ನಗರಕ್ಕೆ ಆಗಮಿಸಿದ ಇಂಟರ್‌ಸಿಟಿ

7

ನಗರಕ್ಕೆ ಆಗಮಿಸಿದ ಇಂಟರ್‌ಸಿಟಿ

Published:
Updated:

ಶಿವಮೊಗ್ಗ: ನಿರೀಕ್ಷಿತ ಮೈಸೂರು-ಶಿವಮೊಗ್ಗ ‘ಇಂಟರ್‌ಸಿಟಿ’ ರೈಲು ಭಾನುವಾರ ಸಂಜೆ ನಗರಕ್ಕೆ ಆಗಮಿಸಿತು. ಮಧ್ಯಾಹ್ನ 12.30ಕ್ಕೆ ಮೈಸೂರಿನಿಂದ ಹೊರಟ ರೈಲು, ಸರಿಯಾಗಿ ಸಂಜೆ 7.10ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣವನ್ನು ತಲುಪಿತು. ಈ ಮೂಲಕ ಈ ಭಾಗದ ಜನರ ಕನಸು ನನಸಾದಂತಾಗಿದೆ.ನಗರದ ನೂರಾರು ಜನ, ರೈಲ್ವೆನಿಲ್ದಾಣದಲ್ಲಿ ಸಂಜೆ 6ಗಂಟೆಯಿಂದಲೇ ರೈಲಿನ ಆಗಮನಕ್ಕೆ ಕಾದುಕುಳಿತಿದ್ದರು. ಮೈಸೂರಿನಿಂದ ಕೆ.ಆರ್. ನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ತರೀಕೆರೆ ಮೂಲಕ ಸಂಜೆ 7.10ಕ್ಕೆ ನಗರ ತಲುಪಿದ ‘ಇಂಟರ್‌ಸಿಟಿ’ಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ರೈಲನ್ನು ಸ್ವಾಗತಿಸಲು ಗಣ್ಯರು, ಅಧಿಕಾರಿಗಳು ಮುಂಚಿತವಾಗಿ ನೆರೆದಿದ್ದರು. ರೈಲು ಆಗಮಿಸುತ್ತಿದ್ದಂತೆ ರೈಲಿನತ್ತ ಕೈಬೀಸಿದರು.ಹಬ್ಬದ ಉಡುಗೊರೆ: ನಂತರ, ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಕೇಂದ್ರ ಮತ್ತು ರಾಜ್ಯ ಸರ್ಕಾರ ‘ಇಂಟರ್‌ಸಿಟಿ’ ರೈಲು ಬಿಡುವ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಉಡುಗೊರೆ ನೀಡಿವೆ. ಇದಕ್ಕೆ ಸಂಘ-ಸಂಸ್ಥೆಗಳ ಸಹಕಾರವೂ ಇದೆ ಎಂದು ಹರ್ಷ ವ್ಯಕ್ತಪಡಿಸಿದರು. ಈಗಾಗಲೇ, ಮೈಸೂರು- ಶಿವಮೊಗ್ಗ ಇಂಟರ್‌ಸಿಟಿ ರೈಲು ಸಂಚರಿಸಬೇಕಿತ್ತು. ಆದರೆ, ಬೋಗಿಗಳ ಕೊರತೆಯಿಂದ ವಿಳಂಬವಾಯಿತು ಎಂದರು.ತಾಳಗುಪ್ಪ ಬ್ರಾಡ್‌ಗೇಜ್ ಈಗಾಗಲೇ ಆಗಿದೆ. ಆದರೆ, ಅದು ಕೊಂಕಣ ರೈಲ್ವೆಗೂ ಸಂಪರ್ಕ ಕಲ್ಪಿಸಬೇಕು ಎಂಬುದು ಬಹುದಿನಗಳ ಬೇಡಿಕೆ. ಮುಂದಿನ ದಿನಗಳಲ್ಲಿ ಇದಕ್ಕೆ ಕೇಂದ್ರ ಸರ್ಕಾರ, ಪೂರಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದು ಹೇಳಿದರು.ಶಿವಮೊಗ್ಗ ರೈಲ್ವೆನಿಲ್ದಾಣದ 2ನೇ ಪ್ಲಾಟ್‌ಫಾರಂ ಅಭಿವೃದ್ಧಿಗೊಳಿಸಬೇಕು.ಹಳೇ ರೈಲ್ವೆ ನಿಲ್ದಾಣದಲ್ಲಿ ಕಂಪ್ಯೂಟರೀಕೃತ ಟಿಕೆಟ್ ವಿತರಣಾ ಕೇಂದ್ರ ತೆರೆಯಬೇಕು. ರಿಂಗ್‌ರೋಡ್ ಸಂಪರ್ಕ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ  ರೂ 4 ಕೋಟಿ ಹಣವನ್ನು ಜಿಲ್ಲಾಡಳಿತಕ್ಕೆ ನೀಡಿದೆ. ಅದನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಇದೇ ಸಂದರ್ಭದಲ್ಲಿ ಬಿ.ವೈ. ರಾಘವೇಂದ್ರ ತಿಳಿಸಿದರು.ಸಮಾರಂಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ, ‘ಸೂಡಾ’ ಅಧ್ಯಕ್ಷ ಎಸ್. ಜ್ಞಾನೇಶ್ವರ್, ರೈಲ್ವೆ ಸಲಹಾ ಸಮಿತಿ ಸದಸ್ಯರಾದ ಆರ್.ಕೆ. ಸಿದ್ದರಾಮಣ್ಣ, ಎಂ. ಭಾರದ್ವಾಜ್, ಮುಖಂಡ ಎಸ್. ದತ್ತಾತ್ರಿ, ಅಪರ ಜಿಲ್ಲಾಧಿಕಾರಿ ಶ್ರೀರಂಗಯ್ಯ ಉಪಸ್ಥಿತರಿದ್ದರು. ಕೆ.ಎಸ್. ಅನಂತರಾಮಯ್ಯ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry