ನಗರದಲ್ಲಿ ಪಾರಂಪರಿಕ ನಡಿಗೆ

7

ನಗರದಲ್ಲಿ ಪಾರಂಪರಿಕ ನಡಿಗೆ

Published:
Updated:

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಗುರುವಾರ ಮುಂಜಾನೆಯ ಹೊಂಬಿಸಿಲಿನಲ್ಲಿ ಗಣ್ಯರು, ವಿವಿಧ ಸಂಘಟನೆಯ ಪ್ರಮುಖರು ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾರಂಪರಿಕ ನಡಿಗೆ ಹೊರಟರು. ಪುರಭವನದಿಂದ ಪಾರಂಪರಿಕ ನಡಿಗೆ ಆರಂಭವಾಯಿತು.ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದರು. ಪುರಭವನದಿಂದ ನಡಿಗೆ ಆರಂಭವಾಗಿ ಸಿಲ್ವರ್ ಜ್ಯೂಬಿಲಿ ಗಡಿಯಾರ, ಫ್ರೀ ಮೇಸನ್ಸ್ ಕ್ಲಬ್, ಚಾಮರಾಜ ಒಡೆಯರ್ ವೃತ್ತ, ಕೆ.ಆರ್.ವೃತ್ತ, ದೇವರಾಜ ಮಾರುಕಟ್ಟೆ, ಕೃಷ್ಣರಾಜೇಂದ್ರ ಆಸ್ಪತ್ರೆ, ಮೈಸೂರು ವೈದ್ಯಕೀಯ ಕಾಲೇಜು, ಆಯುರ್ವೇದ ಆಸ್ಪತ್ರೆ ಹಾದು ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯಲ್ಲಿ ಕೊನೆಗೊಂಡಿತು.`ಸಾಂಸ್ಕೃತಿಕ ನಗರಿ ಮೈಸೂರನ್ನು ಪಾರಂಪರಿಕ ನಗರಿ ಎಂದೂ ಕರೆಯಲಾಗುತ್ತದೆ. ಶತಮಾನ ದಾಟಿದ ಐತಿಹಾಸಿಕ ಕಟ್ಟಡಗಳು ನಮ್ಮಲ್ಲಿವೆ. ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಶ್ರಮಿಸುತ್ತಿದೆ. ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಎಲ್ಲರ ಮೇಲೆ ಇದೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ತಿಳಿಸಿದರು.ಮಹಾನಗರಪಾಲಿಕೆ ಆಯುಕ್ತ ಡಾ.ಎಂ.ಆರ್. ರವಿ, ಪ್ರೊ.ಆರ್.ರಂಗರಾಜು, ಮೇಯರ್ ಎಂ.ಸಿ.ರಾಜೇಶ್ವರಿ, ಉಪ ಮೇಯರ್ ಮಹದೇವಪ್ಪ, ಪಾಲಿಕೆ ಸದಸ್ಯ ಶ್ರೀಕಂಠಯ್ಯ ನಡಿಗೆಯಲ್ಲಿ ಭಾಗವಹಿಸಿದ್ದರು.ಜಿಎಸ್‌ಎಸ್‌ಎಸ್ ಕಾಲೇಜು ವಿದ್ಯಾರ್ಥಿನಿಯರು ಬಿಳಿ ಬಣ್ಣದ ಟೀ ಶರ್ಟ್‌ಗಳನ್ನು ಧರಿಸಿ, ನಡಿಗೆಯಲ್ಲಿ ಗಮನ ಸೆಳೆದರು. ಕೆ.ಆರ್.ವೃತ್ತದಲ್ಲಿ ರಾಮದಾಸ್ ಅವರೊಂದಿಗೆ ಫೋಟೊ ತೆಗೆಸಿಕೊಂಡು ಸಂತಸಪಟ್ಟರು. ಪತ್ರಕರ್ತ ಈಚನೂರು ಕುಮಾರ್ ಅವರು ಪಾರಂಪರಿಕ ಕಟ್ಟಡಗಳ ಬಗ್ಗೆ ಮೈಕ್‌ನಲ್ಲಿ ವಿವರಣೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry