥ ಕಾಯ ತನ್ನದೇ ಬೆಳಕನ್ನೂ ಹೊರ ಹೊಮ್ಮ ಬಿಡುವುದಿಲ್ಲ. ನಕ್ಷತ್ರದ ಈ ವಿಧವೇ `ಕಪ್ಪು ರಂಧ್ರ~.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry