ನಕ್ಸಲ್ ವಿರುದ್ಧ ಹೋರಾಟ: ತರಬೇತಿ ಹೊಂದಿದ ಪ್ರತ್ಯೇಕ ಪಡೆ ಅಗತ್ಯ

7

ನಕ್ಸಲ್ ವಿರುದ್ಧ ಹೋರಾಟ: ತರಬೇತಿ ಹೊಂದಿದ ಪ್ರತ್ಯೇಕ ಪಡೆ ಅಗತ್ಯ

Published:
Updated:

ಬೆಂಗಳೂರು: ಹೊರ ರಾಜ್ಯಗಳಂತೆ ನಕ್ಸಲ್ ಚಟುವಟಿಕೆಯ ತೀವ್ರತೆ ರಾಜ್ಯದಲ್ಲಿ ಇಲ್ಲದಿದ್ದರೂ ನಕ್ಸಲ್ ವಿರುದ್ಧ ಹೋರಾಡಲು ತರಬೇತಿ ಪಡೆದ ಪ್ರತ್ಯೇಕ ಪಡೆಯ ಅಗತ್ಯವಿದೆ ಎಂಬ ಅಂಶ ಗೃಹ ಇಲಾಖೆಗೆ ಈಗ ಮನವರಿಕೆಯಾಗಿದೆ.`ನಕ್ಸಲ್ ವಿರುದ್ಧದ ಹೋರಾಟಕ್ಕೆ ರಾಜ್ಯದಲ್ಲಿ ತಾತ್ಕಾಲಿಕ ವ್ಯವಸ್ಥೆ ಇದೆ. ರಾಜ್ಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ನಕ್ಸಲ್ ನಿಗ್ರಹ ಪಡೆಯಲ್ಲಿ    (ಎಎನ್‌ಎಫ್) ಕೆಲಸ ಮಾಡುತ್ತಿದ್ದಾರೆ. ಪ್ರತಿ ಎರಡು ತಿಂಗಳಿಗೊಮ್ಮೆ ಸಿಬ್ಬಂದಿ ಬದಲಾಗುತ್ತಿದ್ದಾರೆ. ಇನ್ನು ಮುಂದೆ ಇಂತಹ ವ್ಯವಸ್ಥೆಯನ್ನು ಕೊನೆಗೊಳಿಸಲು ನಿರ್ಧರಿಸಲಾಗಿದೆ.ನಕ್ಸಲ್  ವಿರುದ್ಧದ ಕಾರ್ಯಾಚರಣೆಗೆ ಪ್ರತ್ಯೇಕ ಪಡೆ ರಚಿಸುವ ನಿರ್ಧಾರಕ್ಕೆ ಬರಲಾಗಿದೆ~ ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮ್‌ದಾರ್ ತಿಳಿಸಿದ್ದಾರೆ.ಈಗಿರುವ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ವಿಶೇಷವಾಗಿ ನಕ್ಸಲ್ ವಿರುದ್ಧ ಹೋರಾಡಲು ಸಾಕಷ್ಟು ತರಬೇತಿ ಪಡೆದಿಲ್ಲ. ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ರಚಿಸಿದ್ದ ವಿಶೇಷ ಕಾರ್ಯ ಪಡೆಯನ್ನು (ಎಸ್‌ಟಿಎಫ್) ನಕ್ಸಲ್ ನಿಗ್ರಹ ಪಡೆಯನ್ನಾಗಿ ಬದಲಾಯಿಸಲಾಗಿದೆ. ಸಿಬ್ಬಂದಿಗೆ ತರಬೇತಿ ಇಲ್ಲದಿರುವುದು ಮತ್ತು ಎಎನ್‌ಎಫ್ ಸಿಬ್ಬಂದಿ ಆಗಾಗ್ಗೆ ಬದಲಾಗುತ್ತಿರುವುದರಿಂದ ಸಮಪರ್ಕವಾಗಿ ನಕ್ಸಲ್ ನಿಗ್ರಹ ಕೆಲಸ ಕಷ್ಟವಾಗುತ್ತಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.ಸಿಬ್ಬಂದಿಯ ಬದಲಾವಣೆ ಸಮಸ್ಯೆಯಾಗಿದೆ ಎಂದು ಒಪ್ಪಿಕೊಳ್ಳುವ ಜಾಮ್‌ದಾರ್, `ಈ ಕಾರಣದಿಂದಲೇ ಪ್ರತ್ಯೇಕ ಪಡೆ ರಚಿಸಲು ನಿರ್ಧರಿಸಲಾಗಿದೆ. ರಚನೆಯ ನಂತರ ಸಿಬ್ಬಂದಿ ನಕ್ಸಲ್ ನಿಗ್ರಹ ಕಾರ್ಯದಲ್ಲಿ ಮಾತ್ರ ತೊಡಗುತ್ತಾರೆ~ ಎನ್ನುತ್ತಾರೆ.`ಸಿಬ್ಬಂದಿ ತರಬೇತಿಗೆ ಸಂಬಂಧಿಸಿದಂತೆ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸಹಾಯ ಪಡೆಯಲು ನಿರ್ಧರಿಸಲಾಗಿದೆ. ಅರಣ್ಯ ಕಾರ್ಯಾಚರಣೆಯಲ್ಲಿ ಕೌಶಲ್ಯ ಪಡೆದಿರುವ ಸಿಆರ್‌ಪಿಎಫ್, ರಾಜ್ಯ ಮೀಸಲು ಪೊಲೀಸ್ ಪಡೆಯ ಮೂರು ಸಾವಿರ ಸಿಬ್ಬಂದಿಗೆ ತರಬೇತಿ ನೀಡಲು ಒಪ್ಪಿಕೊಂಡಿದೆ. ಹೊಸ ಪಡೆಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಶಸ್ತ್ರಾಸ್ತ್ರ ಬಳಕೆ ಬಗ್ಗೆಯೂ ಹೆಚ್ಚಿನ ತರಬೇತಿ ನೀಡಲಾಗುತ್ತದೆ. ಈ ಪಡೆ ಎ.ಕೆ-47, ಎ.ಕೆ-56, ಎಸ್‌ಎಲ್‌ಆರ್ ಬಂದೂಕು ಬಳಕೆಯ ತರಬೇತಿ ಪಡೆಯಲ್ಲಿದೆ. ರಾತ್ರಿ ಕಾರ್ಯಾಚರಣೆಗೆ ಬಳಸುವ ಕನ್ನಡಕ, ಗುಂಡು ನಿರೋಧಕ ಜಾಕೆಟ್ ಹಾಗೂ ಗುಂಡು ನಿರೋಧಕ ವಾಹನಗಳನ್ನೂ ನೀಡಲಾಗುತ್ತದೆ.

ಈ ಪಡೆಯ ವ್ಯಾಪ್ತಿಗೆ ನಕ್ಸಲ್ ಪೀಡಿತ ಹನ್ನೊಂದು ಜಿಲ್ಲೆಗಳೂ ಬರಲಿವೆ. ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಬೀದರ್, ಗುಲ್ಬರ್ಗ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ತುಮಕೂರು, ಕೋಲಾರ ಜಿಲ್ಲೆಗಳು ವ್ಯಾಪ್ತಿಗೆ ಬರಲಿವೆ. ವಿಶೇಷ ಪಡೆಗೆ ಸಲಹೆ ಸೂಚನೆ ನೀಡಲು ಮತ್ತು ಸಮನ್ವಯತೆ ಸಾಧಿಸಲು ಉಡುಪಿಯಲ್ಲಿ ಕೇಂದ್ರ ಪಡೆ ಆರಂಭಿಸಲಾಗುತ್ತದೆ.

 

`ನಕ್ಸಲ್ ಚಟುವಟಿಕೆ ತೀವ್ರತೆ ಇಲ್ಲದ ಈಗೀನ ಅಗತ್ಯಕ್ಕೆ ತಕ್ಕಂತೆ ಪಡೆ ರಚಿಸಲಾಗುತ್ತದೆ. ಆದರೆ ಹೆಚ್ಚಿನ ಸವಾಲನ್ನು ಎದುರಿಸಲು ರಾಜ್ಯ ಸಿದ್ಧ ಇದೆ~ ಎಂದು ಜಾಮ್‌ದಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry