ಭಾನುವಾರ, ಜನವರಿ 19, 2020
29 °C

ನಕ್ಸಲರಿಂದ 13 ಪೊಲೀಸರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗರ್ವಾ (ಜಾರ್ಖಂಡ್) (ಪಿಟಿಐ): ರಸ್ತೆ ಬದಿಯಲ್ಲಿ ನೆಲಬಾಂಬ್ ಸಿಡಿಸಿ ಪೊಲೀಸ್ ವಾಹನವೊಂದನ್ನು ಸ್ಫೋಟಿಸಿದ ಮಾವೊವಾದಿಗಳು 13 ಮಂದಿ ಪೊಲೀಸರನ್ನು ಹತ್ಯೆ ಮಾಡಿರುವ ಘಟನೆ ಬರಿಗನ್ವಾ ಅರಣ್ಯ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಸತ್ತವರಲ್ಲಿ ಭಂಡಾರಿಯಾ ಪೊಲೀಸ್ ಠಾಣಾಧಿಕಾರಿ ಆರ್.ಬಿ.ಚೌಧರಿ ಸಹ ಸೇರಿದ್ದಾರೆ. ಬೆಳಿಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನೆ ನಂತರ ಸುಮಾರು ಐವತ್ತು ಮಂದಿ ಇದ್ದ ನಕ್ಸಲರು ಗುಂಡಿನ ದಾಳಿ ನಡೆಸಿದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೈಕೆಲ್ ರಾಜ್ ತಿಳಿಸಿದ್ದಾರೆ.ಮರಣೋತ್ತರ ಪರೀಕ್ಷೆ ನಂತರ ಪೊಲೀಸರು ಗುಂಡೇಟಿನಿಂದ ಸತ್ತಿದ್ದಾರೆಯೇ ಎಂದು ತಿಳಿದು ಬರಲಿದೆ ಎಂದೂ ಅವರು ಹೇಳಿದರು. ಪೊಲೀಸರು ತೆರಳುತ್ತಿದ್ದ ವಾಹನ ಬಾಂಬ್ ಸ್ಫೋಟದ ತೀವ್ರತೆಗೆ ಎತ್ತರಕ್ಕೆ ಎಗರಿ ಕೆಳಗೆ ಬಿದ್ದಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಸ್ಫೋಟದ ನಂತರ ಗಾಯಗೊಂಡಿದ್ದ ಪೊಲೀಸರು ಹೊರಬರಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ನಕ್ಸಲರು ಅತಿ ಸನಿಹದಿಂದ ಅವರತ್ತ ಗಂಡಿನ ಮಳೆಗರೆದರು ಎನ್ನಲಾಗಿದೆ. ಘಟನೆ ನಂತರ ಪೊಲೀಸರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ನಕ್ಸಲರು ಲೂಟಿ ಮಾಡಿ ಪರಾರಿಯಾಗಿದ್ದಾರೆ ಎಂದು ಭಂಡಾರಿಯಾ ಪೊಲೀಸರು ತಿಳಿಸಿದ್ದಾರೆ.ಬಾಂಬ್ ಸ್ಫೋಟಕ್ಕೆ ಕೆಲವೇ ನಿಮಿಷಗಳ ಮುನ್ನ ಭಂಡಾರಿಯಾ ಬಿಡಿಒ ಬಸುದೇವ್ ಪ್ರಸಾದ್ ಇದೇ ಮಾರ್ಗದಲ್ಲಿ ತೆರಳಿದ್ದು, ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ ಎಂದು ಗರ್ವಾ ಜಿಲ್ಲಾಧಿಕಾರಿ ಆರ್.ಪಿ.ಸಿನ್ಹಾ ತಿಳಿಸಿದ್ದಾರೆ.ಘಟನೆ ಸ್ಥಳದಿಂದ 22 ಕಿ.ಮೀ ದೂರದ ಬರ್‌ಗರ್ ಗ್ರಾಮದಲ್ಲಿ ವಿವಾದಿತ ಸ್ಥಳದಲ್ಲಿ ಆರೋಗ್ಯ ಕೇಂದ್ರಕ್ಕೆ ಕಟ್ಟಡ ನಿರ್ಮಿಸುತ್ತಿದ್ದು, ಇದರ ವಿರುದ್ಧ ಬಂದ್‌ಗೆ ಕರೆ ನೀಡಿದ್ದ ಗ್ರಾಮಸ್ಥರ ಮನವೊಲಿಸುವ ಸಲುವಾಗಿ ಪೊಲೀಸರು ಮತ್ತು ಬಿಡಿಒ ತೆರಳುತ್ತಿದ್ದರು ಎಂದು ಅವರು ತಿಳಿಸಿದರು.ಬಾಂಬ್ ಸ್ಫೋಟದ ಮಾರ್ಗದಲ್ಲಿಯೇ ಇಬ್ಬರು ಜಿಲ್ಲಾ ಪರಿಷತ್ ಸದಸ್ಯರು ಹಾಗೂ ಅವರ ಭದ್ರತಾ ಪಡೆಯುವರು ತೆರಳುತ್ತಿದ್ದು, ಘಟನೆ ನಂತರ ಅವರು ನಾಪತ್ತೆಯಾಗಿದ್ದಾರೆ.

ಪ್ರತಿಕ್ರಿಯಿಸಿ (+)