ಮಂಗಳವಾರ, ನವೆಂಬರ್ 19, 2019
27 °C
ಮುಕ್ತ ಚುನಾವಣೆ ನಡೆಸುವ ಹಿನ್ನೆಲೆ, ಸೂಕ್ಷ್ಮ ಪ್ರದೇಶಗಳಲ್ಲಿ ಯೋಧರ ನಡಿಗೆ

ನಗರದಲ್ಲಿ ಪೊಲೀಸರ ಪಥ ಸಂಚಲನ

Published:
Updated:

ದಾವಣಗೆರೆ: ನಗರದ ರಸ್ತೆಗಳು ಶುಕ್ರವಾರ ಸಂಜೆ ಎಂದಿನಂತೆ ಇರಲಿಲ್ಲ. ರಸ್ತೆಯಲ್ಲಿ ಸ್ಥಳೀಯ ಪೊಲೀಸರ ಹಾಗೂ ಕೇಂದ್ರ ಅರೆಸೇನಾ ಪಡೆ ಯೋಧರ ಬೂಟಿನ ಸದ್ದು ಕೇಳಿ ಬರುತ್ತಿತ್ತು. ಶಿಸ್ತಿನಿಂದ ಹೊರಟಿದ್ದ ಅವರ ನಡಿಗೆ ನೋಡಲು ಮನೆಯಲ್ಲಿ ಇದ್ದವರು ಹೊರಬಂದು ಇಣುಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು!ನಿರ್ಭೀತ ಹಾಗೂ ಮುಕ್ತ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಕೇಂದ್ರ ಅರೆಸೇನಾ ಪಡೆಯ ಯೋಧರು ಹಾಗೂ ಸ್ಥಳೀಯ ಪೊಲೀಸರು ನಗರದ ಪ್ರಮುಖ ರಸ್ತೆ, ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದರು.ಬಡಾವಣೆ ಪೊಲೀಸ್ ಠಾಣೆಯಿಂದ ಆರಂಭವಾದ ಪಥ ಸಂಚಲನ ಅರುಣಾ ಚಿತ್ರಮಂದಿರ, ವಿನೋಬನಗರದ 2ನೇ ಮುಖ್ಯರಸ್ತೆ, ಸಿಜಿ ಆಸ್ಪತ್ರೆ, ರಾಮ್ ಆ್ಯಂಡ್ ಕೋ ವೃತ್ತ, ಹದಡಿ ರಸ್ತೆ, ಗ್ರಾಮೀಣ ಪೊಲೀಸ್ ಠಾಣೆ, ನಿಟುವಳ್ಳಿ, ಕೆಟಿಜೆ ನಗರ, ಭಗತ್‌ಸಿಂಗ್ ನಗರ, ಜಯದೇವ ವೃತ್ತದಲ್ಲಿ ಮುಕ್ತಾಯಗೊಂಡಿತು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಚವಾಣ್, ಡಿವೈಎಸ್ಪಿ ಶಿವಕುಮಾರ್ ಗುಣಾರೆ, ಸಿಪಿಐ ಚಂದ್ರಹಾಸ್ ಲಕ್ಷ್ಮಣನಾಯ್ಕ, ಬಿಎಸ್‌ಎಫ್ ಹಾಗೂ ಸಿಆರ್‌ಪಿಎಫ್ ಯೋಧರು ಪಾಲ್ಗೊಂಡಿದ್ದರು.

ಶಿವಶಂಕರಪ್ಪ ಬೆಂಬಲಿಸಿ ನಾಮಪತ್ರ ವಾಪಸ್

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಅವರನ್ನು ಬೆಂಬಲಿಸಿ ನಾಮಪತ್ರ ವಾಪಸ್ ಪಡೆದಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಸಾಂ.ಹಿ ಉಮಾಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮತದಾನ ಜಾಗೃತಿಗೆ ರಂಗೋಲಿ ಸ್ಪರ್ಧೆ

ಜಿಲ್ಲಾಡಳಿತದ ವತಿಯಿಂದ ಮತದಾರರಲ್ಲಿಜಾಗೃತಿ ಮೂಡಿಸಲು ನಗರದ ವಿವಿಧ ವಾರ್ಡ್‌ಗಳ ಶಾಲಾ ಆವರಣದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ.ಡಾನ್‌ಬಾಸ್ಕೋ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ, ಮಿಲ್ಲತ್ ವಿದ್ಯಾಸಂಸ್ಥೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುರುಬರಕೇರಿ, ಮುದೇಗೌಡರ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಭಾರತ್ ಕಾಲೊನಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿನೋಬನಗರ, ವನಿತಾ ಸಮಾಜ, ದಾವಣಗೆರೆ, ಗುರುಭವನ, ಕುವೆಂಪು ಕನ್ನಡ ಭವನ, ವಿದ್ಯಾನಗರ, ದಾವಣಗೆರೆ ಈ ಸ್ಥಳಗಳಲ್ಲಿ ಏರ್ಪಡಿಸಲಾಗಿದೆ.ಆಸಕ್ತರು ಏ. 28ರ ಒಳಗೆ ಸಂಪರ್ಕಿಸಬೇಕಾದ ವಿಳಾಸ: ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ. ದೂರವಾಣಿ: 08192-264056 ಹಾಗೂ 94496 49644.

ಪ್ರತಿಕ್ರಿಯಿಸಿ (+)