ನಗರದಲ್ಲಿ ತುಂತುರು ಮಳೆ

7

ನಗರದಲ್ಲಿ ತುಂತುರು ಮಳೆ

Published:
Updated:
ನಗರದಲ್ಲಿ ತುಂತುರು ಮಳೆ

ಬೆಂಗಳೂರು:  ಸಂಜೆಯಾಗುತ್ತಿದ್ದಂತೆ ಹೆಚ್ಚಿದ ಚುಮುಚುಮು ಚಳಿಗೆ, ಹನಿ ಮಳೆಯು ಜತೆಗೂಡಿದ್ದರಿಂದ ನಗರದಲ್ಲಿ ಶನಿವಾರ ತಂಪುಹವೆಯ ವಾತಾವರಣ ಕಂಡುಬಂತು. ಬೆಳಿಗ್ಗೆಯಿಂದಲೇ ಬಿಸಿಲ ಬೇಗೆ ಕಡಿಮೆಯಾಗಿ ಅಲ್ಲಲ್ಲಿ ದಟ್ಟ ಮೋಡ ಆವರಿಸಿತ್ತು.ಅನಿರೀಕ್ಷಿತ ಮಳೆಯಿಂದ ವಾರಾಂತ್ಯದ ಮೋಜಿಗೆ ಸ್ವಲ್ಪ ಕಡಿವಾಣ ಬಿದ್ದಂತೆ ಅನಿಸಿದರೂ ತುಂತುರು ಮಳೆಯ ಸಿಂಚನಕ್ಕೆ ಜನತೆ ಮಾರುಹೋದರು. ಎಂ.ಜಿ.ರಸ್ತೆ, ಬ್ರಿಗೇಡ್, ಕಬ್ಬನ್ ಉದ್ಯಾನ, ಕರ್ಮಷಿಯಲ್ ಸ್ಟ್ರೀಟ್‌ಗಳಲ್ಲಿ ಎಂದಿನಂತೆ ಜನದಟ್ಟಣೆಯಿತ್ತು. ಮಳೆಯಿಂದಾಗಿ ಜೆ.ಸಿ ರಸ್ತೆ, ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಕಸ್ತೂರ ಬಾ ರಸ್ತೆ, ಕೆಂಪೇಗೌಡ ರಸ್ತೆ, ಧನ್ವಂತ್ರಿ ರಸ್ತೆ, ಕೆಂಗಲ್ ಹನುಮಂತಯ್ಯ ರಸ್ತೆ, ರೆಸಿಡೆನ್ಸಿ ರಸ್ತೆ, ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಸ್ವಲ್ಪಮಟ್ಟಿಗೆ ಪರದಾಡುವಂತಾಯಿತು.ನಗರದಲ್ಲಿ ಗರಿಷ್ಠ 0.7 ಮಿ.ಮೀ. ಮಳೆಯಾಗಿದ್ದು, ವಿಮಾನ ನಿಲ್ದಾಣದಲ್ಲಿ 1.1 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.`ತುಂತುರು ಮಳೆಯಾಗುವುದು ಚಳಿಗಾಲದ ಒಂದು ಭಾಗ. ಬಂಗಾಳ ಕೊಲ್ಲಿಯಿಂದ ಗಾಳಿಯೂ ತೀವ್ರವಾಗಿ ಬೀಸುತ್ತಿರುವುದಿಂದ  ಈ ಭಾಗದಲ್ಲಿ ಮಳೆಯಾಗಿದೆ. ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಯಿದೆ' ಎಂದು ಕೃಷಿ ಹವಾಮಾನ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಬಿ.ರಾಜೇಗೌಡ ತಿಳಿಸಿದರು.`ಮೋಡಗಳು ಸಾಂದ್ರಗೊಂಡು ಮಳೆ ಸುರಿದಾಗ ಚಳಿಯ ಪ್ರಮಾಣ ಕಡಿಮೆಯಾಗಲಿದೆ. ಶುಭ್ರ ನೀಲಿ ಆಗಸವಿದ್ದಾಗ ಮಾತ್ರ ಚಳಿಯ ತೀವ್ರತೆ ಹೆಚ್ಚಿರುತ್ತದೆ' ಎಂದು ಹೇಳಿದರು.ಕೆಲವು ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನರು ತೀವ್ರ  ತೊಂದರೆ ಅನುಭವಿಸುವಂತಾಯಿತು. ಉಳಿದಂತೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry