ಮಂಗಳವಾರ, ಮೇ 11, 2021
26 °C

ನಕ್ಸಲೀಯರನ್ನು ಹುಟ್ಟಿಸಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಕ್ಸಲೀಯರು ಹಿಂಸೆಯ ಹಾದಿ ತೊರೆದು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಬೇಕೆಂದು ಕರೆ ನೀಡುತ್ತಿರುವ ಸರ್ಕಾರ, ವಾಸ್ತವದಲ್ಲಿ ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಿರುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದ ವಿಠಲ ಮಲೆಕುಡಿಯ ಎಂಬ ವಿದ್ಯಾರ್ಥಿಯ ದಾರುಣ ಕತೆ. ತನ್ನ ಸಮುದಾಯದ ಅನಕ್ಷರಸ್ಥರಂತೆ ಕಾಡಿನಲ್ಲಿಯೇ ಉಳಿಯದೆ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಬೇಕೆಂಬ ಹಂಬಲದಿಂದ ಶಿಕ್ಷಿತನಾಗಲು ಹೊರಟಿದ್ದೇ ಈ ಯುವಕನ ಮೊದಲ ಅಪರಾಧ. ಪಡೆದ ಶಿಕ್ಷಣದ ಬಲದಲ್ಲಿ ತಮ್ಮವರಿಗೆ ಆಗುತ್ತಿರುವ ಅನ್ಯಾಯವನ್ನು ಯುವಕ ಪ್ರತಿಭಟಿಸಿದ್ದು ಪೊಲೀಸರ ಕಣ್ಣಿಗೆ `ದೇಶದ್ರೋಹ~ದಂತೆ ಕಾಣಿಸತೊಡಗಿದೆ.ಬಂಧನಕ್ಕೊಳಗಾಗಿದ್ದ ತಂದೆಯ ರಕ್ಷಣೆಗೆ ಹೋಗಿದ್ದ ಈ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ. ಇದರಿಂದಾಗಿ ಬಂಧಿಯಾಗಿದ್ದುಕೊಂಡೇ ಪತ್ರಿಕೋದ್ಯಮ ಸ್ನಾತಕೋತ್ತರ ಪರೀಕ್ಷೆಯನ್ನು ಬರೆಯಬೇಕಾದ ಪರಿಸ್ಥಿತಿ ಎದುರಾಗಿದೆ. `ಯಾರೂ ನಕ್ಸಲೀಯರಾಗಿ ಹುಟ್ಟುವುದಿಲ್ಲ, ಸಮಾಜ ಅವರನ್ನು ನಕ್ಸಲೀಯರಾಗಿ ರೂಪಿಸುತ್ತದೆ~ ಎನ್ನುವ ಆರೋಪವನ್ನು ದಕ್ಷಿಣ ಕನ್ನಡದ ಪೊಲೀಸರು ನಿಜ ಮಾಡಲು ಹೊರಟಂತಿದೆ.ನಕ್ಸಲೀಯರ ನಿಯಂತ್ರಣದಲ್ಲಿ ಆ ಜಿಲ್ಲೆಯ ಪೊಲೀಸರಿಗೆ ಒಳ್ಳೆಯ ಹೆಸರಿಲ್ಲ. ನಕಲಿ ಎನ್‌ಕೌಂಟರ್‌ಗಳ ಕಳಂಕ ಮಾತ್ರ ಅಲ್ಲ, ಆರು ತಿಂಗಳ ಹಿಂದೆ ನಕ್ಸಲೀಯರ ವಿರುದ್ಧದ ಕಾರ್ಯಾಚರಣೆಯಲ್ಲಿ ಯೋಧನೊಬ್ಬ ಬಲಿಯಾಗಿದ್ದು ಪೊಲೀಸರ ಗುಂಡಿನಿಂದ ಎಂಬ ಆರೋಪ ಕೂಡಾ ಅಲ್ಲಿನ ಪೊಲೀಸರ ಮೇಲಿದೆ. ಈ ಆರೋಪಗಳನ್ನು ಸಾಬೀತು ಮಾಡಲು ಹೊರಟಂತಿದೆ ಪೊಲೀಸರ ನಡವಳಿಕೆ. ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಅಮಾಯಕರಿಗೆ ನಕ್ಸಲೀಯರೆಂಬ ಹಣೆಪಟ್ಟಿ ಕಟ್ಟಿ ಅವರನ್ನು ಬಂಧಿಸಿ ಇಲ್ಲವೆ ಸಾಯಿಸಿ ಅದನ್ನೇ ಸಾಧನೆ ಎಂದು ಬಿಂಬಿಸುವುದನ್ನು ಪೊಲೀಸರು ಮಾಡುತ್ತಲೇ ಬಂದಿದ್ದಾರೆ. ರಾಜ್ಯದ ಪಶ್ಚಿಮಘಟ್ಟ ಪ್ರದೇಶದಲ್ಲಿ ನಕ್ಸಲೀಯರ ಹುಟ್ಟಿಗೆ ಕಾರಣವಾಗಿರುವುದು ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾದ ಅರಣ್ಯ ಪ್ರದೇಶದಿಂದ ಸ್ಥಳೀಯರನ್ನು ಒಕ್ಕಲೆಬ್ಬಿಸುವ ಸರ್ಕಾರದ ಪ್ರಯತ್ನ. ಜನರ ಮನವೊಲಿಸಿ ನ್ಯಾಯಬದ್ಧ ಪರಿಹಾರ ಮತ್ತು ಸೂಕ್ತ ಪುನರ್ವಸತಿಯ ಮೂಲಕ ಸೂಕ್ಷ್ಮವಾಗಿ ನಿರ್ವಹಿಸಬೇಕಾಗಿರುವ ಈ ಕೆಲಸವನ್ನು ಸರ್ಕಾರ, ಅಧಿಕಾರದ ದಂಡಹಿಡಿದು ಬಲಾತ್ಕಾರದಿಂದ ಮಾಡಲು ಹೊರಟಿದೆ.ಇದರಿಂದಾಗಿ ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳೆದುಕೊಂಡಿರುವ ಸಮುದಾಯ ಸಹಜವಾಗಿಯೇ ಪ್ರತಿರೋಧಕ್ಕೆ ಬೇರೆ ಮಾರ್ಗಗಳನ್ನು ಹುಡುಕುವಂತಾಗಿದೆ. ಈ ಅವಕಾಶವನ್ನು ಬಳಸಿಕೊಂಡು ನಕ್ಸಲೀಯರು ಪ್ರವೇಶಿಸಿದ್ದಾರೆ. ಪೊಲೀಸ್ ಬಲದ ಮೂಲಕ ನಕ್ಸಲೀಯರ ನಿಯಂತ್ರಣ ಮಾಡುವುದರ ಜತೆಯಲ್ಲಿಯೇ ಅವರ ಹುಟ್ಟು ಮತ್ತು ಬೆಳವಣಿಗೆಗೆ ಕಾರಣವಾಗಿರುವ ಅಂಶಗಳನ್ನು ಗುರುತಿಸಿ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸರ್ಕಾರ ಪ್ರಯತ್ನಿಸಬೇಕು. ಹಲವು ಮುಖಗಳ ಈ ಸಮಸ್ಯೆಯನ್ನು ಕೇವಲ ಎನ್‌ಕೌಂಟರ್‌ಗಳ ಮೂಲಕವಾಗಲೀ ಇಲ್ಲವೇ ನಕ್ಸಲೀಯರ ಬೆಂಬಲಿಗರೆಂಬ ಹಣೆಪಟ್ಟಿ ಕಟ್ಟಿ ಸಾಮಾನ್ಯ ಜನರ ಮೇಲೆ ದೌರ್ಜನ್ಯ ಎಸಗುವುದರಿಂದಾಗಲಿ ಪರಿಹರಿಸಲು ಸಾಧ್ಯ ಇಲ್ಲ ಎನ್ನುವುದನ್ನು ಸರ್ಕಾರ ಮೊದಲು ಅರಿತುಕೊಳ್ಳಬೇಕು. ಮಾಡಿರುವ ತಪ್ಪನ್ನು ತಿದ್ದಿಕೊಳ್ಳಲು ಪೊಲೀಸರಿಗೆ ಈಗಲೂ ಅವಕಾಶ ಇದೆ. ಸಾರ್ವಜನಿಕ ಪ್ರತಿರೋಧದ ಕಟ್ಟೆ ಒಡೆಯುವ ಮೊದಲೇ ಬಂಧನದಲ್ಲಿಟ್ಟಿರುವ ವಿದ್ಯಾರ್ಥಿಯನ್ನು ಬಿಡುಗಡೆಗೊಳಿಸಿ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.