ನಗರದಲ್ಲಿ ಮೊಬೈಲ್ ಟವರ್‌ಗೆ ಕಡಿವಾಣ

7

ನಗರದಲ್ಲಿ ಮೊಬೈಲ್ ಟವರ್‌ಗೆ ಕಡಿವಾಣ

Published:
Updated:

ಬೆಂಗಳೂರು:  ನಗರದಲ್ಲಿ ನಿಯಮ ಬಾಹಿರ ಮೊಬೈಲ್ ಟವರ್‌ಗಳಿಗೆ ಕಡಿವಾಣ ಹಾಕಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ರಾಜ್ಯ ಪರಿಸರ ಇಲಾಖೆ ಮುಂದಾಗಿವೆ.ನಗರದಲ್ಲಿ ಸಾವಿರಾರು ಮೊಬೈಲ್ ಟವರ್‌ಗಳನ್ನು ನಿಯಮ ಬಾಹಿರವಾಗಿ ಸ್ಥಾಪನೆ ಮಾಡಲಾಗಿದೆ. 1984ರ ಬಿಡಿಎ ನಿವೇಶನ ಹಂಚಿಕೆ ನಿಯಮಾವಳಿಗಳ ಪ್ರಕಾರ ಭೂಪರಿವರ್ತನೆ ಮಾಡಿಸದೇ ಮತ್ತು ಬಿಡಿಎ ಅನುಮತಿ ಇಲ್ಲದೇ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವಂತಿಲ್ಲ. ಆದರೆ ನಗರದಲ್ಲಿ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ಮೊಬೈಲ್ ಟವರ್‌ಗಳನ್ನು ಸ್ಥಾಪನೆ ಮಾಡಲಾಗಿದ್ದು, ಇದರ ವಿರುದ್ಧ ಬಿಡಿಎ ಕ್ರಮ ಕೈಗೊಳ್ಳಬೇಕು ಎಂದು ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆಯ ಅಧ್ಯಕ್ಷ ಬಿ.ಎಂ.ಶಿವಕುಮಾರ್ ಇತ್ತೀಚೆಗೆ ಬಿಡಿಎಗೆ ದೂರು ನೀಡಿದ್ದರು.ಜನವಸತಿ ಪ್ರದೇಶಗಳಲ್ಲಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿರುವುದರಿಂದ ಅವುಗಳು ಹೊರ ಸೂಸುವ ವಿಕಿರಣಗಳು ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಈ ವಿಕಿರಣಗಳಿಂದ ಜನಗಳೂ ಸೇರಿದಂತೆ ಪ್ರಾಣಿ-ಪಕ್ಷಿಗಳ ಆರೋಗ್ಯದ ಮೇಲೆ ಪ್ರತೀಕೂಲ ಪರಿಣಾಮ ಉಂಟಾಗುತ್ತಿದೆ. ಅಲ್ಲದೇ ಮೂರರಿಂಧ ಹತ್ತು ಟನ್ ತೂಕದವರೆಗಿನ ಮೊಬೈಲ್ ಟವರ್‌ಗಳನ್ನು ಕಟ್ಟಡಗಳ ಮೇಲ್ಭಾಗದಲ್ಲಿ ಸ್ಥಾಪಿಸುವುದರಿಂದ ಅಕ್ಕಪಕ್ಕದ ಜನರು ಸದಾ ಭೀತಿಯಲ್ಲಿ ಬದುಕುವಂಥ ಪರಿಸ್ಥಿತಿ ಇದೆ. ಹೀಗಾಗಿ ಮೊಬೈಲ್ ಟವರ್‌ಗಳಿಗೆ ಕಡಿವಾಣ ಹಾಕಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳಲು ಬಿಡಿಎ ಆಯುಕ್ತರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಮೊಬೈಲ್ ಟವರ್‌ಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಜ್ಞರ ಸಭೆ ನಡೆಸಿ ಅಗತ್ಯ ಕಾನೂನು ರಚಿಸುವಂತೆ ಜೀವಿಶಾಸ್ತ್ರ, ಪರಿಸರ, ಯೋಜನೆ ಮತ್ತು ಸಾಂಖ್ಯಿಕ ಸಚಿವ ಎಸ್.ಶಿವಣ್ಣ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.ಆರೋಗ್ಯ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ದೂರಸಂಪರ್ಕ ಇಲಾಖೆ, ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳ ಸಭೆ ನಡೆಸಿ, ಮೊಬೈಲ್ ಟವರ್‌ಗಳ ಸ್ಥಾಪನೆಯ ಬಗ್ಗೆ ಸರಿಯಾದ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry