ಬುಧವಾರ, ನವೆಂಬರ್ 20, 2019
24 °C

ನಗರದಲ್ಲಿ ಬಿಗಿ ಭದ್ರತೆಗೆ ಸೂಚನೆ

Published:
Updated:
ನಗರದಲ್ಲಿ ಬಿಗಿ ಭದ್ರತೆಗೆ ಸೂಚನೆ

ಬೆಂಗಳೂರು: ಮಲ್ಲೇಶ್ವರ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಮತ್ತು ಖಾಸಗಿ ಕಂಪೆನಿಗಳಲ್ಲಿ ಭದ್ರತೆ ಹೆಚ್ಚಿಸುವ ಸಂಬಂಧ ನಗರ ಪೊಲೀಸರು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ಸಾಫ್ಟ್‌ವೇರ್ ಕಂಪೆನಿಗಳ ಪ್ರತಿನಿಧಿಗಳೊಂದಿಗೆ ಶನಿವಾರ ಸಭೆ ನಡೆಸಿ ಕೆಲ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ.ಕೆಂಪೇಗೌಡ ಬಸ್ ನಿಲ್ದಾಣ, ಮೆಜೆಸ್ಟಿಕ್, ಸಿಟಿ ಮಾರುಕಟ್ಟೆ ಸೇರಿದಂತೆ ನಗರದ ವಿವಿಧೆಡೆ ಇರುವ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಭದ್ರತೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು. ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು.ಸಾಫ್ಟ್‌ವೇರ್ ಕಂಪೆನಿಗಳ ಬಳಿ ಭದ್ರತೆ ಹೆಚ್ಚಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಸಭೆಯಲ್ಲಿ ಅಧಿಕಾರಿಗಳಿಗೆ ಹಾಗೂ ಕಂಪೆನಿಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿದ್ದಾರೆ. `ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ಭದ್ರತೆ ಹಾಗೂ ವಿಚಕ್ಷಣೆ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲಾಯಿತು. ನಿಲ್ದಾಣಕ್ಕೆ ಬರುವ ಪ್ರತಿ ವ್ಯಕ್ತಿಯನ್ನು ಹಾಗೂ ಅವರ ಬ್ಯಾಗ್‌ಗಳನ್ನು ತಪಾಸಣೆ ಮಾಡಬೇಕು.ಸಾಫ್ಟ್‌ವೇರ್ ಕಂಪೆನಿಗಳ ಬಳಿ ಹೆಚ್ಚಿನ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ' ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ (ಪ್ರಭಾರ) ಡಾ.ಎಂ.ಎ.ಸಲೀಂ `ಪ್ರಜಾವಾಣಿ'ಗೆ ತಿಳಿಸಿದರು. ಶಿವಾಜಿನಗರದ ಬಿಎಂಟಿಸಿ ಬಸ್ ನಿಲ್ದಾಣ ಹೊರತುಪಡಿಸಿ ನಗರದ ಇತರೆ ಯಾವುದೇ ಬಸ್ ನಿಲ್ದಾಣಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿಲ್ಲ.ಬಹುತೇಕ ಬಸ್ ನಿಲ್ದಾಣಗಳಲ್ಲಿ ಲೋಹ ಶೋಧಕಗಳಿಲ್ಲ. ಆದ್ದರಿಂದ ಬಸ್ ನಿಲ್ದಾಣಗಳಲ್ಲಿ ಶೀಘ್ರವೇ ಸಿ.ಸಿ ಟಿ.ವಿ ಕ್ಯಾಮೆರಾ ಮತ್ತು ಲೋಹ ಶೋಧಕಗಳನ್ನು ಅಳವಡಿಸುವಂತೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಗೆ ಸೂಚಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.ಕ್ರಿಕೆಟ್ ಪಂದ್ಯಕ್ಕೆ ಹೆಚ್ಚಿನ ಭದ್ರತೆ: `ಮಲ್ಲೇಶ್ವರ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸ್ಫೋಟಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 700 ಮಂದಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುತ್ತಿತ್ತು.ಇದೀಗ ಈ ಸಂಖ್ಯೆಯನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ.   ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ 1,200 ಮಂದಿ ಹಾಗೂ ಸಂಚಾರ ವಿಭಾಗದ 450 ಮಂದಿ ಸಿಬ್ಬಂದಿ ಕ್ರೀಡಾಂಗಣದ ಭದ್ರತೆಗೆ ನಿಯೋಜಿಸಲಾಗಿದೆ. ಅರೆಸೇನಾ ಪಡೆಯ ಐದು ಕಂಪೆನಿಗಳು, ಪೌರರಕ್ಷಣೆ ಹಾಗೂ ಗೃಹರಕ್ಷಕ ದಳವನ್ನು ಭದ್ರತೆಗೆ ಬಳಸಿಕೊಳ್ಳಲಾಗಿದೆ' ಎಂದು ಸಲೀಂ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)