ನಗರದಲ್ಲಿ ಬ್ಯಾಂಕ್ ನೌಕರರ ಪ್ರತಿಭಟನೆ

7
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಸೂದೆಗೆ ವಿರೋಧ

ನಗರದಲ್ಲಿ ಬ್ಯಾಂಕ್ ನೌಕರರ ಪ್ರತಿಭಟನೆ

Published:
Updated:
ನಗರದಲ್ಲಿ ಬ್ಯಾಂಕ್ ನೌಕರರ ಪ್ರತಿಭಟನೆ

ದಾವಣಗೆರೆ: ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಬ್ಯಾಂಕ್ ಅಧಿಕಾರಿಗಳ ಸಂಘದ ಕರೆಯ ಮೇರೆಗೆ ನಗರದಲ್ಲಿ ಗುರುವಾರ ಬ್ಯಾಂಕ್ ಉದ್ಯೋಗಿಗಳು ಮುಷ್ಕರ ನಡೆಸಿದರು.ನಗರದ ಮಂಡಿಪೇಟೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮುಂಭಾಗ ಸೇರಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಹಾಗೂ ಜನವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ ಮಾತನಾಡಿ, ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ದುರ್ಬಲಗೊಳಿಸುವ  `ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ಯಾವುದೇ ತಿದ್ದುಪಡಿ ತರಬಾರದು.

ಈ ಬಗ್ಗೆ ಕಳೆದ 18 ತಿಂಗಳಿನಿಂದ ಬ್ಯಾಂಕ್ ನೌಕರರ ಸಂಘ ನಿರಂತರ ಹೋರಾಟ ಮಾಡುತ್ತಲೇ ಬಂದಿದೆ. ಸಾಕಷ್ಟು ಬಾರಿ ಅಖಿಲಭಾರತ ಮಟ್ಟದಲ್ಲಿ ಬ್ಯಾಂಕ್ ಮುಷ್ಕರವನ್ನೂ ನಡೆಸಲಾಗಿತ್ತು. ಆದರೆ, ದೇಸಿ ಸೇರಿದಂತೆ ವಿದೇಶಿ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ಕಳೆದ ಡಿ. 18ರಂದು ಕಾಯ್ದೆ ತಿದ್ದುಪಡಿಗೆ ಲೋಕಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ತಾವು ಇದನ್ನು ಪ್ರಬಲವಾಗಿ ವಿರೋಧಿಸುವುದಾಗಿ ಹೇಳಿದರು.ಬ್ಯಾಂಕ್‌ಗಳ ವಿಲೀನ, ಖಾಸಗಿ ಕಂಪೆನಿಗಳಿಗೆ ಬ್ಯಾಂಕ್ ತೆರೆಯಲು ಅವಕಾಶ, ಕಾರ್ಪೊರೇಟ್ ಸುಸ್ತಿದಾರರಿಗೆ ರಕ್ಷಣೆ, ಖಾಸಗಿ ಬ್ಯಾಂಕ್‌ಗಳಲ್ಲಿ ಬಂಡವಾಳಶಾಹಿಗಳಿಗೆ ಮತದಾನದ ಹಕ್ಕಿನ ಮಿತಿಯನ್ನು ಶೇ 10ರಿಂದ 26ಕ್ಕೆ ಏರಿಸುವುದು, ರಿಸರ್ವ್ ಬ್ಯಾಂಕ್‌ಗೆ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಸೂಪರ್‌ಸೀಡ್ ಮಾಡಲು ಅವಕಾಶ, ಮೊದಲಾದ ಗಂಭೀರ ವಿಷಯಗಳನ್ನು ಈ ಹೊಸ ತಿದ್ದುಪಡಿಯಲ್ಲಿ ಸೇರಿಸಲಾಗಿದೆ. ಇದು ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಧಃಪತನದತ್ತ ಕೊಂಡೊಯ್ಯಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಜಿತ್ ಕುಮಾರ್ ನ್ಯಾಮತಿ, ಎಂ.ಎಚ್. ಮಂಜುನಾಥರಾವ್, ದತ್ತಾತ್ರೇಯ ಮೇಲಗಿರಿ, ಮಹಾಲಿಂಗಪ್ಪ, ರಂಗಸ್ವಾಮಿ, ಎಸ್.ಟಿ. ಶಾಂತಗಂಗಾಧರ, ಸುಜಯಾ ನಾಯಕ್, ಅನುರಾಧಾ ಮುತಾಲಿಕ್, ರೂಪಾರೆಡ್ಡಿ, ಪ್ರೇಮಲತಾ ಬಸವರಾಜ್, ವಿಶ್ವನಾಥ ಬಿಲ್ಲವ, ನರೇಂದ್ರಕುಮಾರ್ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry