ಭಾನುವಾರ, ಡಿಸೆಂಬರ್ 15, 2019
26 °C

ನಗರದಲ್ಲಿ ಚಂದು ಬೋರ್ಡೆ ಕ್ರಿಕೆಟ್ ಅಕಾಡೆಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದಲ್ಲಿ ಚಂದು ಬೋರ್ಡೆ ಕ್ರಿಕೆಟ್ ಅಕಾಡೆಮಿ

ಗ್ಲೋಬಲ್ ಇಂಡಿಯನ್ ಇಂಟರ್‌ನ್ಯಾಷನಲ್‌ ಸ್ಕೂಲ್ (ಜಿಐಐಎಸ್)ನಲ್ಲಿ ಚಂದು ಬೋರ್ಡೆ ಗ್ಲೋಬಲ್ ಕ್ರಿಕೆಟ್ ಅಕಾಡೆಮಿಯ (ಸಿಬಿಜಿಸಿಎ) ನೂತನ ಪಿಚ್ ಅನ್ನು ಹಿರಿಯ ಕ್ರಿಕೆಟಿಗ ಚಂದು ಬೋರ್ಡೆ ಹಾಗೂ ಅನಿಲ್‌ ಕುಂಬ್ಳೆ ಉದ್ಘಾಟಿಸಿದರು. ಇದರ ಅಂಗವಾಗಿ ಕ್ರಿಕೆಟ್ ಪಂದ್ಯವನ್ನು ಏರ್ಪಡಿಸಲಾಗಿತ್ತು.‘ನಮ್ಮಲ್ಲಿ ಅತ್ಯುತ್ತಮ ಕೋಚ್‌ಗಳಿದ್ದಾರೆ. ಉತ್ತಮ ತರಬೇತಿ ನೀಡಿ ಅಭ್ಯಾಸ ಪಂದ್ಯಗಳನ್ನು ಆಡಿಸಲಿದ್ದೇವೆ. ಸ್ವತಃ ನಾನೂ ಕೂಡಾ ನಿಗದಿತವಾಗಿ ಇಲ್ಲಿಗೆ ಭೇಟಿ ನೀಡಿ, ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಲಿದ್ದೇನೆ. ಇಲ್ಲಿ ತರಬೇತಿ ಪಡೆದ ಮಕ್ಕಳು ಮುಂದಿನ ದಿನಗಳಲ್ಲಿ ಕ್ರಿಕೆಟಿಗರಾಗಿ ಹೆಸರುವಾಸಿಯಾಗುವುದನ್ನು ಕಾಣುವುದಕ್ಕೆ ಉತ್ಸುಕನಾಗಿದ್ದೇನೆ’ ಎಂದು ಬೋರ್ಡೆ ಅವರು ನೂತನ ಪಿಚ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.‘ಕ್ರಿಕೆಟ್ ಆಡಬೇಕೆಂದು ಬಯಸಿ ಈ ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಮಕ್ಕಳಿಗೆ ಈ ಹಂತದಲ್ಲೇ ತೀವ್ರ ತರಬೇತಿಯ ಅಗತ್ಯವಿದೆ. ಕಠಿಣ ತರಬೇತಿ ನೀಡುವುದರ ಜೊತೆಗೆ ಪ್ರಾರಂಭಿಕ ಹಂತದಲ್ಲೇ ಸರಿಯಾದ ಬುನಾದಿ ಹಾಕಬೇಕಾಗುತ್ತದೆ. ಇದರ ಮೊದಲ ಹಂತವೇ ಬದ್ಧತೆ ಮತ್ತು ಉತ್ತಮ ಆಟವಾಡುವ ಅಚಲ ನಿರ್ಧಾರ.

ಇದಕ್ಕಾಗಿ ವಿದ್ಯಾರ್ಥಿಗಳು ಸೂಕ್ತ ದೈಹಿಕ ಸಾಮರ್ಥ್ಯವನ್ನು ಹೊಂದಿರಬೇಕು. ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಶಿಸ್ತುಬದ್ಧ ಜೀವನ ಶೈಲಿಯನ್ನು ಹೊಂದಿರಬೇಕು’ ಎಂದು ಅನಿಲ್‌ ಕುಂಬ್ಳೆ ಕಿವಿ ಮಾತು ಹೇಳಿದರು. ಅಕಾಡೆಮಿಯ ಪಿಚ್ ಉದ್ಘಾಟನೆ ಸಂಭ್ರಮಕ್ಕಾಗಿ ಜಿಐಐಎಸ್‌ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರ ತಂಡಗಳ ನಡುವೆ ಸೌಹಾರ್ದ ಕ್ರಿಕೆಟ್‌ ಪಂದ್ಯ ಆಯೋಜಿಸಲಾಗಿತ್ತು.

ಪ್ರತಿಕ್ರಿಯಿಸಿ (+)