ಭಾನುವಾರ, ಜನವರಿ 19, 2020
23 °C
ದಕ್ಷಿಣ ವಲಯ ಐಜಿಪಿ ಡಾ.ಕೆ. ರಾಮಚಂದ್ರರಾವ್‌ ಭರವಸೆ

ನಕ್ಸಲ್‌ ನಿಗ್ರಹ ಘಟಕ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಜಿಲ್ಲೆಯ ಸಕಲೇಶಪುರ ಭಾಗದಲ್ಲಿ ಕಳೆದ ವರ್ಷ ಒಂದೆರಡು ಬಾರಿ ನಕ್ಸಲರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲ್ಲಿ ನಕ್ಸಲ್‌ ನಿಗ್ರಹ ಘಟಕವೊಂದನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ’ ಎಂದು ದಕ್ಷಿಣ ವಲಯ ಐಜಿಪಿ ಡಾ. ಕೆ. ರಾಮಚಂದ್ರರಾವ್‌ ತಿಳಿಸಿದರು.ಪೊಲೀಸ್‌ ಇಲಾಖೆಯವರು ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ­ದಲ್ಲಿ ಟ್ರಾಫಿಕ್‌ ವಾರ್ಡನ್‌ ವ್ಯವಸ್ಥೆ ಉದ್ಘಾಟಿಸಿದ ಬಳಿಕ ಅವರು ಪತ್ರಕರ್ತರೊಡನೆ ಮಾತನಾಡಿದರು.‘ನಕ್ಸಲರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಚೆಗೆ ಕೇರಳದಲ್ಲಿ ಸಭೆ ಆಯೋಜಿಸಲಾಗಿತ್ತು. ಅಲ್ಲಿ ಕೆಲವು ಸಲಹೆ ಸೂಚನೆಗಳನ್ನು ನೀಡಲಾಗಿದ್ದು, ಅದರಂತೆ ನಕ್ಸಲರ ನಿಗ್ರಹಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.ಸಕಲೇಶಪುರದಲ್ಲಿ ತಲಾ ಒಬ್ಬ ಪಿಎಸ್‌ಐ ಹಾಗೂ ಒಂಬತ್ತು ಕಾನ್‌ಸ್ಟೆಬಲ್‌ಗಳನ್ನು ಹೊಂದಿರುವ ಎರಡು ತಂಡಗಳನ್ನು ರಚಿಸ­ಲಾಗು­ವುದು. ಇವರಿಗೆ ಎ.ಕೆ. 47ರೀತಿಯ ಅತ್ಯಾಧುನಿಕ ಶಸ್ತ್ರಾಸ್ತ್ರ, ಗುಂಡು ನಿರೋಧಕ ಜಾಕೆಟ್‌, ಹೆಲ್ಮೆಟ್‌ ಹಾಗೂ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗುವುದು ಎಂದರು.‘ಜಿಲ್ಲೆಯಲ್ಲಿ ಪೊಲೀಸ್‌ ವ್ಯವಸ್ಥೆಗೆ ಕೆಲವು ಸುಧಾರಣೆಗಳಾಗಬೇಕು. ಮೀಸಲು ಪಡೆಗೆ ಇನ್ನೂ 300 ಸಿಬ್ಬಂದಿ ಬೇಕು, ಚನ್ನರಾಯಪಟ್ಟಣ ಹಾಗೂ ಸಕಲೇಶಪುರಗಳಲ್ಲಿ ಸಂಚಾರಿ ಪೊಲೀಸ್‌ ಠಾಣೆಗಳು ಬೇಕಾಗಿದ್ದು ಈ ಎಲ್ಲ ವಿಚಾರಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.ಇದಕ್ಕೂ ಮೊದಲು ಅವರು ಜಿಲ್ಲಾ ಪೊಲೀಸರು ಹಲವು ಅಪರಾಧ ಪ್ರಕರಣಗಳನ್ನು ಭೇದಿಸಿ ಆರೋಪಿ­ಗಳಿಂದ ವಶಪಡಿಸಿಕೊಂಡಿದ್ದ ಸುಮಾರು 1,21,50,805 ರೂಪಾಯಿ ಮೌಲ್ಯದ ಸೊತ್ತನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸಿದರು.ಹಾಸನ ಪೊಲೀಸರ ಸಾಧನೆಯನ್ನು ಶ್ಲಾಘಿಸಿದ ರಾಮಚಂದ್ರ ರಾವ್‌, ‘ಕಳವು ಪ್ರಕರಣ ಪತ್ತೆಯಲ್ಲಿ ಹಾಸನದ ಪೊಲೀಸರು ಶೇ 70ರಷ್ಟು ಯಶಸ್ಸು ದಾಖಲಿಸಿದ್ದು, ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ಐದು ತಿಂಗಳಲ್ಲಿ ಪೊಲೀಸರು ಒಟ್ಟು 43 ಪ್ರಕರಣಗಳನ್ನು ಭೇದಿಸಿ 47 ಆರೋಪಿಗಳನ್ನು ಬಂಧಿಸಿದ್ದಾರೆ. ಲಕ್ಷಾಂತರ ರೂಪಾಯಿಯ ಚಿನ್ನ, ಬೆಳ್ಳಿ ಆಭರಣ­ಗಳು, ಬೈಕ್‌ಗಳು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ಒಪ್ಪಿಸಿರುವುದು ಶ್ಲಾಘನೀಯ’ ಎಂದರು.

ಪ್ರತಿಕ್ರಿಯಿಸಿ (+)