ಸೋಮವಾರ, ಮೇ 10, 2021
20 °C
ಹೆಚ್ಚುವರಿ ಪೊಲೀಸ್ ಕಮಿಷನರ್ ಕಮಲ್‌ಪಂತ್ ಸ್ಪಷ್ಟನೆ

ನಗರಕ್ಕೆ ಶಂಕಿತ ಉಗ್ರರು ನುಸುಳಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರಕ್ಕೆ ಶಂಕಿತ ಉಗ್ರರು ನುಸುಳಿರುವ ಸಂಗತಿಯನ್ನು ನಿರಾಕರಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ನಗರ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.`ನಗರದಲ್ಲಿ ಭಯೋತ್ಪಾದನಾ ದಾಳಿ ನಡೆಯುವ ಸಂಬಂಧ ಮತ್ತು ಶಂಕಿತ ಉಗ್ರರು ನುಸುಳಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ನಗರ ಸಂಪೂರ್ಣ ಸುರಕ್ಷಿತವಾಗಿದೆ. ಜನರು ಆತಂಕಪಡುವ ಅಗತ್ಯವಿಲ್ಲ' ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಕಮಲ್‌ಪಂತ್ `ಪ್ರಜಾವಾಣಿ'ಗೆ ತಿಳಿಸಿದರು.`ಭದ್ರತೆ ದೃಷ್ಟಿಯಿಂದ ಪ್ರತಿಷ್ಠಿತ ಹೋಟೆಲ್‌ಗಳ ಸಮೀಪ ಶನಿವಾರ ರಾತ್ರಿ ತಪಾಸಣೆ ಮಾಡಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಆಗಾಗ್ಗೆ ಈ ರೀತಿ ಹೋಟೆಲ್‌ಗಳ ಬಳಿ ಪರಿಶೀಲನೆ ನಡೆಸಲಾಗುತ್ತದೆ. ಭಯೋತ್ಪಾದನಾ ಚಟುವಟಿಕೆಗಳು ಅಥವಾ ಉಗ್ರರ ಬಗ್ಗೆ ಸಿಬ್ಬಂದಿ ಸದಾ ಕಟ್ಟೆಚ್ಚರದಿಂದ್ದಾರೆ' ಎಂದು ಅವರು ಹೇಳಿದ್ದಾರೆ.`ಬೆಂಗಳೂರಿಗೆ ಶಂಕಿತ ಉಗ್ರರು ನುಸುಳಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳಿಂದ ಯಾವುದೇ ಮಾಹಿತಿ ಬಂದಿಲ್ಲ' ಎಂದು ರಾಜ್ಯ ಗುಪ್ತಚರ ಇಲಾಖೆ ಐಜಿಪಿ ಗೋಪಾಲ್ ಬಿ.ಹೊಸೂರ್ ತಿಳಿಸಿದ್ದಾರೆ.ತಾಜ್ ಸಮೂಹದ ಹೋಟೆಲ್‌ಗಳ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಮೂವರು ಶಂಕಿತ ಉಗ್ರರು ಕಪ್ಪು ಬಣ್ಣದ ಕಾರಿನಲ್ಲಿ (ಜಿಜೆ-05, ಎಸಿ-15) ಬೆಂಗಳೂರಿಗೆ ಬಂದಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆಯು ರಾಜ್ಯ ಸರ್ಕಾರಕ್ಕೆ ಮಾಹಿತಿ ಕೊಟ್ಟಿದೆ ಎಂದು ಶನಿವಾರ ಸುದ್ದಿ ಹರಡಿತ್ತು.

ಅಲ್ಲದೇ, ನಗರ ಪೊಲೀಸರು ತಾಜ್ ಸಮೂಹದ ಹೋಟೆಲ್‌ಗಳು ಸೇರಿದಂತೆ ಪ್ರತಿಷ್ಠಿತ ಹೋಟೆಲ್‌ಗಳ ಬಳಿ ರಾತ್ರಿ ಸಾಕಷ್ಟು ಪರಿಶೀಲನೆ ನಡೆಸಿದ್ದರು. ಜತೆಗೆ ಹೋಟೆಲ್‌ಗಳಿಗೆ ಬಂದು ಹೋಗುವ ವಾಹನಗಳನ್ನು ತಪಾಸಣೆ ಮಾಡಿದ್ದರು ಮತ್ತು ಹೋಟೆಲ್‌ಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.