ನಕ್ಸಲರ ಗುಂಡಿಗೆ ಪೇದೆ ಬಲಿ

7

ನಕ್ಸಲರ ಗುಂಡಿಗೆ ಪೇದೆ ಬಲಿ

Published:
Updated:

ನಾವೂರ (ದಕ್ಷಿಣ ಕನ್ನಡ ಜಿಲ್ಲೆ): ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾವೂರ ಮಂಜಲ ಎಂಬಲ್ಲಿ ದಟ್ಟಾರಣ್ಯದಲ್ಲಿ ಶನಿವಾರ ತಡರಾತ್ರಿ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಮತ್ತು ಶಸ್ತ್ರಸಜ್ಜಿತ ನಕ್ಸಲರ ತಂಡದ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಎಎನ್‌ಎಫ್ ಸಿಬ್ಬಂದಿ ಬಲಿಯಾಗಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್- ನಕ್ಸಲ್ ಮಧ್ಯೆ ಸಂಭವಿಸಿದ ಮೊದಲ ಮುಖಾಮುಖಿಯಲ್ಲೇ ರಕ್ತದ ಕೋಡಿ ಹರಿದಿದೆ.ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ನಿವಾಸಿ, ನಕ್ಸಲ್ ನಿಗ್ರಹ ಪಡೆಯ ಕಾನ್‌ಸ್ಟೇಬಲ್ ಮಹಾದೇವ ಎಸ್. ಮಾನೆ (40) ಮೃತಪಟ್ಟವರು. ಕೆಎಸ್‌ಆರ್‌ಪಿ ಒಂಬತ್ತನೇ ಬೆಟಾಲಿಯನ್‌ನಿಂದ ಎರವಲು ಸೇವೆ ಆಧಾರದಲ್ಲಿ ಒಂದೂವರೆ ವರ್ಷದ ಹಿಂದೆ ಕಾರ್ಕಳ ಎಎನ್‌ಎಫ್ ಶಿಬಿರಕ್ಕೆ  ಮಾನೆ ಸೇರ್ಪಡೆಯಾಗಿದ್ದರು.`ಪಶ್ಚಿಮ ಘಟ್ಟದ ಹಚ್ಚ ಹಸಿರಿನ ನಾವೂರ ಗ್ರಾಮದ ದಟ್ಟಾರಣ್ಯದಲ್ಲಿ ನಕ್ಸಲರ ಚಲನವಲನ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರ ಸಹಕಾರದಲ್ಲಿ ಎಎನ್‌ಎಫ್‌ನ ತಲಾ 14 ಮಂದಿಯ ಎರಡು ತಂಡ ಶನಿವಾರ ಸಂಜೆ ಮೂರು ಗಂಟೆಗೆ ವಿಶೇಷ ಶೋಧ ಕಾರ್ಯಾಚರಣೆ ಆರಂಭಿಸಿತ್ತು.

 

ಮಂಜಲದ ಅರಣ್ಯದಲ್ಲಿ ರಾತ್ರಿ 11.30ರ ವೇಳೆಗೆ ಕಾಡಿನಲ್ಲಿ ತೆವಳು ಶೋಧ ನಡೆಸುತ್ತಿದ್ದಾಗ ಸಮೀಪದ ಮಾರ್ಗದಲ್ಲಿ ಟಾರ್ಚ್ ಬೆಳಕಿನ ನೆರವಿನಿಂದ ತಂಡವೊಂದು ಬರುತ್ತಿರುವ ಸುಳಿವು ಸಿಕ್ಕಿತು. ಈ ತಂಡದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಇದ್ದರು. ಪೊಲೀಸರು ಗುಂಡಿನ ದಾಳಿಗೆ ಮುಂದಾಗುತ್ತಿದ್ದಂತೆ ನಕ್ಸಲರು ಚುರುಕಾಗಿ ದಾಳಿ ನಡೆಸಿದರು.ಆಗ ಎಎನ್‌ಎಫ್ ಸಿಬ್ಬಂದಿ ಪ್ರತಿದಾಳಿ ನಡೆಸಿದರು. ಗುಂಡಿನ ಚಕಮಕಿ ವೇಳೆ ಒಂದು ಗುಂಡು ಮಹಾದೇವ ಮಾನೆ ಅವರ ಬೆನ್ನು ಹೊಕ್ಕಿತ್ತು. ರಕ್ತದ ಮಡುವಿನಲ್ಲಿ ಕುಸಿದು ಬ್ದ್ದಿದ ಮಾನೆ ಸ್ಥಳದಲ್ಲೇ ಮೃತಪಟ್ಟರು. ಈ ಸಂದರ್ಭ ನಕ್ಸಲ್ ತಂಡದಲ್ಲಿದ್ದ ಮೂವರು ಮಹಿಳೆಯರು ಜೋರಾಗಿ ಚೀರಿಕೊಂಡಿದ್ದು, ಅವರಿಗೂ ಗುಂಡು ತಗುಲಿರುವ ಶಂಕೆ ವ್ಯಕ್ತವಾಗಿದೆ.ದಾಳಿ ನಡೆಸುತ್ತಲೇ ನಕ್ಸಲರು ಸ್ಥಳದಿಂದ ಪರಾರಿಯಾದರು. ನಕ್ಸಲ್ ತಂಡವನ್ನು ಸ್ವಲ್ಪ ದೂರ ಪೊಲೀಸ್ ತಂಡ ಬೆನ್ನಟ್ಟಿತು. ಆದರೆ ನಕ್ಸಲರು ಕತ್ತಲಲ್ಲಿ ಪರಾರಿಯಾಗುವಲ್ಲಿ ಯಶಸ್ವಿಯಾದರು~ ಎಂದು ಕಾರ್ಯಾಚರಣೆ ತಂಡದಲ್ಲಿದ್ದ ಎಎನ್‌ಎಫ್ ಸಿಬ್ಬಂದಿ `ಪ್ರಜಾವಾಣಿ~ಗೆ ತಿಳಿಸಿದರು.ಘಟನೆ ನಡೆದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಜಿಲ್ಲೆಯ ಪೊಲೀಸ್ ಸಿಬ್ಬಂದಿ ಅಲ್ಲದೆ ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಎಎನ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಮುಂದುವರಿಸಿದರು.ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಲಾಬೂರಾಮ್, ಎಎನ್‌ಎಫ್ ಪೊಲೀಸ್ ವರಿಷ್ಠಾಧಿಕಾರಿ ವಾಸುದೇವಮೂರ್ತಿ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಭಾನುವಾರ ರಾತ್ರಿವರೆಗೂ ನಕ್ಸಲರ ಸುಳಿವು ಸಿಕ್ಕಿಲ್ಲ.ರಕ್ತದ ಕೋಡಿ:
ಘಟನಾ ಸ್ಥಳದಲ್ಲಿ ಒಂದು ಜತೆ ಪಾದರಕ್ಷೆ, ಕತ್ತಿ, ಸಣ್ಣ ಟಾರ್ಚ್, ಸಲಿಕೆ, ನಾಲ್ಕು ಬಿದಿರಿನ ಕೋಲುಗಳು ದೊರಕಿವೆ. ಜತೆಗೆ ಟಾರ್ಚ್‌ನ ಕನ್ನಡಿ ಮತ್ತಿತರ ವಸ್ತುಗಳು ಸಿಕ್ಕಿವೆ. ದಾಳಿ ನಡೆದ ಸಮೀಪದ ಮರವೊಂದಕ್ಕೆ ನಾಲ್ಕೈದು ಗುಂಡು ಹೊಕ್ಕಿದೆ. ಮಾನೆ ಮೃತಪಟ್ಟ ಜಾಗದಲ್ಲಿ ರಕ್ತದ ಕೋಡಿ ಹರಿದಿದೆ.ಹುಟ್ಟೂರಿಗೆ ಮೃತದೇಹ:
ಬೆಳ್ತಂಗಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮಾನೆ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಿತು. ಬಳಿಕ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಶವದ ಸ್ಕ್ಯಾನ್ ನಡೆಸಲಾಯಿತು. ಸಂಜೆ 3.45ಕ್ಕೆ ಬೆಳ್ತಂಗಡಿ ಠಾಣೆ ಎದುರು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಅಂತಿಮ ಗೌರವ ಸಲ್ಲಿಸಲಾಯಿತು. ಬಳಿಕ ಶವವನ್ನು ಹುಟ್ಟೂರಿಗೆ ಕೊಂಡೊಯ್ಯಲಾಯಿತು. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ನೀಲಂ ಅಚ್ಯುತ ರಾವ್, ಆಂತರಿಕ ಭದ್ರತೆಯ ಎಡಿಜಿಪಿ ಬಿಪಿನ್ ಗೋಪಾಲ ಕೃಷ್ಣ, ನಕ್ಸಲ್ ನಿಗ್ರಹ ಪಡೆ ಹಾಗೂ ಭಯೋತ್ಪಾದಕ ನಿಗ್ರಹ ಘಟಕದ ಐಜಿಪಿ ಭಾಸ್ಕರ ರಾವ್, ಪಶ್ಚಿಮ ವಲಯ ಐಜಿಪಿ ಅಲೋಕ್ ಮೋಹನ್ ಮತ್ತಿತರರು ಭೇಟಿ ನೀಡಿದರು.ನೇತ್ರಾವತಿ ತಂಡ: ಪೊಲೀಸರ ಮೇಲೆ ದಾಳಿ ನಡೆಸಿದ್ದು ನಕ್ಸಲರ ನೇತ್ರಾವತಿ ತಂಡ. ಈ ತಂಡದಲ್ಲಿ ಬಿ.ಜಿ. ಕೃಷ್ಣಮೂರ್ತಿ, ವಿಕ್ರಮ ಗೌಡ, ಹೊಸಗದ್ದೆ ಪ್ರಭಾ ಮತ್ತಿತರರು ಇದ್ದರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.  `ವೇಣೂರು, ಬೆಳ್ತಂಗಡಿ ಪೊಲೀಸರ ನೆರವಿನಿಂದ ಎಎನ್‌ಎಫ್ ತಂಡ ಶನಿವಾರ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ರಾತ್ರಿ 11.30ರ ವೇಳೆಗೆ ನಕ್ಸಲ್ ತಂಡ ಎದುರಾಯಿತು. ಎಎನ್‌ಎಫ್ ಸಿಬ್ಬಂದಿ ಎಚ್ಚರಿಕೆ ನೀಡಿದರು.ಆದರೆ ನಕ್ಸಲರು ದಾಳಿ ನಡೆಸಿದಾಗ ಮಾನೆ ಮೃತಪಟ್ಟರು. ನಕ್ಸಲ್ ತಂಡದಲ್ಲೂ ಕಿರುಚಾಟ ಕೇಳಿಸಿದೆ. ಗಾಯ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಶೋಧ ಮುಂದುವರಿಯಲಿದೆ. ಶನಿವಾರ ನಮ್ಮ ಮಟ್ಟಿಗೆ ಕೆಟ್ಟ ದಿನ~ ಎಂದು ಪೊಲೀಸ್ ವರಿಷ್ಠಾಧಿಕಾರಿ ಲಾಬೂರಾಮ್ ಭಾವುಕರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry