ನಕ್ಸಲ್ ನಿಗ್ರಹಕ್ಕೆ ಅಭಿವೃದ್ಧಿಯೇ ಮದ್ದು

7

ನಕ್ಸಲ್ ನಿಗ್ರಹಕ್ಕೆ ಅಭಿವೃದ್ಧಿಯೇ ಮದ್ದು

Published:
Updated:

ಬೆಂಗಳೂರು: ನಕ್ಸಲರೊಂದಿಗೆ ಸಂಪರ್ಕವಿದೆ ಎಂಬ ಆರೋಪದ ಮೇಲೆ ಬಂಧಿತರಾಗಿರುವ ವಿದ್ಯಾರ್ಥಿ ವಿಠಲ್ ಮಲೆಕುಡಿಯ ಹಾಗೂ ಅವರ ತಂದೆಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಪುರಭವನದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.`ವಿಠಲ್, ಡಿವೈಎಫ್‌ಐ ಸಂಘಟನೆಯ ಕಾರ್ಯಕರ್ತನಾಗಿದ್ದನೇ ಹೊರತು ಆತ ನಕ್ಸಲರ ಸಂಪರ್ಕ ಹೊಂದಿರಲಿಲ್ಲ. ಯಾವುದೇ ಪುರಾವೆ ಇಲ್ಲದೇ ವಿಠಲ್ ಹಾಗೂ ಆತನ ತಂದೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿರುವುದು ಖಂಡನೀಯ. ಆತ ವಿದ್ಯಾರ್ಥಿಯಾಗಿದ್ದು ಸಹಪಾಠಿಗಳೊಂದಿಗೆ ಛಾಯಾಚಿತ್ರ ತೆಗೆಸಿಕೊಂಡಿರುತ್ತಾನೆ.

 

ಆತನ ಸಹಪಾಠಿಗಳು ಈಗ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿರಬಹುದು. ಆ ಛಾಯಾಚಿತ್ರ ನೋಡಿ ವಿಠಲ್ ನಕ್ಸಲರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಆತನನ್ನು ಬಂಧಿಸಿರುವುದು ಯಾವ ನ್ಯಾಯ~ ಎಂದು ರಾಜ್ಯಸಭೆಯ ಮಾಜಿ ಸದಸ್ಯೆ ಬೃಂದಾ ಕಾರಟ್ ಆಕ್ರೋಶ ವ್ಯಕ್ತಪಡಿಸಿದರು.`ಹಿಂದುಳಿದ ವರ್ಗದವರ ಹಾಗೂ ಅರಣ್ಯವಾಸಿಗಳ ಹಕ್ಕುಗಳನ್ನು ಸರ್ಕಾರ ಕಿತ್ತುಕೊಳ್ಳುತ್ತಿರುವುದರಿಂದ ನಕ್ಸಲ್ ಚಟುವಟಿಕೆಗಳು ಹೆಚ್ಚುತ್ತಿವೆ. ಆದಿವಾಸಿಗಳ ಅಭಿವೃದ್ಧಿಗೆ ಕ್ರಮ ಕೈಗೊಂಡರೆ ನಕ್ಸಲ್ ಚಟುವಟಿಕೆಗಳು ಕ್ರಮೇಣವಾಗಿ ಕಡಿಮೆಯಾಗುತ್ತವೆ~ ಎಂದು ಅವರು ಹೇಳಿದರು.ಡಿವೈಎಫ್‌ಐ ಸಂಘಟನೆಯ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರ್‌ಮೂರ್ತಿ ಮಾತನಾಡಿ, `ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಆರೋಪದ ಮೇಲೆ ಈ ಹಿಂದೆ ವಿಠಲ್‌ನ ಸಂಬಂಧಿಕರೊಬ್ಬರನ್ನು ಎನ್‌ಕೌಂಟರ್ ಮಾಡಲಾಗಿತ್ತು. ಈಗ ವಿಠಲ್ ಮಲೆಕುಡಿಯನ ಮೇಲೆ ಅದೇ ರೀತಿಯ ಆರೋಪ ಮಾಡಲಾಗುತ್ತಿದೆ. ತಂದೆ ಮಗನನ್ನು ಬಂಧಿಸಿ ನಕ್ಸಲರ ಜತೆ ಜೈಲಿನಲ್ಲಿ ಇಟ್ಟಿದ್ದು ಆತನ ಜೀವನಕ್ಕೆ ಪೆಟ್ಟು ಬೀಳುವ ಆತಂಕ ಎದುರಾಗಿದೆ~ ಎಂದರು.ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, `ಇದೊಂದು ಗಂಭೀರ ಪ್ರಕರಣವಾಗಿದ್ದು, ನಿಸ್ಪಕ್ಷಪಾತವಾಗಿ ತನಿಖೆ ನಡೆಸಿ ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.`ನನ್ನ ಮಗ ಯಾವುದೇ ನಕ್ಸಲರ ಜತೆ ಹೋದವನಲ್ಲ. ವಿನಾ ಕಾರಣ ಆರೋಪ ಮಾಡಿ ನನ್ನ ಗಂಡ ಹಾಗೂ ಮಗನನ್ನು ಜೈಲಿಗೆ ಕಳಿಸಲಾಗಿದೆ. ಮನೆಗೆ ಬಂದ ಪೊಲೀಸರು ನನ್ನ ಗಂಡನ ಕಾಲಿಗೆ ಹೊಡೆದು ಅವರ ಕಾಲನ್ನು ಮುರಿದಿದ್ದಾರೆ~ ಎಂದು ಪ್ರತಿಭಟನೆಯಲ್ಲಿ ಭಾಗಹಿಸಿದ್ದ ವಿಠಲ್‌ನ ತಾಯಿ ಹೊನ್ನಮ್ಮ ಸದಾನಂದಗೌಡ ಅವರ ಬಳಿ ಅಳಲು ತೋಡಿಕೊಂಡರು.ಲೇಖಕ ಜಿ.ಕೆ.ಗೋವಿಂದ ರಾವ್, ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry