ಸೋಮವಾರ, ಮೇ 17, 2021
21 °C

ನಕ್ಸಲರ ಪರಿಕರ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ತಂಗಡಿ: ನಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ಲೂರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿನ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಸಂಜೆ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಮತ್ತು ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ನಾರಾವಿ ಪರಿಸರದಲ್ಲಿ ಶೋಧ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.ನೂರಕ್ಕೂ ಹೆಚ್ಚು ಮಂದಿ ನಕ್ಸಲ್ ನಿಗ್ರಹ ಪಡೆಯ ಯೋಧರು ದಟ್ಟಾರಣ್ಯದಲ್ಲಿ ನಕ್ಸಲರ ಹುಡುಕಾಟ ನಡೆಸುತ್ತಿದ್ದಾರೆ. ಸಂಜೆಯವರೆಗೂ ನಕ್ಸಲೀಯರ ಚಲನವಲನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಕ್ಸಲ್ ನಿಗ್ರಹ ಪಡೆಯ ಎಸ್.ಪಿ.ವಾಸುದೇವ ಮೂರ್ತಿ ಹಾಗೂ ಉನ್ನತ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ತನಿಖೆ ಚುರುಕುಗೊಳಿಸಿದ್ದಾರೆ.  ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಕ್ಸಲರ ಪರಿಕರಗಳ ಪತ್ತೆ: ಸ್ಥಳದಲ್ಲಿ ಶನಿವಾರ ಒಂದು ಡಬಲ್ ಬ್ಯಾರಲ್ ಬಂದೂಕಿನ ನಳಿಕೆ, ನಾಲ್ಕು ಇಂಗ್ಲಿಷ್ ಪುಸ್ತಕಗಳು, ಒಂದು ಗ್ರೆನೇಡ್, ಒಂದು ಕಪ್ಪು ಬಣ್ಣದ ಲುಂಗಿ, ಒಂದು ಟೋಪಿ ಹಾಗೂ ಒಂದು ಕಂಬಳಿ ದೊರಕಿದ್ದು ಅದನ್ನು ವೇಣೂರು ಪೊಲೀಸ್ ಠಾಣೆಯಲ್ಲಿ ಇಡಲಾಗಿದೆ ಎಂದು ಪುತ್ತೂರಿನ ಎ.ಎಸ್.ಪಿ ಅನುಚೇತ್ ಶನಿವಾರ ಪೊಲೀಸ್ ಠಾಣೆಯಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ.ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಭಾಸ್ಕರ ರೈ ಮತ್ತು ವೇಣೂರು ಎಸ್.ಐ ಉಮೇಶ್ ಉಪ್ಪಳಿಕೆ ಇದ್ದರು.

ಸಿಬ್ಬಂದಿ ಕಾಲಿಗೆ ಗುಂಡು: ಎ.ಎನ್.ಎಫ್ ಸಿಬ್ಬಂದಿ ಸತೀಶ್ ಎಂಬವರು ಶನಿವಾರ ಸಂಜೆ ಘಟನಾ ಸ್ಥಳದ ಗುಡ್ಡದಿಂದ ಕೆಳಗಿಳಿದು ಬರುವಾಗ ಬಳಲಿ ಸುಸ್ತಾಗಿ ಕೆಳಗೆ ಬಿದ್ದು ರೈಫಲ್‌ನ ಬಟನ್ ಒತ್ತಿ ಅವರ ಕಾಲಿಗೆ ಗುಂಡು ಹಾರಿ ಗಾಯವಾಗಿದೆ. ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.