ನಕ್ಸಲರಿಂದ ಡಿ.ಸಿ. ಅಪಹರಣ

7

ನಕ್ಸಲರಿಂದ ಡಿ.ಸಿ. ಅಪಹರಣ

Published:
Updated:

ಮಾಲ್ಕನ್‌ಗಿರಿ (ಒಡಿಶಾ) (ಪಿಟಿಐ): ಒಡಿಶಾದ ನಕ್ಸಲ್ ಪೀಡಿತ ಮಾಲ್ಕನ್‌ಗಿರಿ ಜಿಲ್ಲೆಯ ಜಿಲ್ಲಾಧಿಕಾರಿ ಆರ್. ವಿ. ಕೃಷ್ಣ ಅವರನ್ನು ನಕ್ಸಲರು ಬುಧವಾರ ಸಂಜೆ ಚಿತ್ರಕೊಂಡ ಪ್ರದೇಶದಲ್ಲಿ ಅಪಹರಿಸಿದ್ದು, ರಾಷ್ಟ್ರದೆಲ್ಲೆಡೆ ಆತಂಕ ಮೂಡಿದೆ. ಜಿಲ್ಲಾಧಿಕಾರಿಯನ್ನು ಹಿಡಿದಿಟ್ಟಿರುವ ಸ್ಥಳದ ಬಗ್ಗೆ ಮಾಹಿತಿ ಸಿಗದಿದ್ದರೂ, ಅವರನ್ನು  ಬಿಡಿಸಿಕೊಳ್ಳಲು ತೀವ್ರ ಯತ್ನ ಆರಂಭವಾಗಿದೆ.ಬುಡಕಟ್ಟು ಮತ್ತು ಗುಡ್ಡಗಾಡು ಜನರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದ ಯುವ ಉತ್ಸಾಹಿ ಐಎಎಸ್ ಅಧಿಕಾರಿ ಆರ್. ವೀನೆಲ್ ಕೃಷ್ಣ (30) ಅವರು ಇಲ್ಲಿಂದ 85 ಕಿ.ಮೀ. ದೂರದಲ್ಲಿ ಆಂಧ್ರ ಪ್ರದೇಶದ ಗಡಿ ಭಾಗದಲ್ಲಿರುವ ಬಾಡಪಾದದಲ್ಲಿ ನಡೆದ ಸ್ಥಳೀಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಅಲ್ಲಿಂದ ಅವರು ರಸ್ತೆಯೊಂದಕ್ಕೆ ನಿರ್ಮಿಸಿದ ಕಾಲುವೆಯೊಂದನ್ನು ನೋಡಲು ಇಬ್ಬರು ಕಿರಿಯ ಎಂಜಿನಿಯರ್‌ಗಳು ಮತ್ತು ಇನ್ನೊಬ್ಬ ವ್ಯಕ್ತಿಯೊಂದಿಗೆ ಬೈಕ್‌ನಲ್ಲಿ ತೆರಳಿದ್ದರು. ಜಿಲ್ಲಾಧಿಕಾರಿ ಮತ್ತು ಕಿರಿಯ ಎಂಜಿನಿಯರ್ ಬಿಟ್ಟು ಇತರ ಇಬ್ಬರು ಪತ್ರದೊಂದಿಗೆ ರಾತ್ರಿ ಬಾಡಪಾದಕ್ಕೆ ಹಿಂದಿರುಗಿದರು. ಇದರಿಂದ ಜಿಲ್ಲಾಧಿಕಾರಿ ಅಪಹರಣವಾಗಿರುವುದು ಗೊತ್ತಾಯಿತು ಎಂದು ಚಿತ್ರಕೊಂಡ ತಹಶೀಲ್ದಾರ್ ಡಿ. ಗೋಪಾಲಕೃಷ್ಣನ್ ತಿಳಿಸಿದ್ದಾರೆ.ನಕ್ಸಲರು ತಮ್ಮ ಬೇಡಿಕೆಯನ್ನು ಸ್ವತಃ ಜಿಲ್ಲಾಧಿಕಾರಿ ಕೈಯಲ್ಲೇ ಬರೆಸಿ ಕಳುಹಿಸಿಕೊಟ್ಟಿದ್ದಾರೆ. ಜಿಲ್ಲೆಯಿಂದ ಕೇಂದ್ರೀಯ ಪಡೆಗಳನ್ನು ಹಿಂದಕ್ಕೆ ಕರೆಸಬೇಕು, ನಕ್ಸಲರ ವಿರುದ್ಧದ ಕಾರ್ಯಾಚರಣೆ ಸ್ಥಗಿತಗೊಳಿಸಬೇಕು ಮತ್ತು ಬಂಧಿತ ನಕ್ಸಲರನ್ನು ಬಿಡುಗಡೆಗೊಳಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ. ಇವುಗಳ ಈಡೇರಿಕೆಗಾಗಿ ಅವರು ಎರಡು ದಿನಗಳ ಗಡುವು ನೀಡಿದ್ದಾರೆ.ಆರು ಮಂದಿ ನಕ್ಸಲರು ಈ ಅಪಹರಣ ನಡೆಸಿರಬೇಕು ಎಂದು ಶಂಕಿಸಲಾಗಿದೆ. ಹೈದರಾಬಾದ್‌ನ ಉಪನಗರ ಚಂದ್ರ ನಗರ್ ಮೂಲದವರಾದ ಕೃಷ್ಣ ಅವರು ಮದ್ರಾಸ್ ಐಐಟಿ ಪದವೀಧರರು. ಅವರು 2005ರಲ್ಲಿ ಭಾರತ ಆಡಳಿತ ಸೇವೆ ಸೇರಿದ್ದಾರೆ. 16 ತಿಂಗಳ ಹಿಂದೆಯಷ್ಟೇ ಅವರು ಮಲ್ಕನ್‌ಗಿರಿಗೆ ಜಿಲ್ಲಾಧಿಕಾರಿಯಾಗಿ ನಿಯುಕ್ತರಾಗಿದ್ದರು.  ಅವರ ಜತೆಗೆ ಅಪಹೃತರಾದ ಕಿರಿಯ ಎಂಜಿನಿಯರ್ ಅವರನ್ನು ಪವಿತ್ರ ಮೋಹನ್ ಮಝಿ ಎಂದು ಗುರುತಿಸಲಾಗಿದೆ. ಭುವನೇಶ್ವರದವರಾದ ಅವರು ನಾಲ್ಕು ತಿಂಗಳ ಹಿಂದೆಯಷ್ಟೇ ಕಿರಿಯ ಎಂಜಿನಿಯರ್ ಆಗಿ ನಿಯುಕ್ತರಾದ್ದರು.ಜಿಲ್ಲಾಧಿಕಾರಿ ಅವರ ಅಪಹರಣವನ್ನು ದೆಹಲಿಯಲ್ಲಿ ಉಗ್ರವಾಗಿ ಖಂಡಿಸಿರುವ ಕೇಂದ್ರ ಗೃಹ ಕಾರ್ಯದರ್ಶಿ ಜಿ. ಕೆ. ಪಿಳ್ಳೈ, ಜಿಲ್ಲಾಧಿಕಾರಿ ಹೊಂದಿರುವ ಸ್ಥಳೀಯರ ಬೆಂಬಲದಿಂದಾಗಿ ಅವರು ಸುರಕ್ಷಿತವಾಗಿ ಬರಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಅಪಹರಣ ನಡೆದ ಸ್ಥಳ ಬಹಳ ದೂರದಲ್ಲಿದೆ. ಜಿಲ್ಲಾಧಿಕಾರಿಯನ್ನು ಬಿಡಿಸಿಕೊಳ್ಳುವ ತೆರೆಮರೆಯ ಯತ್ನ ನಡೆದಿದೆ. ಬಿಡುಗಡೆಗೆ ಕೆಲವು ದಿನ ಹಿಡಿಯಬಹುದು, ಆದರೆ ಅವರು ಸುರಕ್ಷಿತವಾಗಿ ವಾಪಸ್ ಬರುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಪಿಳ್ಳೈ ಹೇಳಿದರು.ಜಿಲ್ಲಾಧಿಕಾರಿ ಕೃಷ್ಣ ಅವರ ಅಪಹರಣ ‘ದುರದೃಷ್ಟಕರ’ ಎಂದು ಬಣ್ಣಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಶೀಘ್ರ ಅವರನ್ನು ಬಿಡುಗಡೆ ಮಾಡುವಂತೆ ವಿನಂತಿ ಮಾಡಿದ್ದಾರೆ. ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಎಲ್ಲಾ ಆಯ್ಕೆಗಳ ಬಗ್ಗೆ ಅಂದಾಜಿಸಲಾಗುತ್ತಿದೆ ಎಂದಿದ್ದಾರೆ.

ಜಿಲ್ಲಾಧಿಕಾರಿ ಅವರನ್ನು ಸುರಕ್ಷಿತವಾಗಿ ಬಿಡಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಬಿ. ಕೆ. ಪಟ್ನಾಯಕ್ ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರೂ ನಕ್ಸಲರ ಮನವೊಲಿಸಿ ಜಿಲ್ಲಾಧಿಕಾರಿ ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಸೇವೆಯನ್ನು ಸರ್ಕಾರಕ್ಕೆ ಒದಗಿಸಲು ಸಿದ್ಧ ಎಂದಿದ್ದಾರೆ.

ವಿಧಾನಸಭೆಯಲ್ಲಿ ಗದ್ದಲ (ಭುವನೇಶ್ವರ ವರದಿ): ಮಾಲ್ಕನ್‌ಗಿರಿ ಜಿಲ್ಲಾಧಿಕಾರಿ ಅಪಹರಣ ಖಂಡಿಸಿ ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿಗಳು ತೀವ್ರ ಪ್ರತಿಭಟನೆ ನಡೆಸಿದವು. ಹೀಗಾಗಿ ಕಲಾಪವನ್ನು ಎರಡು ಬಾರಿ ಮುಂದೂಡಬೇಕಾಯಿತು.ಶಾಸಕರು ಸಭಾಧ್ಯಕ್ಷರ ಪೀಠದ ಮುಂಭಾಗ ಧಾವಿಸಿ ಪ್ರಶ್ನೋತ್ತರ ಅವಧಿ ಮೊಟಕುಗೊಳಿಸಿ ಅಪಹರಣ ಬಗ್ಗೆ ಚರ್ಚಿಸಲು ಒತ್ತಾಯಿಸಿದರು. ಬಿಜೆಪಿ ಸದಸ್ಯರು ಬಿಜೆಡಿ ಸರ್ಕಾರದ ವಿರುದ್ಧ ಹರಿಹಾಯ್ದರು.ಈ ಮಧ್ಯೆ, ಅಪಹೃತ ಜಿಲ್ಲಾಧಿಕಾರಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮಾಲ್ಕನ್‌ಗಿರಿ ಪಟ್ಟಣದಲ್ಲಿ  ಗುರುವಾರ ದೊಡ್ಡ ಪ್ರಮಾಣದ ರ್ಯಾಲಿ ನಡೆಯಿತು. ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಮುಚ್ಚಿದ್ದವು. ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಎಲ್. ಸಿಯಲ್ ತಿಳಿಸಿದ್ದಾರೆ.ಪ್ರತಿಭಟನಾಕಾರರು ಹಲವು ಭಿತ್ತಿಫಲಕಗಳನ್ನು ಹಿಡಿದಿದ್ದರು. ‘ನಮ್ಮ ನೆಚ್ಚಿನ ಜಿಲ್ಲಾಧಿಕಾರಿಯನ್ನು ಬಿಡುಗಡೆಗೊಳಿಸಿ’, ‘ನಮ್ಮ ನೆಚ್ಚಿನ ಜಿಲ್ಲಾಧಿಕಾರಿಯವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವುದನ್ನು ನಾವು ಬಯಸುತ್ತೇವೆ’ ಎಂದು ಬರೆಯಲಾಗಿತ್ತು.ಮಾಲ್ಕನ್‌ಗಿರಿ ಜಿಲ್ಲೆ ಭುವನೇಶ್ವರದಿಂದ 615 ಕಿ.ಮೀ. ದೂರದಲ್ಲಿದೆ. ರಾಜ್ಯದ 30 ಜಿಲ್ಲೆಗಳ ಪೈಕಿ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆ ತೀವ್ರವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry