ನಕ್ಸಲೀಯರ ಬೇಡಿಕೆಗೆ ಮಣಿಯುವ ಸಾಧ್ಯತೆ

7

ನಕ್ಸಲೀಯರ ಬೇಡಿಕೆಗೆ ಮಣಿಯುವ ಸಾಧ್ಯತೆ

Published:
Updated:

ಭುವನೇಶ್ವರ (ಪಿಟಿಐ): ನಕ್ಸಲೀಯರಿಂದ ಅಪಹೃತರಾಗಿರುವ ಒಡಿಶಾದ ಮಾಲ್ಕನ್‌ಗಿರಿ ಜಿಲ್ಲಾಧಿಕಾರಿ ಆರ್.ವಿ. ಕೃಷ್ಣ ಹಾಗೂ ಎಂಜಿನಿಯರ್ ಪವಿತ್ರ ಮಝಿ ಅವರ ಸುರಕ್ಷಿತ ಬಿಡುಗಡೆ ಪ್ರಯತ್ನವಾಗಿ ರಾಜ್ಯ ಸರ್ಕಾರ ಮತ್ತು ನಕ್ಸಲ್ ಸೂಚಿತ ಸಂಧಾನಕಾರರ ನಡುವಿನ ಮೊದಲ ಸುತ್ತಿನ ಮಾತುಕತೆ ಭಾನುವಾರ ಇಲ್ಲಿ ಆರಂಭವಾಯಿತು.ಕಳೆದ ಐದು ದಿನಗಳಿಂದ ಬಂಡುಕೋರರ ವಶದಲ್ಲಿರುವ ಅಧಿಕಾರಿಗಳ ಬಿಡುಗಡೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಕಂಡುಬಂದಿದೆ. ಈ ನಡುವೆ, ಬಿಕ್ಕಟ್ಟು ಅಂತ್ಯಗೊಳಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರ ಬಂಡುಕೋರರ ಬೇಡಿಕೆಗೆ ಮಣಿದು ಕೆಲ ನಕ್ಸಲೀಯ ಪ್ರಮುಖರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ, ವಿವಿಧ ಜೈಲುಗಳಲ್ಲಿರುವ ಬಂಡುಕೋರ ನಾಯಕರ ಮೇಲಿನ ಆರೋಪಗಳನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.ಆಂಧ್ರ ಪ್ರದೇಶ ಮೂಲದ ಸಂಧಾನಕಾರರಾದ ಪ್ರೊ. ಹರ್‌ಗೋಪಾಲ್, ಪ್ರೊ. ಸೋಮೇಶ್ವರ್ ರಾವ್, ಸರ್ಕಾರದ ಪರವಾಗಿ ಒಡಿಶಾದ ಗೃಹ ಕಾರ್ಯದರ್ಶಿ ಯು.ಎನ್.ಬೆಹೇರ ಮತ್ತು ಪಂಚಾಯತ್ ರಾಜ್ ಕಾರ್ಯದರ್ಶಿ ಎಸ್.ಎನ್.ತ್ರಿಪಾಠಿ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.ಇದೇ 16ರಂದು ಚಿತ್ರಕೊಂಡ ಪ್ರದೇಶದಿಂದ ಅಪಹರಣಕ್ಕೆ ಒಳಗಾದ ಅಧಿಕಾರಿಗಳಿಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ಮಾತುಕತೆಯ ಬಳಿಕ ಬೆಹೇರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಾತುಕತೆಯ ಭಾಗವಾಗಿ ಕೆಲವರನ್ನು ಮಾಲ್ಕನ್‌ಗಿರಿಗೆ ಕಳುಹಿಸುವ ಬಗ್ಗೆ ಇನ್ನಷ್ಟೇ ನಿರ್ಧರಿಸಬೇಕಿದೆ ಎಂದಿರುವ ಅವರು, ಆರೋಗ್ಯ ಸಮಸ್ಯೆಯಿಂದ ಸಂಧಾನಕಾರರು ಜಿಲ್ಲೆಗೆ ತೆರಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.‘ಬಿಕ್ಕಟ್ಟನ್ನು ಕೊನೆಗೊಳಿಸಲು ಜಿಲ್ಲಾಧಿಕಾರಿ ಮತ್ತು ಎಂಜಿನಿಯರ್ ಅವರ ಬಿಡುಗಡೆ ಮಾರ್ಗಗಳನ್ನು ನಾವು ಹುಡುಕುತ್ತಿದ್ದೇವೆ. ಅದಕ್ಕೆ ಇನ್ನಷ್ಟು ಸಮಯಾವಕಾಶ ಬೇಕಾಗಬಹುದು. ಮಾತುಕತೆ ಈಗಷ್ಟೇ ಆರಂಭವಾಗಿದೆ’ ಎಂದು ಹರ್‌ಗೋಪಾಲ್ ಹೇಳಿದ್ದಾರೆ.ಬಿಡುಗಡೆಗೆ ಒತ್ತಾಯ: ಒಡಿಶಾ ಮತ್ತು ಆಂಧ್ರದಲ್ಲಿ ಸುಮಾರು 100 ಪ್ರಕರಣಗಳನ್ನು ಎದುರಿಸುತ್ತಿರುವ ಗಂಟಿ ಪ್ರಸಾದಂ ಅವರಂತಹ ಕೆಲ ಪ್ರಮುಖ ನಾಯಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸಂಧಾನಕಾರರು ಒತ್ತಾಯಿಸಿದ್ದಾರೆ. ಸಂಧಾನದ ಮಾತುಕತೆಯಲ್ಲಿ ಪ್ರಸಾದಂ ಅವರು ಮಹತ್ವದ ಪಾತ್ರ ವಹಿಸಬಹುದು ಎಂದು ಹರ್‌ಗೋಪಾಲ್ ಈ ಮುನ್ನ ಹೇಳಿದ್ದರು. ಇದಕ್ಕೆ ಪೂರಕವಾದ ಬೆಳವಣಿಗೆಯೊಂದರಲ್ಲಿ, ಪ್ರಸ್ತುತ ಆಂಧ್ರ ಪ್ರದೇಶದ ಜೈಲಿನಲ್ಲಿರುವ ಪ್ರಸಾದಂ ಅವರನ್ನು ಒಡಿಶಾ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಲುವಾಗಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.ವ್ಯಾಪಕ ಖಂಡನೆ: ಈ ನಡುವೆ, ಅಧಿಕಾರಿಗಳ ಅಪಹರಣಕ್ಕೆ ಹಲವು ವಲಯಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅವರ ಸುರಕ್ಷಿತ ಬಿಡುಗಡೆಗೆ ಆಗ್ರಹಿಸಿ ರಾಜ್ಯದಾದ್ಯಂತ ರ್ಯಾಲಿಗಳು ಮುಂದುವರಿದಿವೆ. ಆದಿವಾಸಿಗಳ ತಂಡವೊಂದು ಚಿತ್ರಕೊಂಡ ಪ್ರದೇಶದಲ್ಲಿ ಭಾನುವಾರ ಮರಗಳನ್ನು ಕೆಳಗುರುಳಿಸಿ ರಸ್ತೆತಡೆ ನಡೆಸಿದೆ.ಅಪಹೃತರ ಸುರಕ್ಷಿತ ಬಿಡುಗಡೆಗೆ ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಒಡಿಶಾ ವಿಧಾನಸಭೆ ಶನಿವಾರ ಅಂಗೀಕರಿಸಿದೆ.ನಕ್ಸಲೀಯರ ಏಳು ಅಂಶಗಳ ಬೇಡಿಕೆಯಲ್ಲಿ ಬಿಎಸ್‌ಎಫ್ ವಾಪಸಾತಿ, ಜೈಲಿನಲ್ಲಿರುವ 700 ಆದಿವಾಸಿ ನಕ್ಸಲರ ಬಿಡುಗಡೆ, ಆಂಧ್ರಪ್ರದೇಶದ ಪೋಲಾವರಂ ಬಹು ಉದ್ದೇಶಿತ ಅಣೆಕಟ್ಟು ಯೋಜನೆಗೆ ತಡೆ ಸೇರಿವೆ. ಆದರೆ ಇವೆಲ್ಲಕ್ಕಿಂತಲೂ ಹೆಚ್ಚಾಗಿ ಪ್ರಮುಖ ನಾಯಕರನ್ನು ಜೈಲಿನಿಂದ ಹೊರತರುವುದು ಅವರ ಗುರಿ ಎಂದು ಹೇಳಲಾಗಿದೆ.ರಾಜ್ಯದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಹೀಗೆ ಅಪಹರಣಕ್ಕೆ ಒಳಗಾಗಿರುವುದು ಇದೇ ಮೊದಲು. ಬೇಡಿಕೆ ಈಡೇರಿಕೆಗೆ ಎರಡು ದಿನಗಳ ಗಡುವು ನೀಡಿದ್ದ ನಕ್ಸಲೀಯರು ಶುಕ್ರವಾರ ಸಂಜೆ ಈ ಗಡುವು ಮುಗಿಯುತ್ತಿದ್ದಂತೆಯೇ ಅದನ್ನು 48 ಗಂಟೆಗಳಿಗೆ ವಿಸ್ತರಿಸಿದ್ದರು. ಮೊದಲ ಸುತ್ತಿನ ಮಾತುಕತೆ ಶನಿವಾರ ರಾತ್ರಿಯೇ ನಿಗದಿ ಆಗಿತ್ತು. ಆದರೆ ಸಂಧಾನಕರರು ಬರುವುದು ತಡವಾದ್ದರಿಂದ ಅದನ್ನು ಭಾನುವಾರಕ್ಕೆ ಮುಂದೂಡಲಾಗಿತ್ತು.ಜಾಮೀನು ನಿರಾಕರಣೆ

ಕೋರಾಪಟ್ (ಪಿಟಿಐ): ಅಪಹೃತ ಜಿಲ್ಲಾಧಿಕಾರಿ ಆರ್.ವಿ.ಕೃಷ್ಣ ಬಿಡುಗಡೆಗೆ ಪ್ರತಿಯಾಗಿ ಮಾವೊವಾದಿ ಮುಖಂಡ ಗಂಟಿ ಪ್ರಸಾದಂ ಬಿಡುಗಡೆಗೆ ನಕ್ಸಲೀಯರು ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಪ್ರಸಾದಂ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು,  ಪ್ರಸಾದಂ ಅವರನ್ನು ಕೋರಾಪಟ್‌ನ ಜೈಲಿಗೆ ಕಳುಹಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry