ನಗದು: ಆಯೋಗದ ಕೆಂಗಣ್ಣು

7

ನಗದು: ಆಯೋಗದ ಕೆಂಗಣ್ಣು

Published:
Updated:
ನಗದು: ಆಯೋಗದ ಕೆಂಗಣ್ಣು

ನವದೆಹಲಿ (ಪಿಟಿಐ):   ವಿವಿಧ ಕಲ್ಯಾಣ ಕಾರ್ಯಕ್ರಮಗಳ  ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವ ಯೋಜನೆ ಪ್ರಕಟಿಸಿರುವ ಕೇಂದ್ರ ಸರ್ಕಾರದ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚುನಾವಣಾ ಆಯೋಗವು, ಈ ಸಂಬಂಧ ಸೋಮವಾರ ಸಂಜೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಸಂಪುಟ ಕಾರ್ಯದರ್ಶಿಗೆ ಸೂಚಿಸಿದೆ.`ಈ ತಿಂಗಳ ಅಂತ್ಯದಲ್ಲಿ ಗುಜರಾತ್‌ನಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಕೇಂದ್ರವು ಈ ಸಂದರ್ಭದಲ್ಲಿ ಯೋಜನೆ ಘೋಷಣೆ ಮಾಡಿರುವುದು ಸರಿಯಲ್ಲ' ಎಂದು ಆಯೋಗವು ಸಂಪುಟ ಕಾರ್ಯದರ್ಶಿಗೆ ಭಾನುವಾರ ಕಟುವಾಗಿ ಪತ್ರ ಬರೆದಿದೆ.

`ಯೋಜನೆಗೆ ಸಂಬಂಧಿಸಿ ವಸ್ತು ಸ್ಥಿತಿ ವರದಿ ಸಲ್ಲಿಸಲು ಸಂಪುಟ ಕಾರ್ಯದರ್ಶಿಗೆ ಸೂಚಿಸಿದ್ದೇವೆ. ಸೋಮವಾರ ಸಂಜೆಯೊಳಗೆ ಈ ಬಗ್ಗೆ ಪ್ರತಿಕ್ರಿಯೆ ನೀಡದಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ' ಎಂದು ಆಯೋಗದ ಉನ್ನತ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.`ಈ ವಿಷಯದಲ್ಲಿ ಆಯೋಗವು ಸಂಪುಟ ಕಾರ್ಯದರ್ಶಿಗೆ ಎರಡನೇ ಬಾರಿ ಎಚ್ಚರಿಕೆ ನೀಡುತ್ತಿದೆ' ಎಂದು ಮೂಲಗಳು ಹೇಳಿವೆ.

`ಯೋಜನೆ ಘೋಷಣೆಯು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ' ಎಂದು ಆರೋಪಿಸಿ ಗುಜರಾತ್ ಬಿಜೆಪಿ ಘಟಕವು ಗುರುವಾರ ಆಯೋಗಕ್ಕೆ ದೂರು ನೀಡಿತ್ತು. ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಕೂಡ ಮುಖ್ಯ ಚುನಾವಣಾ ಆಯುಕ್ತರನ್ನು ಖುದ್ದಾಗಿ ಭೇಟಿಯಾಗಿ ದೂರು ನೀಡಿದ್ದರು. `ಚುನಾವಣಾ ದಿನಾಂಕ ನಿಗದಿಯಾದ ನಂತರ ಇಂಥ ಘೋಷಣೆಗಳನ್ನು ಮಾಡುವಂತಿಲ್ಲ' ಎಂದೂ ಹೇಳಿದ್ದರು.ಕಾಕತಾಳೀಯವೆಂದರೆ, ಜನವರಿ ಒಂದರಿಂದ ನಗದು ವರ್ಗಾವಣೆ ಯೋಜನೆಯು ಜಾರಿಯಾಗುತ್ತಿರುವ 51 ಜಿಲ್ಲೆಗಳಲ್ಲಿ ನಾಲ್ಕು ಜಿಲ್ಲೆಗಳು ಗುಜರಾತ್ ರಾಜ್ಯಕ್ಕೆ ಸೇರಿವೆ. ಡಿ. 13 ಹಾಗೂ 17ರಂದು ಇಲ್ಲಿ ಮತದಾನ ನಡೆಯಲಿದೆ.1 ರೂಪಾಯಿಗೆ 3ರೂ ಖರ್ಚು!

`ಫಲಾನುಭವಿಗಳಿಗೆ ಒಂದು ರೂಪಾಯಿ ವರ್ಗಾವಣೆ ಮಾಡುವುದಕ್ಕೆ ಸರ್ಕಾರವು ಮೂರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಈ ಯೋಜನೆಯಿಂದ ಹಣವು ಅನರ್ಹರ ಪಾಲಾಗುವುದನ್ನು ತಡೆಯಬಹುದು. ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು. ಜತೆಗೆ ಭ್ರಷ್ಟಾಚಾರವೂ ಕಡಿಮೆಯಾಗುತ್ತದೆ. ಆಡಳಿತಾತ್ಮಕ ಹೊರೆ ಇಳಿಯುತ್ತದೆ' ಎಂದು ಹಣಕಾಸು ಸಚಿವ ಪಿ.ಚಿದಂಬರಂ ಅವರು ಸರ್ಕಾರದ ಈ ಕ್ರಮವನ್ನು ಈ ಮೊದಲು ಸಮರ್ಥಿಸಿಕೊಂಡಿದ್ದರು.

`ಈಗಿರುವ ವ್ಯವಸ್ಥೆಯಲ್ಲಿ ಫಲಾನುಭವಿಗಳು ಯೋಜನೆಗಳ ಲಾಭ ಪಡೆಯುವುದಕ್ಕೆ ವಿವಿಧ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ ನೇರ ನಗದು ವರ್ಗಾವಣೆಯಲ್ಲಿ ಇಂಥ ತೊಂದರೆಗಳು ಬರುವುದಿಲ್ಲ' ಎಂದೂ ಅವರು ಯೋಜನೆಯ ಪ್ರಯೋಜನಗಳನ್ನು ವಿವರಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry