ನಗರದಲ್ಲಿ ಎರಡು ಕಡೆ ಅಗ್ನಿ ಅನಾಹುತ: ನಷ್ಟ
ಬೆಂಗಳೂರು: ನಗರದ ಹೊಸೂರು ರಸ್ತೆಯ ಗಾರ್ವೆಬಾವಿಪಾಳ್ಯ ಮತ್ತು ಪೀಣ್ಯ ಬಳಿಯ ನೆಟ್ಟಕಲ್ಲಪ್ಪ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ಪೇಂಟಿಂಗ್ ಸಾಮಗ್ರಿಗಳ ಗೋದಾಮು ಹಾಗೂ ಕವರ್ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಭಾರಿ ಅಗ್ನಿ ಅನಾಹುತದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.
`ಬರ್ಗರ್ ಪೇಂಟ್ಸ್ ಇಂಡಿಯಾ ಲಿಮಿಟೆಡ್~ ಸಂಸ್ಥೆಯವರು ಗಾರ್ವೆಬಾವಿಪಾಳ್ಯದ ಕೃಷ್ಣಪ್ಪ ಲೇಔಟ್ನಲ್ಲಿ ಕಟ್ಟಡವೊಂದನ್ನು ಬಾಡಿಗೆಗೆ ಪಡೆದು, ಪೇಂಟಿಂಗ್ ಸಾಮಗ್ರಿಗಳನ್ನು ದಾಸ್ತಾನು ಮಾಡಿದ್ದರು. ಆ ಗೋದಾಮಿನ ಮೇಲಿನ ಅಂತಸ್ತಿನಲ್ಲಿ `ಎನ್.ಎಫ್.ಅಪ್ಯಾರಲ್ಸ್~ ಹೆಸರಿನ ಸಿದ್ಧ ಉಡುಪು ಕಾರ್ಖಾನೆ ಇದೆ.
ಬರ್ಗರ್ ಸಂಸ್ಥೆಯ ಗೋದಾಮಿನ ಒಳ ಭಾಗದಲ್ಲಿ ಬೆಳಿಗ್ಗೆ ಒಂಬತ್ತು ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಗೋದಾಮಿನಲ್ಲಿ ಯಾರೂ ಇರದಿದ್ದರಿಂದ ಬೆಂಕಿ ಹೊತ್ತಿಕೊಂಡಿರುವ ಸಂಗತಿ ತಕ್ಷಣವೇ ಗೊತ್ತಾಗಿಲ್ಲ.
ಸ್ವಲ್ಪ ಸಮಯದಲ್ಲೇ ಬೆಂಕಿಯ ಪ್ರಮಾಣ ಹೆಚ್ಚಾಗಿ, ಗೋದಾಮಿನ ಮೇಲಿನ ಸಿದ್ಧ ಉಡುಪು ಕಾರ್ಖಾನೆಗೂ ವ್ಯಾಪಿಸಿದೆ. ಸಿದ್ಧ ಉಡುಪು ಕಾರ್ಖಾನೆ ಒಳ ಭಾಗದಿಂದ ಹೊಗೆ ಬರುತ್ತಿದ್ದನ್ನು ನೋಡಿದ ಸ್ಥಳೀಯರು, ಬೆಳಿಗ್ಗೆ 10ರ ವೇಳೆಗೆ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದು 30 ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ಆದರೆ, ಪೇಂಟಿಂಗ್ ಸಾಮಗ್ರಿಗಳಲ್ಲಿನ ರಾಸಾಯನಿಕ ವಸ್ತುಗಳು ಶಾಖದ ತೀವ್ರತೆಗೆ ಸ್ಫೋಟಗೊಳ್ಳಲಾರಂಭಿಸಿದವು. ಜತೆಗೆ ಬೆಂಕಿಯ ಜ್ವಾಲೆಗಳೂ ಹೆಚ್ಚಾಗಿದ್ದರಿಂದ ಸಿಬ್ಬಂದಿಗೆ ಕಟ್ಟಡದ ಸಮೀಪಕ್ಕೆ ತೆರಳಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿಲ್ಲ.
ಪರಿಣಾಮ ಬೇಗನೆ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅಕ್ಕಪಕ್ಕದ ಮನೆಗಳು ಹಾಗೂ ವಾಣಿಜ್ಯ ಸಮುಚ್ಚಯ ಕಟ್ಟಡಗಳಿಗೂ ಬೆಂಕಿ ವ್ಯಾಪಿಸುವ ಸ್ಥಿತಿ ಎದುರಾಯಿತು.
ಈ ಹಂತದಲ್ಲಿ ಅಗ್ನಿಶಾಮಕ ಸಿಬ್ಬಂದಿ ಖಾಸಗಿ ನೀರಿನ ಟ್ಯಾಂಕರ್ಗಳ ನೆರವಿನಿಂದ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿ, ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ವ್ಯಾಪಿಸದಂತೆ ಎಚ್ಚರ ವಹಿಸಿದರು. ಸತತ 10 ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ರಾತ್ರಿ ಎಂಟು ಗಂಟೆ ಸುಮಾರಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು. ಆದರೆ, ಆ ವೇಳೆಗಾಗಲೇ ಗೋದಾಮು ಹಾಗೂ ಸಿದ್ಧ ಉಡುಪು ಕಾರ್ಖಾನೆಯಲ್ಲಿನ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿದ್ದವು. ಅಲ್ಲದೇ, ಇಡೀ ಕಟ್ಟಡ ದೀರ್ಘ ಕಾಲ ಹೊತ್ತಿ ಉರಿದಿದ್ದರಿಂದ ಹಂತಹಂತವಾಗಿ ಕುಸಿದು ಬಿದ್ದಿತು.
`ಘಟನೆ ನಡೆದಾಗ ನಾನು ನಗರದಲ್ಲಿರಲಿಲ್ಲ. ಕಾರು ಚಾಲಕ ಗೋವಿಂದಪ್ಪ ಕರೆ ಮಾಡಿ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿಸಿದರು. 12.45ರ ಸುಮಾರಿಗೆ ಗೋದಾಮಿನ ಬಳಿ ಬಂದಾಗ ಕಟ್ಟಡಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಆವರಿಸಿತ್ತು. ಅದೃಷ್ಟವಶಾತ್ ಸಿದ್ಧ ಉಡುಪು ಕಾರ್ಖಾನೆ ಕಾರ್ಮಿಕರು ಕೆಲಸಕ್ಕೆ ಬರುವ ಮುನ್ನವೇ ಈ ಅನಾಹುತ ಸಂಭವಿಸಿದೆ. ಇಲ್ಲದಿದ್ದರೆ ಕಾರ್ಮಿಕರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು~ ಎಂದು ಕಟ್ಟಡದ ಮಾಲೀಕರಲ್ಲಿ ಒಬ್ಬರಾದ ಆನಂದರೆಡ್ಡಿ ತಿಳಿಸಿದರು.
ಘಟನೆಯಲ್ಲಿ ಆಗಿರುವ ನಷ್ಟದ ಬಗ್ಗೆ ಹಾಗೂ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಘಟನೆ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಡಿವಾಳ ಪೊಲೀಸರು ಹೇಳಿದ್ದಾರೆ.
ಸ್ಥಳೀಯರ ಆತಂಕ: ಗೋದಾಮಿನ ಕಟ್ಟಡ ದಿನವಿಡೀ ಹೊತ್ತಿ ಉರಿದಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಘಟನಾ ಸ್ಥಳದ ಸುತ್ತ ಜಮಾಯಿಸಿದ್ದರು. ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು. ಘಟನೆಯಿಂದಾಗಿ ಹೊಸೂರು ರಸ್ತೆಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೂ ತೊಡಕಾಯಿತು.
`ಗೋದಾಮಿನಿಂದ ಸುಮಾರು ನೂರು ಮೀಟರ್ ಅಂತರದಲ್ಲಿ ನಮ್ಮ ಮನೆ ಇದೆ. ಬೆಂಕಿಯ ತೀವ್ರತೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದರಿಂದ ಆತಂಕದಲ್ಲೇ ದಿನ ದೂಡುವಂತಾಯಿತು. ನಮ್ಮ ಮನೆಗೂ ಬೆಂಕಿ ವ್ಯಾಪಿಸಬಹುದೆಂಬ ಭಯದಿಂದ ಕುಟುಂಬ ಸಮೇತರಾಗಿ ಹೊರಬಂದು ನಿಂತಿದ್ದೆವು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ ನಂತರ ನಿಟ್ಟುಸಿರು ಬಿಡುವಂತಾಯಿತು~ ಎಂದು ಕೃಷ್ಣಪ್ಪ ಲೇಔಟ್ ನಿವಾಸಿ ಮಂಗಳಾ ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.