ನಕ್ಸಲರ ನಾಡಿನಲ್ಲಿ ಅಭಿವೃದ್ಧಿಯ ಜಾಡು...

7

ನಕ್ಸಲರ ನಾಡಿನಲ್ಲಿ ಅಭಿವೃದ್ಧಿಯ ಜಾಡು...

Published:
Updated:

ಕಾಫಿ ಕಣಿವೆ ಮಲೆನಾಡಿನಲ್ಲಿ ಈಗ ಬಂದೂಕಿನ ಸದ್ದು ಕೇಳುವುದು ಕಡಿಮೆ, ಅರಣ್ಯವಾಸಿಗಳಿಗೂ ಅದು ಬೇಕಿಲ್ಲ. ನಿಜವಾದ `ಅಭಿವೃದ್ಧಿಯ ಮದ್ದು~ ಅರೆಯುವ ತುರ್ತು ಸರ್ಕಾರಕ್ಕೂ ಎದುರಾಗಿದೆ. ಪರಿಣಾಮ ಈಗ ಶಾಶ್ವತ ಕತ್ತಲು ಕರಗಿ, ಬೆಳಕಿನ ಕಿರಣಗಳಂತೆ ಅಭಿವೃದ್ಧಿಯ ಕೋಲ್ಮಿಂಚು ಸ್ವಲ್ಪಸ್ವಲ್ಪವೆ ಮೂಡಲಾರಂಭಿಸಿದೆ.ನಕ್ಸಲ್ ಕಾರಿಡಾರಿನಲ್ಲಿ ಗುರುತಿಸಿಕೊಂಡಿರುವ ಚಿಕ್ಕಮಗಳೂರಿನ ಮಲೆನಾಡು ಭಾಗದದಲ್ಲಿ ಎನ್‌ಕೌಂಟರ್ ಹೆಸರಿನಲ್ಲಿ ಹರಿದ ರಕ್ತದ ಕಲೆಗಳು ಮಾಸುತ್ತಿವೆ. `ಆಪರೇಷನ್ ಬ್ಲಾಕ್ ಥಂಡರ್~, `ಆಪರೇಷನ್ ರೈನ್ ಬೋ~ (ಕಳೆದ ನಾಲ್ಕೈದು ತಿಂಗಳಲ್ಲಿ ಮಲೆನಾಡಿನಲ್ಲಿ ನಕ್ಸಲ್ ನಿಗ್ರಹ ಪಡೆ ನಕ್ಸಲ್ ವಿರುದ್ಧ ನಡೆಸಿದ ಎರಡು ಕಾರ್ಯಾಚರಣೆಗಳು) ನಡೆದಿವೆ. ಎರಡೂ ಕಡೆಯಿಂದ ಒಂದೇ ಒಂದು ಗುಂಡು ಸಿಡಿದಿಲ್ಲ.

 

ಬಂದೂಕಿನಿಂದ ನಕ್ಸಲ್ ಸದ್ದಡಗಿಸಲು ಸಾಧ್ಯವಿಲ್ಲ ಎನ್ನುವುದು ಸರ್ಕಾರಕ್ಕೂ ಮನದಟ್ಟಾದಂತಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ ನಕ್ಸಲ್ ಚಟುವಟಿಕೆ ನಿಯಂತ್ರಿಸಲು ಕಾರ್ಯಾಚರಣೆ ಜತೆಜತೆಗೆ ಅಭಿವೃದ್ಧಿಯ ಚಕ್ರಕ್ಕೆ ವೇಗ ನೀಡುವ ಪ್ರಯತ್ನ ಸರ್ಕಾರದ ಕಡೆಯಿಂದ ನಡೆಯುತ್ತಿವೆ.`ಎಲ್ಲಿ ಸಮಸ್ಯೆಗಳು ಇರುತ್ತವೆಯೋ ಅಲ್ಲಿ ಅವರು (ನಕ್ಸಲರು) ಕಾಣಿಸಿಕೊಳ್ಳುತ್ತಾರೆ. ಸಮಸ್ಯೆಗಳೇ ಇಲ್ಲದಿದ್ದರೆ ಅವರಿಗೆ ಅಲ್ಲಿ ಕೆಲಸವಿರುವುದಿಲ್ಲ. ಇದು ಸಾಕಷ್ಟು ಬಾರಿ ಸಾಬೀತಾಗಿದೆ~ ಎನ್ನುವ ಮಾತನ್ನು ಈಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಐದು ತಿಂಗಳ ಹಿಂದೆ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೇರ ನುಡಿಗಳಲ್ಲಿ ಹೇಳಿದ್ದರು.ಬದಲಾವಣೆ ಗಾಳಿ ಬೀಸುತ್ತಿರುವ ಪರಿಣಾಮ ವಿದ್ಯುತ್ ಬೆಳಕೇ ನೋಡದಿದ್ದ ಮನೆಗಳಲ್ಲಿ ಸಿಎಫ್‌ಎಲ್ ಬಲ್ಬುಗಳು ಮಿನುಗುತ್ತಿವೆ. ಮೈಲಿಗೊಂದು ಮನೆ ಇರುವ ಊರುಗಳಿಗೆ ಮೊಬೈಲ್‌ಗಳು ಕಾಲಿರಿಸಿವೆ. ಶಾಲೆ, ಅಂಗನವಾಡಿಗಳು ಬಾಗಿಲು ತೆರೆದಿವೆ. ಶಾಲೆಗಳಲ್ಲಿ ಆತಂಕವಿಲ್ಲದೆ ಪಾಠ, ಪ್ರವಚನಗಳು ನಡೆಯುತ್ತಿವೆ.

ಒಂಟಿ ಮನೆಗಳ ಅಂಗಳದವರೆಗೂ ಮಣ್ಣು, ಜಲ್ಲಿ ರಸ್ತೆಗಳು ಕಾಣಿಸುತ್ತಿವೆ. ಮುರುಗನ ಹುಳಿ, ರಾಮಪತ್ರೆ.... ಅರಣ್ಯ ಕಿರು ಉತ್ಪನ್ನ ಸಂಗ್ರಹಿಸಲು ಇದ್ದ ನಿರ್ಬಂಧ ಈಗ ಇಲ್ಲ.ಸರ್ಕಾರವೇ ಸಂಸ್ಕರಣ ಶಾಖಾ ಘಟಕಗಳನ್ನು ಹಾಕಿಕೊಟ್ಟಿದೆ. ದುಡಿಯುವ ಕೈಗಳಿಗೆ ಕೆಲಸ ನೀಡಲು ಕೈಮಗ್ಗ ಘಟಕಗಳನ್ನು ಅಳವಡಿಸಿಕೊಟ್ಟಿದೆ. ಕೆಲವರಿಗೆ ಅರಣ್ಯ ಸಾಗುವಳಿ ಹಕ್ಕುಪತ್ರಗಳೂ ಸಿಕ್ಕಿವೆ. `ಸಮಸ್ಯೆಗಳಿದ್ದರಲ್ಲವೇ ಹೋರಾಟ ಹುಟ್ಟಿಕೊಳ್ಳುವುದು~ ಎನ್ನುವ ವಾಸ್ತವ ಅರಿತು ಸರ್ಕಾರ ಕೈಗೊಂಡಿರುವ ಅಭಿವೃದ್ಧಿಯ  ಕುರುಹು ಅಲ್ಲಲ್ಲಿ ಕಾಣಿಸುತ್ತಿದೆ. ಆದರೆ, ಈ ಅರೆ ಅಭಿವೃದ್ಧಿ ಶಾಶ್ವತ ಪರಿಹಾರವಲ್ಲ ಎನ್ನುವುದು ಸರ್ಕಾರಕ್ಕೂ ಮನವರಿಕೆ ಆಗಬೇಕು ಎನ್ನುತ್ತಾರೆ ಶೃಂಗೇರಿ ತಾಲ್ಲೂಕಿನ ಹೆಸರು ಬಯಸದ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳು.ಅವರು (ನಕ್ಸಲರು) ಇಲ್ಲದಿದ್ದರೆ ನಮ್ಮದೊಂದು ಊರು ಇದೆ ಎನ್ನುವುದಾದರೂ ಪೇಟೆ ಮಂದಿಗೆ, ಸರ್ಕಾರಕ್ಕೆ ಹೇಗೆ ಗೊತ್ತಾಗುತ್ತಿತ್ತು? ರಸ್ತೆ, ವಿದ್ಯುತ್.. ಇತ್ಯಾದಿ ನಮಗೆಲ್ಲಿ ಸಿಗುತ್ತಿದ್ದವು?~ ಎನ್ನುವ ಅರಣ್ಯವಾಸಿಗಳ ಅಂತರಾಳದಲ್ಲಿ ನಕ್ಸಲರ ಬಗ್ಗೆ ಅಭಿಮಾನ ಇದೆ. ಹೋರಾಡಿ ಹಕ್ಕು, ಸೌಲಭ್ಯ ಪಡೆಯುವ ಸನ್ನಿವೇಶ ತಂದಿಟ್ಟ ವ್ಯವಸ್ಥೆ ಬಗ್ಗೆ ಕೆಲ ಯುವಕರಲ್ಲಿ ಹೆಪ್ಪುಗಟ್ಟಿರುವ ಆಕ್ರೋಶದ ಭಾವನೆ ಇನ್ನೂ ತಿಳಿಯಾಗಿಲ್ಲ.ಬದಲಾಗುತ್ತಿದೆ ಎಎನ್‌ಎಫ್ ವರಸೆ: `ಅವರು~ ಇತ್ತ ಬಂದಿದ್ರಾ? ಎಷ್ಟು ಮಂದಿ ಇದ್ರು? ಅವರಿಗೆ ಆಶ್ರಯ, ಊಟ, ಹಣ.. ಏನಾದ್ರೂ ಕೊಟ್ಟು ಕಳುಹಿಸಿದ್ರಾ?~ ಎಂದು ಆಗಾಗ ಸಂಶಯದ ಪ್ರಶ್ನೆಗಳಿಂದ ತಿವಿಯುತ್ತಾ, ಭೀತಿಯ ವಾತಾವರಣ ಮೂಡಿಸುತ್ತಿದ್ದ ನಕ್ಸಲ್ ನಿಗ್ರಹ ದಳದ ವರಸೆಯೂ ಬದಲಾಗಿದೆ. ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ನಾಲ್ಕೂ ಎಎನ್‌ಎಫ್ ತುಕಡಿಗಳು `ಅರಣ್ಯ ವಾಸಿಗಳ~ ಪಾಲಿಗೆ `ಹಳ್ಳಿ ಮಿತ್ರ~ನಂತೆ ಸ್ಪಂದಿಸುತ್ತಿವೆ.

 

ನಕ್ಸಲರ `ಬೇಟೆ~ಗೆ ಕಾಡಿನ ಇಂಚಿಂಚು ಶೋಧಿಸಲು ಮಾತ್ರ ಎಎನ್‌ಎಫ್ ಸೀಮಿತವಾಗದೆ, ಗಿರಿಜನರು, ಕಾಡಿನ ನಡುವೆ ವಾಸಿಸುವ ರೈತರ, ಕೂಲಿ ಕಾರ್ಮಿಕರ ಕುಂದುಕೊರತೆ ಖುದ್ದು ಆಲಿಸುತ್ತಿದೆ. ಸರ್ಕಾರದ ಸವಲತ್ತುಗಳನ್ನು ಸೌಲಭ್ಯ ವಂಚಿತರ ಮನೆ ಬಾಗಿಲಿಗೆ ತಲುಪಿಸಲು ಶ್ರಮಿಸುತ್ತಿದೆ.

 

ನಕ್ಸಲರಿಗೆ ಆಂತರಿಕವಾಗಿ ದೊಡ್ಡ ನೈತಿಕ ಬಲವೆಂದೇ ನಂಬಲಾಗಿರುವ ಗಿರಿಜನರ ವಿಶ್ವಾಸ ಗಿಟ್ಟಿಸಲು ಮತ್ತು ನಕ್ಸಲ್ ಸಂಘಟನೆಯ ಮೂಲ ಬೇರು ಅಡಗಿಸಲು ಹಮ್ಮಿಕೊಂಡಿರುವ ಯೋಜನೆಯೇ `ಹಳ್ಳಿಮಿತ್ರ~ ಎನ್ನುವ ಮಾತುಗಳೂ ಚಾಲ್ತಿಯಲ್ಲಿದೆ.

 

ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿ, ಕಾಡಿನ ಮಧ್ಯೆ ಕಷ್ಟದ ಬದುಕು ನಡೆಸುತ್ತಿರುವ ಕುಟುಂಬಗಳನ್ನು ಗುರುತಿಸಿ, ಸವಲತ್ತು ಒದಗಿಸುವ  ಪ್ರಯತ್ನವನ್ನು ಎಎನ್‌ಎಫ್ ಮಾಡುತ್ತಿದೆ. ಇದನ್ನು ಗಿರಿಜನರು ಕೂಡ ತಳ್ಳಿ ಹಾಕುವುದಿಲ್ಲ.ಕಾಡಿಗೆ ವಿದ್ಯುತ್ ಬಂದ ಬಗೆ

ಕೊಪ್ಪ ತಾಲ್ಲೂಕಿನ ಕಡಗುಂಡಿಯಲ್ಲಿ ವಿದ್ಯುತ್ ಬೆಳಕು ನೀಡುತ್ತಿರುವ 5 ಕೆ.ವಿ ಸಾಮರ್ಥ್ಯದ ಟರ್ಬೋ ಯಂತ್ರ.

ನಕ್ಸಲ್‌ಬಾಧಿತ ಪಶ್ಚಿಮಘಟ್ಟದ ಹಳ್ಳಿಗಳ ಮುಖ್ಯ ಬೇಡಿಕೆಯಾಗಿದ್ದ ವಿದ್ಯುತ್ ನೀಡಲು 2010ರಲ್ಲಿ ಜಿಲ್ಲಾಡಳಿತ ಕೈಹಾಕಿತು.  ಕಂಬದ ವಿದ್ಯುತ್ ಕನಸೇ ಆಗಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಹಳ್ಳಿಗಳಲ್ಲಿ ಎರಡು, ಮೂರು ವರ್ಷಗಳ ಹಿಂದೆ ಅಳವಡಿಸಿದ್ದ ಸೌರದೀಪಗಳು ವಿಫಲವಾಗಿದ್ದವು. ದಟ್ಟ ಅರಣ್ಯದಲ್ಲಿ ಬಿಸಿಲು ಕಾಣದೆ ಸೌರದೀಪ ಯಶಸ್ವಿಯೂ ಆಗಿರಲಿಲ್ಲ.

ಇಂತಹ ಸಂದರ್ಭದಲ್ಲಿಯೇ ಇಲ್ಲಿನ ಜನರಿಗೆ ಆಶಾಕಿರಣವಾಗಿ ಕಾಣಿಸಿದ್ದು ಟರ್ಬೋ ಯಂತ್ರಗಳು (ಕಿರು ಜಲ ವಿದ್ಯುತ್ ಉತ್ಪಾದನಾ ಯಂತ್ರಗಳು). ಇದರಿಂದ ಹರಿಯುವ ನೀರನ್ನು ಬಳಸಿ ವಿದ್ಯುತ್ ತಯಾರಿಸಲಾಗುತ್ತಿದೆ. ಗೃಹ ಬಳಕೆಯ ವಿದ್ಯುತ್‌ನಿಂದಾಗಿ ಪ್ರತಿ ಮನೆಯಲ್ಲೂ ಸಿಎಫ್‌ಎಲ್ ಬಲ್ಬುಗಳು ಬೆಳಗುತ್ತಿವೆ.ಕೊಪ್ಪ ತಾಲ್ಲೂಕಿನ ಯಡಗುಂದ, ಹೊರಲೆ, ಕಡಗುಂಡಿಯಲ್ಲಿ ಟರ್ಬೋ ಯಂತ್ರಗಳು ಗಿರಗಿರನೆ ಸದ್ದು ಮಾಡುತ್ತಿವೆ. ಈ ಮೂರು ಗ್ರಾಮಗಳ 30 ಮನೆಗಳು ಕಿರು ಜಲವಿದ್ಯುತ್‌ನಿಂದ ಬೆಳಗುತ್ತಿವೆ.

 

ಟಿವಿ ಮುಖ ನೋಡಿರದ ಹೊರಲೆ, ಯಡಗುಂದದಲ್ಲಿ ತಲಾ ಎರಡು ಹಾಗೂ ಕಡಗುಂಡಿಯಲ್ಲಿ ಒಂದು ಟಿ.ವಿ `ಗದ್ದಲ~ ಮಾಡುತ್ತಿವೆ. ಕೆಲ ಮನೆಗಳಲ್ಲಿ ಮಿಕ್ಸಿಯಲ್ಲಿ ಕಾರ ನುರಿಯುತ್ತಿದೆ. ನಕ್ಸಲ್‌ಬಾಧಿತ ಈ ಹಳ್ಳಿಗಳಿಗೆ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯ ಸರ್ಕಾರ ಕಿರು ಜಲವಿದ್ಯುತ್ ಉತ್ಪಾದನೆಗೆ 10 ಲಕ್ಷ ರೂ. ಅನುದಾನ ಒದಗಿಸಿತ್ತು.ಈ ಯೋಜನೆ ಯಶಸ್ವಿಯಾಗಿರುವುದನ್ನು ಕಂಡು ಮಲೆನಾಡು ಪಶ್ಚಿಮಘಟ್ಟ ಪ್ರದೇಶ ಅಭಿವೃದ್ಧಿ ಮಂಡಳಿ, ಶೃಂಗೇರಿ ತಾಲ್ಲೂಕಿನ ಕೆಲ ಹಳ್ಳಿ, ಆಗುಂಬೆ ಹಾಗೂ ಚಾರ್ಮಾಡಿ ಘಾಟ್‌ನ ಬಿದರತಳ ಗ್ರಾಮದಲ್ಲಿ ಟರ್ಬೋ ಘಟಕ ಅಳವಡಿಸಲು ಕಾಮಗಾರಿ ಕೈಗೆತ್ತಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry