ನಕ್ಸಲ್ ನಿಗ್ರಹ ವಾಹನ ತಡೆದು ಪ್ರತಿಭಟನೆ

7

ನಕ್ಸಲ್ ನಿಗ್ರಹ ವಾಹನ ತಡೆದು ಪ್ರತಿಭಟನೆ

Published:
Updated:

ತೀರ್ಥಹಳ್ಳಿ: ನಕ್ಸಲ್ ಪ್ಯಾಕೇಜ್ ನೀಡುತ್ತೇವೆ ಎಂದು ಪ್ರತಿ ಬಾರಿ ಅಧಿಕಾರಿಗಳು ನೀಡುವ ಭರವಸೆ ಕೇಳಿ ಸಾಕಾಗಿ ಹೋಗಿದೆ. ಇದರಿಂದ ನಮ್ಮ ಊರಿಗೆ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ನಮ್ಮ ದೈನಂದಿನ ಬದುಕಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ಆಗುಂಬೆ ಸಮೀಪ ನಾಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಳಿಮನೆ ಸಮೀಪ ನಕ್ಸಲ್ ನಿಗ್ರಹದಳದ ಎರಡು ವಾಹನಗಳನ್ನು ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಕಳೆದ ಎಂಟು ವರ್ಷದ ಹಿಂದೆ ಆಗುಂಬೆಯ ಕೆಲವು ಪ್ರದೇಶಗಳನ್ನು ನಕ್ಸಲ್‌ಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದೆ. ವಿಶೇಷ ಅನುದಾನ ನೀಡುವ ಮೂಲಕ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ನೆರವಾಗಲು ಸರ್ಕಾರ ಚಿಂತನೆ ನಡೆಸಿದೆ ಎಂದು ಪ್ರಚಾರ ಪಡೆಯಲಾಗುತ್ತಿದೆ. ಆದರೆ, ಇಲ್ಲಿನ ಹಳ್ಳಿಗಾಡಿನ ಪ್ರದೇಶಗಳು ಕನಿಷ್ಠ ಸೌಕರ್ಯ ಇಲ್ಲದೇ ಸಮಸ್ಯೆಯಲ್ಲಿಯೇ ಉಳಿದಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಆಗುಂಬೆ ಭಾಗದ ದುರ್ಗಮ ಕಾಡಿನ ಹಳ್ಳಿಗಳಿಗೆ ಇನ್ನೂ ಸರಿಯಾಗಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಶಾಲೆ, ಮೋರಿ, ಅಂಗನವಾಡಿ ಮುಂತಾದ ಕನಿಷ್ಠ ಸೌಕರ‌್ಯಗಳನ್ನೂ ಒದಗಿಸಿಲ್ಲ ಎಂದು ದೂರಿದರು.ಜಮೀನಿನ ಕೆಲಸದಲ್ಲಿ ತೊಡಗಿದವರಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದರೂ ಪೊಲೀಸರು ಅವರನ್ನು ತಡೆದು ವಿಚಾರಿಸುತ್ತಾರೆ. ನಕ್ಸಲರಿಗೆ ಊಟ ನೀಡುತ್ತೀರಾ ಎಂದು ಕೆಣಕುತ್ತಾರೆ ಎಂದು ಈ ಭಾಗದ ಗ್ರಾಮಸ್ಥರು ಗ್ರಾಮಸಭೆಗಳಲ್ಲಿ ಅಳಲು ತೋಡಿಕೊಳ್ಳುವಂತಾಗಿದೆ. ಪೊಲೀಸ್ ಇಲಾಖೆಯ ದರ್ಪಕ್ಕೆ ಸ್ಥಳೀಯ ಜನರು ಬೆದರಿ ಹೋಗಿದ್ದಾರೆ ಎಂದು ದೂರಿದರು.ನಕ್ಸಲ್‌ಪೀಡಿತ ಪ್ರದೇಶಗಳಿಗೆ ನೀಡಿರುವ ಹಣ ಎಲ್ಲಿಗೆ ಹೋಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳಿಗೂ ಮಾಹಿತಿ ಇಲ್ಲ. ಪೊಲೀಸರು, ಅಧಿಕಾರಿಗಳೊಂದಿಗೆ ಪದೇ ಪದೇ ಭೇಟಿ ನೀಡಿ ಸಮಸ್ಯೆಯ ಪಟ್ಟಿ ಮಾಡುತ್ತಾರೆ. ಆ ನಂತರ ಆ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.ಘಟನಾ ಸ್ಥಳಕ್ಕೆ ನಕ್ಸಲ್ ನಿಗ್ರಹದಳದ ಡಿವೈಎಸ್ಪಿ ಭೀಮಕ್ಕನವರ್, ಆಗುಂಬೆ ಪೊಲೀಸ್ ಠಾಣೆಯ ಪಿಎಸ್‌ಐ ಕೃಷ್ಣನಾಯ್ಕ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳು ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ನಾವು ನಿಮ್ಮ ರಕ್ಷಣೆಗೆ ಇರುವವರು. ನಕ್ಸಲ್ ನಿಗ್ರಹ ನಮ್ಮ ಜವಾಬ್ದಾರಿ. ನಿಮ್ಮ ಬೇಡಿಕೆ ಪೂರೈಸುವ ಬಗ್ಗೆ ಸರ್ಕಾರಕ್ಕೆ ಲಿಖಿತ ವರದಿ ನೀಡುತ್ತೇವೆ. ನಕ್ಸಲರ ವಿರುದ್ಧ ಕಾರ್ಯಾಚರಣೆಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಮನವರಿಕೆ ಮಾಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry