ಮಂಗಳವಾರ, ಏಪ್ರಿಲ್ 13, 2021
29 °C

ನಕ್ಸಲೀಯರು ಎಂದರೆ ಭಯೋತ್ಪಾದಕರಲ್ಲ!

ರವೀಂದ್ರ ಭಟ್ಟ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  ಸಕಲೇಶಪುರ ತಾಲ್ಲೂಕಿನ ಬಿಸಿಲೆ ಮೀಸಲು ಅರಣ್ಯದ ಅಂಚಿನಲ್ಲಿರುವ ಪುಟ್ಟ ಗ್ರಾಮ ಹೊನ್ನಾಟ್ಳು. ಅಲ್ಲಿ ಇರೋದು ಕೇವಲ 13 ಮನೆಗಳು. ಆನೆ ಕಾಟ ವಿಪರೀತ. ಜೊತೆಗೆ ಕಾಡೆಮ್ಮೆ, ಕಾಡು ಕೋಣ, ಕಾಡು ಹಂದಿಗಳು ಅಲ್ಲಿಗೆ ಬರುವುದು ಅಪರೂಪವೇನಲ್ಲ. ಬೃಹತ್ ಕಾಳಿಂಗ ಸರ್ಪವೊಂದು ಇದೇ ಗ್ರಾಮದಲ್ಲಿ ಹಲವಾರು ದಿನಗಳು ಉಳಿದುಕೊಂಡು ಸುದ್ದಿ ಮಾಡಿತ್ತು. ಕಾಡಿನಿಂದ ಕೇವಲ ಪ್ರಾಣಿಗಳು ಮಾತ್ರ ಬರುತ್ತಿದ್ದ ಈ ಗ್ರಾಮಕ್ಕೆ ಈಗ ನಕ್ಸಲರೂ ಬರುತ್ತಿದ್ದಾರೆ.ಇತ್ತೀಚೆಗೆ ಹೊನ್ನಾಟ್ಳು ಪ್ರಕಾಶ್ ಅವರ ಮನೆಗೆ ಮೂವರು ನಕ್ಸಲರು ಬಂದಿದ್ದರು. ಮನೆಯಲ್ಲಿ ಕುಳಿತು ಪಟ್ಟಾಂಗ ಹೊಡೆದರು. ಚಹಾ ಕುಡಿದರು. ಒಂದಿಷ್ಟು ಅಕ್ಕಿ, ಎಣ್ಣೆ ಮತ್ತಿತರ ಸಾಮಗ್ರಿಗಳನ್ನು ಬೇಡಿ ಪಡೆದುಕೊಂಡು ಹೋದರು. ತಮ್ಮ ಜೊತೆಗೆ ಇರುವವರಿಗಾಗಿ ಊಟವನ್ನೂ ಕಟ್ಟಿಕೊಂಡರು. ಅವರು ಯಾರನ್ನೂ ಬೆದರಿಸಲಿಲ್ಲ. ಕೋವಿಯನ್ನು ಎತ್ತಿ ಗುಂಡು ಹಾರಿಸಲಿಲ್ಲ. ಅದಕ್ಕೇ ಪ್ರಕಾಶಣ್ಣ ಹೇಳುವುದು ಹೀಗೆ `ನಕ್ಸಲರೆಂದರೆ ಭಯೋತ್ಪಾದಕರಲ್ಲ.~`ಆ ದಿನ ಸಂಜೆ ಸುಮಾರು 6 ಗಂಟೆ ಸಮಯ. ನಾನು ನನ್ನ ಮನೆಯ ಹಿಂಭಾಗದಲ್ಲಿ ನಿಂತಿದ್ದೆ. ಕಾಡಿನಿಂದ ಮೂವರು ನಮ್ಮ ಮನೆಯ ಕಡೆಗೇ ಬರುವುದು ಕಾಣಿಸಿತು. ಅವರಲ್ಲಿ ಇಬ್ಬರು ಕಂದು ಹಸಿರು ಬಣ್ಣದ ಬಟ್ಟೆ ಧರಿಸಿದ್ದರು.ಮತ್ತೊಬ್ಬರದು ಸಮವಸ್ತ್ರ ಏನಲ್ಲ. ಕೈಯಲ್ಲಿ ಗನ್ ಹಿಡಿದುಕೊಂಡಿದ್ದರು. ಮೈಗೆ ಬುಲೆಟ್‌ಗಳ ಹಾರ ಹಾಕಿಕೊಂಡಿದ್ದರು. ಅವರನ್ನು ನೋಡಿದ ತಕ್ಷಣವೇ ನನಗೆ ಅವರು ಯಾರು ಎನ್ನುವುದು ಗೊತ್ತಾಯಿತು.

ಕೈ ಕಾಲುಗಳು ನಡುಗತೊಡಗಿದವು. ಬಾಯಿ ಆರಿತು. ನಾನು ನಿಂತಲ್ಲೇ ನಿಂತು ಬಿಟ್ಟೆ. ಒಣಗಿದ ನನ್ನ ಬಾಯಿಂದ ಶಬ್ದಗಳು ಹೊರಕ್ಕೆ ಬರುತ್ತಿರಲಿಲ್ಲ. ಆದರೂ ಧೈರ್ಯ ಮಾಡಿ ನಮಸ್ಕಾರ ಅಣ್ಣ ಎಂದೆ. ಅವರು ನಮಸ್ಕಾರ ಹೇಳಿದರು~ ಎಂದು ಪ್ರಕಾಶ್ ಅಂದಿನ ದಿನಕ್ಕೆ ಜಾರಿದರು.`ನಾನೇ ಅವರನ್ನು ಮನೆಗೆ ಕರೆತಂದೆ. ಇಬ್ಬರು ಮನೆಯ ಒಳಕ್ಕೆ ಬಂದರು. ಒಬ್ಬ ಮಾತ್ರ ಕೈಯಲ್ಲಿ ಗನ್ ಹಿಡಿದುಕೊಂಡು ಮನೆಯ ಬಾಗಿಲಿನಲ್ಲಿಯೇ ಕಾವಲು ನಿಂತ. ಅತ್ತ ಇತ್ತ ಚುರುಕಾಗಿ ನೋಡುತ್ತಿದ್ದ. ಮನೆಯ ಒಳಕ್ಕೆ ಬಂದು ಕುಳಿತವರಲ್ಲಿ ಒಬ್ಬ ವಿಕ್ರಂ ಗೌಡ ಎನ್ನುವುದು ಗೊತ್ತಾಯಿತು. ಇನ್ನೊಬ್ಬ ತಮಿಳು ಮಾತನಾಡುತ್ತಿದ್ದ. ಅವರ ಬಳಿ ಲ್ಯಾಪ್‌ಟಾಪ್ ಇತ್ತು. ಮೊಬೈಲ್ ಬ್ಯಾಟರಿ ಚಾರ್ಜ್ ಮಾಡಿ ಕೊಡಲು ಹೇಳಿದರು. ಅವರು ಮೊಬೈಲ್ ಕೊಡಲಿಲ್ಲ. ಬ್ಯಾಟರಿಯನ್ನು ಮಾತ್ರ ತೆಗೆದುಕೊಟ್ಟರು. ಆದರೆ ನನ್ನ ಬಳಿ ಮೊಬೈಲ್ ಇರಲಿಲ್ಲ. ಅದಕ್ಕೇ ಚಾರ್ಜ್ ಮಾಡಿಕೊಡಲು ಆಗಲಿಲ್ಲ.~ಬಂದವನು ವಿಕ್ರಂ ಗೌಡ ಎನ್ನುವುದು ನಿಮಗೆ ಹೇಗೆ ಗೊತ್ತಾಯಿತು ಎಂದು ಪ್ರಶ್ನೆ ಮಾಡಿದರೆ, `ನಾನು ಅವನ ಫೋಟೋವನ್ನು ನೋಡಿದ್ದೇನೆ. ಪತ್ರಿಕೆಯಲ್ಲಿ ಬಂದಿತ್ತು. ಅಲ್ಲದೆ ನಮ್ಮೂರಲ್ಲೂ ಪೊಲೀಸರು ಕರಪತ್ರ ಅಂಟಿಸಿದ್ದಾರೆ. ಅದರಲ್ಲಿಯೂ ಅವನ ಚಿತ್ರ ಇತ್ತು. ಆದರೆ ಈಗ ವಿಕ್ರಂ ಗೌಡ ಫ್ರೆಂಚ್ ಗಡ್ಡ ಬಿಟ್ಟಿದ್ದಾನೆ. ಮತ್ತೆ ಅವನ ಮಾತು ಪಕ್ಕಾ ಹೆಬ್ರಿ ಕನ್ನಡ ಸಾರ್~ ಎಂದು ಪ್ರಕಾಶ್ ಹೇಳುತ್ತಾರೆ.`ನಕ್ಸಲರು ನಮ್ಮ ಮನೆಯ ಹಜಾರದಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದಾಗ ನನ್ನ ಭಯ ಕೊಂಚ ಕಡಿಮೆ ಆಯಿತು. ಅಮ್ಮ ಚಹಾ ಮಾಡಿಕೊಟ್ಟಳು. ಎಲ್ಲರೂ ಕುಡಿದರು. ಕೈಯಲ್ಲಿದ್ದ ಗನ್ ಅನ್ನು ಆತ ಕೆಳಕ್ಕೆ ಇಟ್ಟು ಆರಾಮ್ ಆಗಿ ಕುಳಿತುಕೊಂಡು ಮಾತನಾಡುತ್ತಿದ್ದ. ನಮ್ಮ ಗ್ರಾಮದ ಸಮಸ್ಯೆ, ಆನೆ ಹಾವಳಿ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದರು. ಕೆಳಕ್ಕೆ ಇಟ್ಟಿದ್ದ ಗನ್ ಮುಟ್ಟಿ ಒಮ್ಮೆ ಅದನ್ನು ಎತ್ತಿ ನೋಡಲೇ ಎಂದು ಕೇಳಿದೆ.ಅದಕ್ಕೆ ಆತ ಒಪ್ಪಿದ. ಸುಮ್ಮನೆ ಎತ್ತಿ ನೋಡಿದೆ. ಸುಮಾರು 10ರಿಂದ 15 ಕೆ.ಜಿ ತೂಕ ಇತ್ತು. ಅತ್ಯಾಧುನಿಕ ಗನ್ ಅದು. ನಮ್ಮ ಪೊಲೀಸರ ಹತ್ತಿರ ಇರುವ ಗನ್‌ಗಿಂತ ಅದು ಚೆನ್ನಾಗಿದೆ. ಪೊಲೀಸರು ಒಂದು ಗುಂಡು ಹಾರಿಸುವುದರೊಳಗೆ ಅವರು 50 ಗುಂಡು ಹಾರಿಸುತ್ತಾರೆ ಸಾರ್~ ಎಂದು ಪ್ರಕಾಶ್ ಅರ್ಧ ಹತಾಶೆ ಇನ್ನರ್ಧ ಗತ್ತಿನಲ್ಲಿ ಹೇಳಿದರು.`ಅವರು ನಮ್ಮ ಮನೆಯಲ್ಲಿ ಊಟ ಮಾಡಲಿಲ್ಲ. ಊಟವನ್ನು ಕಟ್ಟಿಸಿಕೊಂಡು ಹೋದರು. ಜೊತೆಗೆ ಸುಮಾರು 30 ಕೆ.ಜಿ ಅಕ್ಕಿ. ಒಂದಿಷ್ಟು ಎಣ್ಣೆ, ಬೇಳೆ ಎಲ್ಲ ಗಂಟು ಕಟ್ಟಿಕೊಂಡು ಹೋದರು. ಅದನ್ನೂ ಅವರು ಬೆದರಿಸಿ ಕೇಳಲಿಲ್ಲ. ಅಕ್ಕಿ ಇದ್ದರೆ ಕೊಡಿ ಎಂದರು.ಆಗ ನಾನು, `ನಾವು ಬೆಳೆಯುವ ಬತ್ತ ಎಲ್ಲಾ ಆನೆಗಳ ಪಾಲಾಗುತ್ತದೆ. ನಾವೂ ಅಕ್ಕಿಯನ್ನು ಅಂಗಡಿಯಿಂದ ತಂದೇ ಊಟ ಮಾಡುತ್ತೇವೆ~ ಎಂದೆ. ಅದಕ್ಕೆ ಅವರು `ನಾವು ನಿಮ್ಮ ಪರವಾಗಿ ಕೆಲಸ ಮಾಡುತ್ತಿದ್ದೇವೆ. ನೀವು ಬೆಂಬಲ ಕೊಡಬೇಕು~ ಎಂದು ಕೋರಿದರು. ನಾನು ಅಕ್ಕಿ, ಎಣ್ಣೆಕೊಟ್ಟೆ~ ಎಂದು ಹೇಳಿದರು.`ಅದನ್ನು ಎತ್ತಿಕೊಂಡು ಹೋಗುವಾಗ ಅವರಲ್ಲಿ ಒಬ್ಬ ಪಾಪ ತುಂಬ ಬಡವರು. ಹಣ ಕೊಟ್ಟು ಹೋಗೋಣ ಎಂದ. ಆಗ ವಿಕ್ರಂ ಗೌಡ ಕಿಸೆಯಿಂದ ಹಣ ತೆಗೆದ. ಅದರಲ್ಲಿ ಐನೂರು, ಸಾವಿರದ ನೋಟುಗಳಿದ್ದವು. ಹುಡುಕಿ ತೆಗೆದು ನೂರು ರೂಪಾಯಿಯ ಎರಡು ನೋಟು ಕೊಟ್ಟು ನಾವು ಇಲ್ಲಿಗೆ ಬಂದಿದ್ದನ್ನು ಯಾರಿಗೂ ಹೇಳಬೇಡಿ ಎಂದು ಹೇಳಿ ಬಂದ ದಾರಿಯಲ್ಲಿಯೇ ಕತ್ತಲೆಯಲ್ಲಿ ಮಾಯವಾದರು~.ಪ್ರಕಾಶ್ ತಮ್ಮ ಅನುಭವ ಬಿಚ್ಚಿಟ್ಟು ಸುಮ್ಮನಾದರು. ಅವರ ಭಯ ನಕ್ಸಲೀಯರದ್ದಲ್ಲ. ಕಾಡಾನೆಗಳದ್ದು. ಆನೆ ಕಾರಿಡಾರಿನದ್ದು.(ನಾಳೆಯ ಸಂಚಿಕೆಯಲ್ಲಿ ಭಾಗ -3)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.