ಮಂಗಳವಾರ, ಡಿಸೆಂಬರ್ 10, 2019
26 °C

ನಗರಕ್ಕೆ ಬರದ ಒಳಚರಂಡಿ ವ್ಯವಸ್ಥೆ

ಪ್ರಜಾವಾಣಿ ವಾರ್ತೆ/ ಚಿದಂಬರಪ್ರಸಾದ್‌ Updated:

ಅಕ್ಷರ ಗಾತ್ರ : | |

ನಗರಕ್ಕೆ ಬರದ ಒಳಚರಂಡಿ ವ್ಯವಸ್ಥೆ

ಯಾದಗಿರಿ: ಸೌಲಭ್ಯಗಳು ಜನರಿಗೆ ದೊರೆಯಲಿ ಎಂಬ ಉದ್ದೇಶದಿಂದ ದೊಡ್ಡ ಜಿಲ್ಲೆಯನ್ನು ವಿಭಜಿಸಿ, ಯಾದಗಿರಿಯನ್ನು ಜಿಲ್ಲಾ ಕೇಂದ್ರವಾಗಿ ರಚಿಸಲಾಯಿತು. ಜಿಲ್ಲೆಯಾಗಿ ನಾಲ್ಕು ವರ್ಷ ಕಳೆಯುತ್ತಾ ಬಂದರೂ, ನಗರದ ಜನರಿಗೆ ಮಾತ್ರ ಸೌಲಭ್ಯಗಳು ಇನ್ನೂ ಗಗನಕುಸುಮವಾಗಿವೆ.ನಗರದ ಬಹುತೇಕ ರಸ್ತೆಗಳು ಹದಗೆಟ್ಟಿದ್ದರೆ, ನಗರದಾದ್ಯಂತ ಚರಂಡಿ ವ್ಯವಸ್ಥೆಯಂತೂ ಹೇಳತೀರದಾಗಿದೆ. ಜಿಲ್ಲಾ ಕೇಂದ್ರದಲ್ಲಿಯೇ ಒಳಚರಂಡಿ ವ್ಯವಸ್ಥೆ ಇಲ್ಲದೇ ಜನರು ಪರಿ­ತಪಿಸುವಂತಾಗಿದೆ. ತೆರೆದ ಚರಂಡಿಗಳು ತುಂಬಿದ್ದು, ದುರ್ವಾಸನೆ ಬೀರುತ್ತಿವೆ. ಸೊಳ್ಳೆಗಳ ಉತ್ಪತ್ತಿ ತಾಣವಾಗಿವೆ. ಮನೆಯ ಅಂಗಳದಲ್ಲೂ ಸ್ವಲ್ಪ ಹೊತ್ತು ಕಳೆಯಲಾರಂತಹ ಸ್ಥಿತಿ ನಿರ್ಮಾಣವಾಗಿದೆ.ಜಿಲ್ಲಾ ಕೇಂದ್ರದ ಜನಸಂಖ್ಯೆ ಸುಮಾರು 75 ಸಾವಿರದಷ್ಟಿದ್ದು, ಜನರು ಮಾತ್ರ ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ. ಪ್ರತಿಯೊಂದು ಬಡಾವಣೆಯಲ್ಲೂ ಇದೇ ಸಮಸ್ಯೆ ತಾಂಡವವಾಡುತ್ತಿದೆ.ತೆರೆದ ಚರಂಡಿಗಳಿಗೂ ಮುಚ್ಚಳವಿಲ್ಲದೇ ಇರುವುದರಿಂದ ತ್ಯಾಜ್ಯವೆಲ್ಲ ಚರಂಡಿ ಸೇರುತ್ತಿದ್ದು, ಕೆಸರು ನೀರು ಮುಂದೆ ಹರಿದು ಹೋಗದಂತಾಗಿವೆ. ಮಳೆ ಬಂದರೆ ಸಾಕು, ಕೆಸರು ನೀರೆಲ್ಲ ರಸ್ತೆಯ ಮೇಲೆ ಹರಿಯುವಂತಾಗಿದೆ.ಇಲ್ಲಿಯ ಚಿತ್ತಾಪುರ ರಸ್ತೆಯಲ್ಲಿರುವ ನಗರಸಭೆಯ ಮಳಿಗೆಗಳ ಎದುರು ಬೃಹದಾಕಾರದ ಚರಂಡಿ ಇದ್ದು, ಹೂಳು ತುಂಬಿದೆ. ಈ ಮಳಿಗೆಗಳಲ್ಲಿ ಅನೇಕ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಕಚೇರಿಗಳಿಗೆ ಬರುವ ನಾಗರಿಕರಿಗೂ ತಲೆನೋವಾಗಿ ಪರಿಣಮಿಸಿದೆ.ತುಂಬಿದ ಹೂಳು: ನಗರದಲ್ಲಿರುವ ಬಹುತೇಕ ಚರಂಡಿಗಳಲ್ಲಿ ಹೂಳು ತುಂಬಿದ್ದು, ನೀರು ಹರಿಯುತ್ತಲೇ ಇಲ್ಲ. ಹೀಗಾಗಿ ತ್ಯಾಜ್ಯವೆಲ್ಲ ಒಂದೇ ಕಡೆ ನಿಂತಿದ್ದು, ದುರ್ವಾಸನೆ ಬೀರುತ್ತಿದೆ. ಸಂಜೆಯಾದರಂತೂ ಮನೆಗಳ ಬಾಗಿಲನ್ನು ತೆರೆಯಲು ಆಗುತ್ತಿಲ್ಲ. ಬಾಗಿಲು ತೆರೆದರೆ, ಸೊಳ್ಳೆಗಳ ಸೈನ್ಯವೇ ಮನೆಯನ್ನು ಪ್ರವೇಶಿಸುತ್ತದೆ. ರಾತ್ರಿ ಮಲಗುವುದಕ್ಕೂ ಆಗದಂತಹ ಸ್ಥಿತಿ ನಿರ್ಮಾಣವಾಗುತ್ತದೆ.ಸ್ವಲ್ಪ ಮಳೆಯಾದರೂ, ಚರಂಡಿ­ಯಲ್ಲಿನ ಹೊಲಸು ನೀರೆಲ್ಲ ಮನೆಗಳಿಗೆ ನುಗ್ಗುತ್ತದೆ. ತಗ್ಗು ಪ್ರದೇಶಗಳಲ್ಲಿರುವ ಜನರಂತೂ ಮಳೆ ಯಾಕಾದರೂ ಬರುತ್ತದೆಯೂ ಎನ್ನುವಂತಾಗಿದೆ. ಮಳೆಗಾಲ ಬರುವ ಸಂದರ್ಭದಲ್ಲಿ ಮಾತ್ರ ಕೆಲ ಚರಂಡಿಗಳನ್ನು ಸ್ವಚ್ಛ ಮಾಡಿ ಕೈತೊಳೆದುಕೊಳ್ಳುವ ನಗರಸಭೆ ಆಡಳಿತ ವರ್ಗ, ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ ಎಂದು ಜನರು ದೂರುವಂತಾಗಿದೆ.ಜಿಲ್ಲಾ ಕೇಂದ್ರದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಅನುದಾನವೂ ಲಭ್ಯವಾಗಿದ್ದು, ಕಾಮಗಾರಿ ಮಾತ್ರ ಆರಂಭವಾಗುತ್ತಿಲ್ಲ. ಎಂಟು ತಿಂಗಳಿಂದ ನಗರಸಭೆಯಲ್ಲಿ ಆಡಳಿತವೇ ಇಲ್ಲ­ದ್ದರಿಂದ ಯಾವುದೇ ಕಾಮಗಾರಿಗಳು ಆರಂಭವಾಗಿಲ್ಲ. ಸದ್ಯ ಮಳೆಗಾಲ ಆರಂಭವಾಗಿದ್ದು, ಮಳೆ ನಿಲ್ಲುವವರೆಗೂ ಕಾಮಗಾರಿಗಳು ಆರಂಭವಾಗುವಂತಿಲ್ಲ. ಹೀಗಾಗಿ ಒಳಚರಂಡಿ ವ್ಯವಸ್ಥೆ ನಿರ್ಮಾ­ಣಕ್ಕೆ ಕಾಲ ಯಾವಾಗ ಕೂಡಿ ಬರಲಿದೆ ಎಂದು ಜನರು ಕಾಯುವಂತಾಗಿದೆ.

ಪ್ರತಿಕ್ರಿಯಿಸಿ (+)